Home ದಾವಣಗೆರೆ ಪೋಷಕರನ್ನು ಸಾಕದ ಮಗನಿಗೆ ಹೈಕೋರ್ಟ್ ಶಾಕ್: ಗಿಫ್ಟ್ ನೀಡಿದ್ದ ಕೋಟ್ಯಂತರ ರೂ. ಮೌಲ್ಯದ ಫ್ಲಾಟ್ ವಾಪಸ್ ನೀಡಲು ಆದೇಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪೋಷಕರನ್ನು ಸಾಕದ ಮಗನಿಗೆ ಹೈಕೋರ್ಟ್ ಶಾಕ್: ಗಿಫ್ಟ್ ನೀಡಿದ್ದ ಕೋಟ್ಯಂತರ ರೂ. ಮೌಲ್ಯದ ಫ್ಲಾಟ್ ವಾಪಸ್ ನೀಡಲು ಆದೇಶ!

Share
ಮಗ
Share

ಮುಂಬೈ: ವೃದ್ಧಾಪ್ಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಂದ ಹೆತ್ತ ಪೋಷಕರು ಮಗನಿಗೆ ದಾನವಾಗಿ (Gift Deed) ನೀಡಿದ್ದ ಫ್ಲಾಟ್‌ ಅನ್ನು, ಮಗ ಪೋಷಕರನ್ನು ಮನೆಯಿಂದಲೇ ಹೊರಹಾಕಿದ ಹಿನ್ನೆಲೆಯಲ್ಲಿ ಮರಳಿ ಪೋಷಕರಿಗೆ ಹಸ್ತಾಂತರಿಸುವಂತೆ ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:

ಮುಂಬೈನ ಉದ್ಯಮಿ ಅಶ್ವಿನ್ ರಮೇಶ್ ಸೋನಿ ಎಂಬಾತನಿಗೆ ಆತನ ವೃದ್ಧ ಪೋಷಕರಾದ ರಮೇಶ್ ಬಚೌಲಾಲ್ ಸೋನಿ (68) ಮತ್ತು ಬೀನಾ ರಮೇಶ್ ಸೋನಿ (60) ಅವರು ಮುಂಬೈನ ಪ್ರತಿಷ್ಠಿತ ಲೋವರ್ ಪರೇಲ್‌ನಲ್ಲಿರುವ ಫ್ಲಾಟ್ ಅನ್ನು 2023ರ ಮೇ ತಿಂಗಳಲ್ಲಿ ಗಿಫ್ಟ್ ಡೀಡ್ ಮೂಲಕ ಬರೆದುಕೊಟ್ಟಿದ್ದರು. ವೃದ್ಧಾಪ್ಯದಲ್ಲಿ ಮಗ ಮತ್ತು ಆತನ ಕುಟುಂಬ ತಮ್ಮನ್ನು ಆಸ್ರೆಯಾಗಿ ನೋಡಿಕೊಳ್ಳುತ್ತದೆ ಎಂಬ ಒಪ್ಪಂದದ ಮೇರೆಗೆ ಈ ವರ್ಗಾವಣೆ ನಡೆದಿತ್ತು.

ಮನೆಯಿಂದಲೇ ಹೊರಬಿದ್ದ ಪೋಷಕರು!

ಆಸ್ತಿ ಕೈ ಸೇರಿದ ಬೆನ್ನಲ್ಲೇ ಮಗ ಹಾಗೂ ಸೊಸೆಯ ಕಿರುಕುಳ ಹೆಚ್ಚಾಗಿದ್ದು, ಕೊನೆಗೆ ವೃದ್ಧ ಪೋಷಕರು ತಾವು ವಾಸವಿದ್ದ ಸ್ವಂತ ಮನೆಯಿಂದಲೇ ಹೊರಹೋಗಬೇಕಾದ ಕರುಣಾಜನಕ ಪರಿಸ್ಥಿತಿ ಬಂದೊದಗಿತ್ತು. ಇಷ್ಟೇ ಅಲ್ಲದೆ, ಬೈಕುಲ್ಲಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮತ್ತೊಂದು ಫ್ಲಾಟ್ ಅನ್ನು ಸಹ ಮಗ ತನ್ನ ಹೆಸರಿಗೆ ಮಾಡಿಸಿಕೊಂಡು ಪೋಷಕರಿಗೆ ವಂಚಿಸಿದ್ದನು. ಇದರಿಂದಾಗಿ ವೃದ್ಧ ದಂಪತಿಗಳು ಯಾವುದೇ ಆಸರೆಯಿಲ್ಲದೆ ಬೀದಿಗೆ ಬೀಳುವಂತಾಗಿತ್ತು.

ಮಗನ ವಾದ ತಳ್ಳಿಹಾಕಿದ ಹೈಕೋರ್ಟ್:

“ನನ್ನ ತಂದೆ ಈಗಾಗಲೇ ಆರ್ಥಿಕವಾಗಿ ಸಬಲರಾಗಿದ್ದಾರೆ, ಅವರಿಗೆ ಚಿನ್ನದ ವ್ಯಾಪಾರ (Jewellery Business) ಇದೆ ಮತ್ತು ಬೇರೆ ಆಸ್ತಿಗಳೂ ಇವೆ” ಎಂದು ಮಗ ಅಶ್ವಿನ್ ಕೋರ್ಟ್‌ನಲ್ಲಿ ತನಗೇ ಫ್ಲಾಟ್ ಸಿಗಬೇಕೆಂದು ವಾದಿಸಿದ್ದನು.

ಆದರೆ ಈ ವಾದವನ್ನು ಕಠಿಣವಾಗಿ ತಳ್ಳಿಹಾಕಿದ ಹೈಕೋರ್ಟ್ ಪೀಠ, “ಪೋಷಕರ ಆರ್ಥಿಕ ಪರಿಸ್ಥಿತಿ ಇಲ್ಲಿ ಮುಖ್ಯವಲ್ಲ. ವೃದ್ಧಾಪ್ಯದಲ್ಲಿ ಪೋಷಕರನ್ನು ಎಲ್ಲಾ ರೀತಿಯಿಂದಲೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಗಿಫ್ಟ್ ಡೀಡ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಮಗ ಆ ಭರವಸೆಯನ್ನು ಮುರಿದು, ಪೋಷಕರನ್ನೇ ಮನೆಯಿಂದ ಹೊರಹಾಕಿರುವುದರಿಂದ ಈ ಆಸ್ತಿ ವರ್ಗಾವಣೆ ನಿಯಮಬದ್ಧವಾಗಿ ರದ್ದಾಗುತ್ತದೆ” ಎಂದು ಹೇಳಿ ತಕ್ಷಣವೇ ಫ್ಲಾಟ್ ಅನ್ನು ಪೋಷಕರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ.

Share

Leave a comment

Leave a Reply

Your email address will not be published. Required fields are marked *