ನವದೆಹಲಿ: ಶನಿವಾರದ ದೆಹಲಿ ಪ್ರತಿಭಟನೆಗಳ ಸಂದರ್ಭದಲ್ಲಿ ಜರುಗಿದ ವ್ಯಾಪಕ ಪೊಲೀಸ್ ಕ್ರಮ, ಅಕ್ರಮ ಬಂಧನಗಳು ಮತ್ತು ಸಂಪೂರ್ಣ ಸಾರಜನಿಕ ಸಾರಿಗೆ ಸ್ಥಗಿತದ ವಿರುದ್ಧ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಶೇಷ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ನೇತೃತ್ವದ ನ್ಯಾಯಪೀಠವು, ಸಾರ್ವಜನಿಕ ಸುವ್ಯವಸ್ಥೆಗೆ ಒಳಪಟ್ಟು ದೆಹಲಿ ನಗರದಾದ್ಯಂತ ಮುಕ್ತ ಸಂಚಾರವನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಲ್ಲದೆ, ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುವಾಗ ಯಾವುದೇ ಅಡ್ಡಿಪಡಿಸಬಾರದೆಂದು ಪೀಠವು ಸ್ಪಷ್ಟಪಡಿಸಿದೆ.
ವಿಚಾರಣೆ ವೇಳೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನಾಗರಿಕರ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಸಮರ್ಥಿಸಿಕೊಂಡರೆ, ಮತ್ತೊಂದೆಡೆ ಹಿರಿಯ ವಕೀಲರಾದ ಮೇನಕಾ ಗುರುಸ್ವಾಮಿ ಅವರು ಈ ವಿಷಯವು ಕೇವಲ ವ್ಯಕ್ತಿಗಳ ಬಂಧನಕ್ಕೆ ಸೀಮಿತವಾಗಿಲ್ಲದೆ, ನೇರವಾಗಿ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ ಎಂದು ವಾದಿಸಿದರು. ಸುಪ್ರೀಂ ಕೋರ್ಟ್ ಆವರಣ ಹಾಗೂ ಭಗವಾನ್ದಾಸ್ ರಸ್ತೆಯ ಹೊರಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿರುವುದರ ಬಗ್ಗೆಯೂ ಪೀಠವು ಗರಂ ಆಗಿ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು. ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಂಟರ್ನೆಟ್ ಸೇವೆಗಳನ್ನು ಈಗಾಗಲೇ ಮರುಸ್ಥಾಪಿಸಲಾಗಿದೆ ಮತ್ತು ಮೆಟ್ರೋ ಕಾರ್ಯಾಚರಣೆಗಳು ಸಂಪೂರ್ಣ ಸಾಮಾನ್ಯ ಸ್ಥಿತಿಗೆ ಬಂದಿವೆ ಎಂದು ಕೋರ್ಟ್ಗೆ ತಿಳಿಸಿದರು.
ಬ್ಯಾರಿಕೇಡ್ ತೆರವು ಮತ್ತು ಮುಕ್ತ ಸಂಚಾರ: ದೆಹಲಿ ನಗರದಾದ್ಯಂತ ಹಾಕಲಾಗಿರುವ ಎಲ್ಲಾ ಬ್ಯಾರಿಕೇಡ್ಗಳನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು.
ಇಂಟರ್ನೆಟ್ ಸೇವೆಗಳ ಮುಂದುವರಿಕೆ: ಯಾವುದೇ ತುರ್ತು ಅಥವಾ ನಿಷೇಧಿತ ಸಂದರ್ಭಗಳ ಹೆಸರಿನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಬಂದ್ ಮಾಡುವಂತಿಲ್ಲ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಮೆಟ್ರೋ ಮತ್ತು ರೈಲು ಸಾರಿಗೆ: ಮುಚ್ಚಲಾಗಿರುವ ಮೆಟ್ರೋ ನಿಲ್ದಾಣಗಳು ಮತ್ತು ದೆಹಲಿಗೆ ಸಂಪರ್ಕ ಕಲ್ಪಿಸುವ ರೈಲು ಸಂಚಾರವನ್ನು ಯಾವುದೇ ತಡೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಬೇಕು.
ವಕೀಲರು ಹಾಗೂ ಪ್ರತಿಭಟನಾಕಾರರ ರಕ್ಷಣೆ: ಕಾನೂನು ಕರ್ತವ್ಯ ನಿರ್ವಹಿಸುವ ವಕೀಲರು ಮತ್ತು ಮಾಧ್ಯಮ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗುವುದನ್ನು ಹಾಗೂ ಅವರ ಚಲನವಲನಗಳಿಗೆ ಅಡ್ಡಿಪಡಿಸುವುದನ್ನು ತಡೆಯಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶೋತ್ತರಗಳನ್ನು ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ನ್ಯಾಯಾಲಯವು ಬದ್ಧವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.





Leave a comment