SUDDIKSHANA KANNADA NEWS/ DAVANAGERE/ DATE:17_07_2025
ಬೆಂಗಳೂರು: ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆ ಬೆಳೆಯುವ ರೈತ ಫಲಾನುಭವಿಗಳಿಗೆ 2025-26 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:
ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ (ಬಾಳೆ, ಅಂಜೂರ, ದಾಳಿಂಬೆ, ನುಗ್ಗೆ, ಪೇರಲ, ಪಪ್ಪಾಯ, ತೆಂಗು, ಡ್ರಾಗನ್ ಫ್ರೂಟ್, ನೇರಳೆ, ಸಪೋಟ, ಮಾವು, ಸೀತಾಫಲ್, ಹುಣಸೆ, ಕರಿಬೇವು, ಗುಲಾಬಿ ಹಾಗೂ ಇತರೆ) ಬೆಳೆಗಳಿಗೆ ಮತ್ತು ಕೃಷಿ ಹೊಂಡ, ಬದುಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಘಟಕ ಇತ್ಯಾದಿ ಅನುಷ್ಠಾನಗೊಳಿಸಲಾಗುವುದು.
READ ALSO THIS STORY: ನಮಾಜ್ ಮಾಡು, ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ರೇಪ್ ಕೇಸ್: ಮುಸ್ಲಿಂ ಯುವತಿ ಮದುವೆಯಾಗಿದ್ದ ಹಿಂದೂ ಯುವಕನ ಸ್ಫೋಟಕ ಆರೋಪ!
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ:
ಹೊಸ ಪ್ರದೇಶ ವಿಸ್ತರಣೆ, ಕೃಷಿಹೊಂಡ (21*21*3ಮೀ), ಈರುಳ್ಳಿ ಶೇಖರಣ ಘಟಕ, ನೆರಳು ಪರದೆ, ಪ್ಲಾಸ್ಟಿಕ್ ಹೊದಿಕೆ, 20 ಹೆಚ್.ಪಿ ಕಡಿಮೆಯುಳ್ಳ ಟ್ರಾಕ್ಟರ್, ಟ್ರಾಕ್ಟರ್ ಚಾಲಿತ ಔಷಧಿ ಸಿಂಪರಣೆ ಉಪಕರಣಗಳು ಮತ್ತು ವಿವಿಧ ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ ಶೇ.50 ರಷ್ಟು ಲಭ್ಯತೆಯ ಮೇರೆಗೆ ಸಹಾಯಧನ ವಿತರಿಸಲಾಗುತ್ತದೆ.
ಪ್ರಧಾನ ಮಂತ್ರಿ-ರಾಷ್ಟ್ಕೀಯ ಕೃಷಿ ವಿಕಾಸ ಯೋಜನೆ- ಪ್ರತಿ ಹನಿಗೆ ಅಧಿಕ ಬೆಳೆ:
ಪ್ರಧಾನ ಮಂತ್ರಿ- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ- ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಸಹಾಯಧನ ನೀಡಲಾಗುತ್ತದೆ. ಹೊಸದಾಗಿ ಅಳವಡಿಸುವ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಫಲಾನುಭವಿಗಳಿಗೆ ಶೇ.90 ರಂತೆ ಸಹಾಯಧನ ವಿತರಿಸಲಾಗುವುದು.
ಕೇಂದ್ರ ಪುರಸ್ಕೃತ ರಾಷ್ಟ್ಕೀಯ ಖಾದ್ಯ ತೈಲ ಅಭಿಯಾನ-ತಾಳೆ ಬೆಳೆ ಯೋಜನೆ:
2025-26ನೇ ಸಾಲಿನಲ್ಲಿ ತಾಳೆಬೆಳೆ ಬೆಳೆಯಲು ಆಸಕ್ತಿ ಇರುವ ರೈತರು ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಪ್ರತೀ ಹೆಕ್ಟೇರ್‌ಗೆ ಶೇ.50 ರಂತೆ ರೂ.29,000, ಮೊದಲನೇ ವರ್ಷದಿಂದ ನಾಲ್ಕು ವರ್ಷಗಳ ಬೇಸಾಯ ನಿರ್ವಹಣೆ ಕಾರ್ಯಕ್ರಮಕ್ಕೆ ಪ್ರತಿ ವರ್ಷ ನಿರ್ವಹಣೆಗೆ ರೂ.5250, ಪ್ರತಿ ಹೆಕ್ಟೇರ್‌ಗೆ ಸಹಾಯಧನ ನೀಡಲಾಗುವುದು.
ಅಂತರ ಬೆಳೆಗೆ ರೂ.5250, ಎತ್ತರವಾದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ರೂ.1000, ಪ್ರತಿ ಟನ್‌ಗೆ (ಗರಿಷ್ಠ 60 ಟನ್ ಮಾತ್ರ) ಸಹಾಯಧನ, ಡೀಸೆಲ್ ಪಂಪ್ ಸೆಟ್ ಕೊಳ್ಳಲು ರೂ.8000, ಕೊಳವೆ ಬಾವಿಗೆ ರೂ.50000, ಸಹಾಯಧನ, ತಾಳೆ ಹಣ್ಣು ಕಟಾವು ಮಾಡುವ ಉಪಕರಣ, ಮೊಟೊರೈಸ್ಡ್ ಚಿಸೆಲ್ ರೂ.15000, ತಾಳೆ ಹಣ್ಣು ಕಟಾವು ಏಣಿ ರೂ.5000, ಚಾಫ್ ಕಟ್ಟರ್ ರೂ.50000, ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.1,60,000 (ಶೇ.50 ರಂತೆ) ಸಹಾಯಧನ ನೀಡಲಾಗುವುದು.
ಈ ಎಲ್ಲಾ ಯೋಜನೆಗಳಡಿ ಅಲ್ಪಸಂಖ್ಯಾತರಿಗೆ ಶೇ.15, ವಿಶೇಷ ಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಿಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.