SUDDIKSHANA KANNADA NEWS/ DAVANAGERE/ DATE:09-04-2025
ದಾವಣಗೆರೆ: ಪತ್ನಿ ಜೊತೆ ಪರಪುರುಷನ ನೋಡಿದ ಪತಿಯು ಆಕೆ ಪ್ರಿಯಕರನನ್ನು ಕೊಂದ ಘಟನೆ ನಡೆದಿದ್ದು, ಕೊಲೆ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನದಲ್ಲಿ ತಾರಾ ಹೆಸರಿನ ಶ್ವಾನ ಪ್ರಮುಖ ಪಾತ್ರ ವಹಿಸಿದೆ.
ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದ ಚೌಡಪ್ಪರ ಪುತ್ರ ಶಿವಕುಮಾರ್ (28) ಕೊಲೆಗೀಡಾದ ವ್ಯಕ್ತಿ. ಜಯ್ಯಪ್ಪ ಹತ್ಯೆ ಮಾಡಿದ ಆರೋಪಿ.
ಘಟನೆ ಹಿನ್ನೆಲೆ ಏನು…?
ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದ ಚೌಡಪ್ಪರಿಗೆ ನಾಲ್ವರು ಮಕ್ಕಳು. ಇದರಲ್ಲಿ ಹೆಣ್ಣು ಮಗಳಿದ್ದು ಮೂವರು ಗಂಡು ಮಕ್ಕಳು. ಶಿವುಕುಮಾರ ನಾಲ್ಕನೆಯವನು. ಈತನಿಗೆ 28ವರ್ಷವಾಗಿದ್ದರೂ ಮದುವೆ ಆಗಿರಲಿಲ್ಲ.
ತಂದೆ ನಿಧನ ನಂತರ ತಮ್ಮ ಆಂಧ್ರದ ನಲ್ಲೂರು ಬಳಿ ಬೇಕರಿ ಕೆಲಸಕ್ಕೆ ಹೋಗುತ್ತಿದ್ದು, 3 ತಿಂಗಳಿಗೊಮ್ಮೆ ರಜೆ ಹಾಕಿ ಬರುತ್ತಿದ್ದ. ಒಂದು ತಿಂಗಳ ಹಿಂದೆ ರಜೆ ಹಾಕಿ ಊರಿಗೆ ಬಂದು ಊರಲ್ಲೇ ಇದ್ದ. ಏಪ್ರಿಲ್ 4ರಂದು ರಾತ್ರಿ 7.20ಕ್ಕೆ ಅವನ ಸ್ನೇಹಿತ ರಮೇಶ, ಅಜ್ಜಯ್ಯನೊಂದಿಗೆ ದಾವಣಗೆರೆ ತಾಲ್ಲೂಕಿನ ಹೊನ್ನೂರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ. ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಆದ್ರೆ, ಮಾರನೇ ದಿನ ಹೊನ್ನೂರಿನ ಜಮೀನೊಂದರಲ್ಲಿ ಶಿವಕುಮಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂಬ ಮಾಹಿತಿ ಬಂತು. ಆಗ ಆತನ ಮೈಮೇಲೆ ಅಲ್ಲಲ್ಲಿ ಗಾಯಗಳಾಗಿದ್ದವು. ತಲೆಯಲ್ಲಿ ರಕ್ತಸ್ರಾವವಾಗಿತ್ತು. ಮೈಮೇಲೆ ಪ್ಯಾಂಟ್ ಮಾತ್ರ ಇತ್ತು.
ಆಗ ಮೃತನ ಅಣ್ಣನು ರಮೇಶ್ ಎಂಬಾತನನ್ನು ವಿಚಾರ ಮಾಡಿದ್ದಾರೆ. ಆಗ ನಾವು ಶಿವುಕುಮಾರನೊಂದಿಗೆ ಬೈಕಿನಲ್ಲಿ ರಾತ್ರಿ 8. 30ಕ್ಕೆ ಹೊನ್ನೂರಿಗೆ ಬಂದಿದ್ದೆವು. ಆಗ ಶಿವುಕುಮಾರನು ಪರಿಮಳ ನನಗೆ ಬರಲು ಹೇಳಿದ್ದಾಳೆ. ನೀವು ಬೈಕ್ ಇಲ್ಲೇ ನಿಲ್ಲಿಸಿ ಎಂದು ಹೇಳಿದ್ದಕ್ಕೆ ನಾನು ಊರ ಹತ್ತಿರದ ಹೊಲದ ಬಳಿ ಅವನನ್ನು ಬಿಟ್ಟು ನಾವು ನಮ್ಮ ಅತ್ತೆ ಮನೆಗೆ ಹೋದೆವು. ರಾತ್ರಿ 9.10ಕ್ಕೆ ಶಿವುಕುಮಾರ ನನಗೆ ಫೋನ್ ಮಾಡಿ ಕರೆದು ನಮಗೆ 200ರೂಪಾಯಿ ಕೊಟ್ಟು ಬಿಯರ್ ತಗೊಂಡು ನೀವು ಊಟ ಮಾಡಿ ಬನ್ನಿ ಎಂದು ಹೇಳಿ ಕಳುಹಿಸಿದ.
ಆಗ ಶಿವು ಒಬ್ಬನೆ ಇದ್ದನು. ನಾವು ಡ್ರಿಂಕ್ಸ್ ತರಲು ಹೋದೆವು. ಎಲ್ಲಾ ಕಡೆ ಹುಡುಕಾಡಿದರೂ ಡ್ರಿಂಕ್ಸ್ ಸಿಗದೇ ಇದ್ದುದ್ದರಿಂದ ವಾಪಾಸ್ ರಾತ್ರಿ 10 ಗಂಟೆ ಸುಮಾರಿಗೆ ಶಿವು ಇರುವ ಜಾಗಕ್ಕೆ ಬಂದಾಗ ಶಿವು ಅಲ್ಲಿ ಇರಲಿಲ್ಲ. ನಾವು ಫೋನ್ ಮಾಡಿದಾಗ
ಸ್ವಿಚ್ ಆಫ್ ಆಗಿತ್ತು. ಇನ್ನೊಂದು ನಂಬರ್ ಗೆ ಫೋನ್ ಮಾಡಿದಾಗ ಪರಿಮಳ ರಿಸೀವ್ ಮಾಡಿ ನಾನು ಮನೆ ಹತ್ತಿರ ಇದೇನೆ ಎಂದಾಗ ನಾವು ಅವರ ಮನೆ ಹತ್ತಿರ ಹೋದೆವು. ಆಗ ಪರಿಮಳ ನಾನು ಶಿವು ಮಾತನಾಡುತ್ತಿದ್ದಾಗ ನನ್ನ ಗಂಡನಿಗೆ ಸಿಕ್ಕುಬಿದ್ದೆವು. ಆಗ ನನ್ನ ಗಂಡ ಬಂದು ಶಿವುಗೆ ಎರಡು ಏಟು ಹೊಡೆದ. ಶಿವು ಹೊಲದ ಕಡೆಗೆ ಓಡಿಹೋದ. ನನ್ನ ಗಂಡ ಹಿಂದೆ ಹೋದ ಎಂದು ತಿಳಿಸಿದ್ದಾಳೆ.
