SUDDIKSHANA KANNADA NEWS/ DAVANAGERE/ DATE:01-04-2025
ದಾವಣಗೆರೆ: ಸಾಮಾಜಿಕ ಚಿಂತಕ, ಜ್ಞಾನದಾಸೋಹಿ ಶ್ರೀ ನಿರಂಜನಾನದಪುರಿ ಮಹಾಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗಿದ್ದು, ಏಪ್ರಿಲ್ 2 ರಂದು ನಡೆಯುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.
ಧಾರ್ಮಿಕ ಜಾಗೃತಿ, ಪರಿಸರ ಸಂರಕ್ಷಣೆ, ಶೈಕ್ಷಣಿಕ ಕ್ರಾಂತಿ, ಜನಪದ ಕಲೆಗಳ ಸಂರಕ್ಷಣೆಯ ಜೊತೆಗೆ ಜನರಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸುತ್ತಿರುವ ಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಧಾರ್ಮಿಕ, ಆಧ್ಯಾತ್ಮಿಕ ಸಾಧನೆಯ ಜೊತೆಗೆ ‘ಜನ ಸೇವೆಯೇ ಜನಾರ್ದನ ಸೇವೆ’ ಎಂಬ ಮಾತಿನಂತೆ ಹಲವಾರು ಜನೋಪಕಾರಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು1977ರ ಏಪ್ರಿಲ್ 10 ರಂದು ಹೆಚ್.ಆರ್ ಗುರುಸಿದ್ದಯ್ಯ ಒಡೆಯರ ಹಾಗೂ ರುದ್ರಾಯಣಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರ್ತಿಕೋಟೆಯಲ್ಲಿ, ಫ್ರೌಢ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಬೆಂಗಳೂರಿನ ಕೈವಲ್ಯಾಶ್ರಮದಲ್ಲಿ ಪೂರೈಸಿದರು.
ಬೆಂಗಳೂರು ಹಾಗೂ ಹರಿದ್ವಾರಗಳಲ್ಲಿ ವೇದ-ಆಗಮಗಳ ಅಧ್ಯಯನವನ್ನು ಪೂರೈಸಿ, 2006ರಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠವನ್ನು ಅಲಂಕರಿಸಿದರು.
ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸ್ವಾಮೀಜಿಯವರು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದರ ಮೂಲಕ ಬಡಜನರಿಗೆ ಸಹಾಯ ಹಸ್ತವನ್ನು ಚಾಚಿದ್ದಾರೆ. ಸಾರ್ವಜನಿಕರಿಗಾಗಿ ಸಮುದಾಯ ಭವನಗಳನ್ನು ನಿರ್ಮಿಸಿದ್ದಾರೆ. ಅನೇಕ ಪ್ರಗತಿಪರ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುತ್ತಿದ್ದಾರೆ. ಪರಿಸರದ ಬಗ್ಗೆ ಅಪಾರ ಕಾಳಜಿವುಳ್ಳ ಸ್ವಾಮೀಜಿಯವರು ಪರಿಸರ ಜಾಗೃತಿಯ ಬಗ್ಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿಶ್ವಧರ್ಮದ ಪರಿಕಲ್ಪನೆಯುಳ್ಳ ಸ್ವಾಮಿಜಿಯವರು ಸರ್ವಧರ್ಮ ಸಮ್ಮೇಳನಗಳನ್ನು ನಡೆಸಿ ಎಲ್ಲಾ ಧರ್ಮಗಳ ತತ್ವ ಒಂದೇ ಎಂಬ ಸಂದೇಶವನ್ನು ಜನರಿಗೆ ಸಾರಿದ್ದಾರೆ.
ಸ್ವಾಮೀಜಿಯವರು ಶೈಕ್ಷಣಿಕ ಬೆಳವಣಿಗೆಗಾಗಿ, ಬಡ ಮಕ್ಕಳ ವಿದ್ಯಾರ್ಜನೆಗಾಗಿ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಸರ್ವಭಾಷೆಗಳಿಗೂ ಮಾತೃ ಸ್ಥಾನದಲ್ಲಿರುವ ಸಂಸ್ಕೃತ ಭಾಷೆಯ ಬೆಳವಣಿಗೆಗಾಗಿ ಕಾಗಿನೆಲೆಯಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಸಂತ ಕನಕದಾಸರ ತತ್ವಾನುಭವಗಳನ್ನು ಜನರಿಗೆ ತಲುಪಿಸಲು ಅನೇಕ ಗೋಷ್ಠಿ, ಉಪನ್ಯಾಸ, ಪ್ರವಚನಗಳನ್ನು ಏರ್ಪಡಿಸಿದ್ದಾರೆ. ಸ್ವಾಮೀಜಿಯವರು ಪ್ರಜಾವಾಣಿಯ ದಿನಪತ್ರಿಕೆಯಲ್ಲಿ ‘ವಚನಾಮೃತ’ ಎಂಬ ಶೀರ್ಷಿಕೆಯಡಿಯಲ್ಲಿ ಬರೆಯುವ ವಿದ್ವತ್ಪೂರ್ಣ ಅಂಕಣ ಬರಹಗಳು ಜನಮನವನ್ನು ಸೂರೆಗೊಂಡಿವೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರು ಸದಾ ಸಮಾಜದ ಒಳಿತನ್ನೇ ಬಯಸುತ್ತಾ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಇವರ ಕೊಡುಗೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಲಿದೆ.