SUDDIKSHANA KANNADA NEWS/ DAVANAGERE/ DATE:20-03-2025
ಬೆಂಗಳೂರು: ಸಚಿವ ಕೆ. ಎನ್. ರಾಜಣ್ಣರನ್ನು ಹನಿಟ್ರ್ಯಾಪ್ ಗೆ ಬೀಳಿಸುವ ವಿಫಲ ಯತ್ನ ನಡೆದಿದ್ದು, ಮತ್ತಿಬ್ಬರು ಸಚಿವರಿಗೂ ಹನಿಟ್ರ್ಯಾಪ್ ಬಲೆ ಬೀಸಿದ್ದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಸಿಎಂ ಸಿದ್ದರಾಮಯ್ಯರಿಗೆ ಹನಿಟ್ರ್ಯಾಪ್ ಸಂಕಷ್ಟ ತಂದೊಡ್ಡುತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ.
ಹೈಕಮಾಂಡ್ ಈ ವಿಚಾರ ಗಂಭೀರವಾಗಿ ಪರಿಗಣಿಸಿದ್ದು, ಮಾಹಿತಿ ನೀಡಲು ಸಿಎಂ ಅವರೇ ದೆಹಲಿಗೆ ಸದ್ಯದಲ್ಲೇ ತೆರಳುವ ಸಾಧ್ಯತೆ ಇದೆ. ಜೊತೆಗೆ ಹನಿಟ್ರ್ಯಾಪ್ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹನಿಟ್ರ್ಯಾಪ್ ಕೆ. ಎನ್. ರಾಜಣ್ಣ ಮಾತ್ರವಲ್ಲ, ಮತ್ತಿಬ್ಬರು ಸಚಿವರಿಗೂ ಗಾಳ ಹಾಕಲಾಗಿತ್ತು. ಆದ್ರೆ, ಕೆ. ಎನ್. ರಾಜಣ್ಣರ ಟ್ರ್ಯಾಪ್ ವಿಫಲ ಆಗುತ್ತಿದ್ದಂತೆ ಟ್ರ್ಯಾಪ್ ತಂಡ ಎಚ್ಚೆತ್ತುಕೊಂಡಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತ್ರವಲ್ಲದೆ ರಾಜ್ಯ ಸಚಿವ ಸಂಪುಟದ ಇನ್ನೂ ಮೂರು ಮಂದಿಯನ್ನು ಹನಿ ಟ್ರ್ತಾಪ್ ಜಾಲಕ್ಕೆ ಸಿಲುಕಿಸಲು ಯತ್ನ ನಡೆದಿತ್ತು ಎನ್ನಲಾಗಿದೆ. ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರು ಮತ್ತು ಮುಂಬೈ-ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರನ್ನು ಖೆಡ್ಡಾಗೆ ಕೆಡವಲು ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಹನಿಟ್ರ್ಯಾಪ್ ನ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರಿನ ಓರ್ವ ಸಚಿವರು ಹನಿ ಟ್ರ್ಯಾಪ್ ಮಾಡಲು ಬಂದ ತಂಡವನ್ನು ಲಾಕ್ ಮಾಡಿದ್ದಾರೆ. ಲಾಕ್ ಆದ ಹನಿ ಟ್ರ್ಯಾಪ್ ತಂಡ ಧರ್ಮದೇಟು ಬೀಳುತ್ತಿದ್ದಂತೆಯೇ ಕಂಗಾಲಾಗಿದೆ. ಕಂಗಾಲಾದ ಹನಿ ಟ್ರ್ತಾಪ್ ತಂಡದಿಂದ ಬಾಯ್ಬಿಡಿಸಿದ ಬೆಂಗಳೂರಿನ ಆ ಸಚಿವರು ಈ ಸಂಬಂಧ ಸಿಎಂ ಸಿದ್ದರಾಮಯ್ಯರಿಗೆ ಕಂಪ್ಲೆಂಟ್ ಕೊಟ್ಟಿದ್ದಾರೆ. ಬಾಯ್ಬಿಡಿಸಿದ್ದು ಮಾತ್ರವಲ್ಲ.ತಪ್ಪೊಪ್ಪಿಕೊಂಡ ಹನಿ ಟ್ರ್ಯಾಪ್ ತಂಡದಿಂದ ಇದರ ಸೂತ್ರಧಾರ ಯಾರೆಂಬ ಬಗ್ಗೆ ವಿಚಾರಣೆ ನಡೆಸಿದೆ. ಈ ವೇಳೆ ಯಾರು ಆ ಹನಿಟ್ರ್ಯಾಪ್ ಮಹಾಶಯ ಎಂಬುದನ್ನು ಬಾಯ್ಬಿಟ್ಟಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಹನಿ ಟ್ರ್ತಾಪ್ ತಂಡ ಬಿಚ್ಚಿಟ್ಟ ಮಾಹಿತಿಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡ ಬೆಂಗಳೂರಿನ ಆ ಸಚಿವ ತದನಂತರ ತಮ್ಮಂತೆಯೇ ಯಾರ್ಯಾರನ್ನು ಈ ಜಾಲಕ್ಕೆ ಬೀಳಿಸಲು ಯತ್ನ ನಡೆದಿದೆ ಎಂದು ಮಾಹಿತಿ ಪಡೆದಿದ್ದಾರೆ. ತದ ನಂತರ ಇತರ ಮೂವರು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಈ ಕುರಿತು ಪಕ್ಷದ ವರಿಷ್ಟರ ಗಮನಕ್ಕೆ ತರುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.