ನಾವು ಎಲ್ಲಾ ಕಡೆಗೆ ಹುಡುಕಾಡಿದರೂ ಶಿವು ಸಿಗಲಿಲ್ಲ. ವಾಪಸ್ ಊರಿಗೆ ಹೋಗಿರಬಹುದೇಂದು ನಾವು ಊರಿಗೆ ಬಂದೆವು ಎಂದು ತಿಳಿಸಿದ್ದಾನೆ. ನನ್ನ ತಮ್ಮನ ಮೈಮೇಲೆ ಇರುವ ಗಾಯಗಳು ನೋಡಿದರೆ ಪರಿಮಳ ಈಕೆಯ ಗಂಡ ಜಯ್ಯಪ್ಪ
ಯಾವುದೋ ಕಲ್ಲಿನಿಂದ ತಲೆಗೆ ಮೈ.ಕೈಗೆ ಹೊಡೆದು ಕೊಲೆ ಮಾಡಿರುವಂತೆ ಕಂಡು ಬರುತ್ತದೆ. ನನ್ನ ತಮ್ಮನನ್ನು ಕೊಲೆ ಮಾಡಿರುವ ಜಯ್ಯಪ್ಪನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಆತನ ಅಣ್ಣ ಕೊಲ್ಲಪ್ಪ ಅವರು ದಾವಣಗೆರೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್‌ಕುಮಾರ್. ಇ. ವೈ, ನೇತೃತ್ವದಲ್ಲಿ ಪಿಎಸ್‌ಐ ಹಾರೂನ್ ಅಖ್ತರ್ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಜಯ್ಯಪ್ಪನನ್ನು ಬಂಧಿಸಿದ್ದಾರೆ.
ತಾರಾ ಚಾಕಚಕ್ಯತೆ:
ದಾವಣಗೆರೆ ಜಿಲ್ಲಾ ಡಾಗ್ ಸ್ಕ್ವಾಡ್ ನ ತಾರಾ ಎಂಬ ಹೆಸರಿನ ಶ್ವಾನವು ಸುಮಾರು 1 ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ, ಶ್ವಾನ ದಳವು ಅತ್ಯಂತ ಸೂಕ್ಷ್ಮಕಾರಿಯಾಗಿದ್ದು, ಆರೋಪಿ ಚಲನವಲನಗಳ ಬಗ್ಗೆ ಸುಳಿವು ನೀಡಿತ್ತು. ಆರೋಪಿತನನ್ನು ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡವು ಹೊನ್ನೂರು ಐಓಸಿ ಪೆಟ್ರೋಲ್ ಬಂಕ್ ಬಳಿ ಇದ್ದ ಆರೋಪಿತ ಜಯ್ಯಪ್ಪನನ್ನು ಬಂಧಿಸಿದೆ.
ಈ ವೇಳೆ ಜಯ್ಯಪ್ಪನನ್ನು ವಿಚಾರಣೆ ನಡೆಸಿದಾಗ ಶಿವಕುಮಾರನು ನನ್ನ ಹೆಂಡತಿ ಪರಿಮಳಳೊಂದಿಗೆ ಸಂಬಂಧ ಇಟ್ಟುಕೊಂಡ ವಿಚಾರ ಗೊತ್ತಾಗಿ ಸಿಟ್ಟು ಬಂತು. ರಾತ್ರಿ 10.30 ಗಂಟೆ ಸಮಯದಲ್ಲಿ ಬಸವರಾಜಪ್ಪರ ಜಮೀನಿನಲ್ಲಿ ಕೈಗಳಿಗೆ, ವೃಷಣಗಳಿಗೆ ಮೈ, ಕೈಗೆ ಗುದ್ದಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದೇನೆಂದು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿತರ ಪತ್ತೆಗೆ ಕಾರ್ಯದಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್‌ಕುಮಾರ್. ಇ.ವೈ., ಪಿಎಸ್‌ಐ ಹಾರೂನ್ ಅಖ್ತರ್, ಎಎಸ್ಐ ನಾರಪ್ಪ ಮತ್ತು ಸಿಬ್ಬಂದಿಯವರಾದ ಜಗದೀಶ, ನಾಗಭೂಷಣ್, ನಾಗರಾಜ, ಮಹಮ್ಮದ್ ಯೂಸೂಫ್ ಅತ್ತಾರ್, ಮಹೇಶ್, ವೀರೇಶ್ ಹಾಗೂ ಶ್ವಾನದಳದ ತಾರಾ ಶ್ವಾನದ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.