Home ದಾವಣಗೆರೆ ಪಂಜಾಬ್ ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಸಿಖ್ ಹತ್ಯಾಕಾಂಡ ಉಲ್ಲೇಖದ ಬಗ್ಗೆ ಹರ್‌ಸಿಮ್ರತ್ ಕೌರ್ ಬಾದಲ್ ಆಕ್ರೋಶ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪಂಜಾಬ್ ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಸಿಖ್ ಹತ್ಯಾಕಾಂಡ ಉಲ್ಲೇಖದ ಬಗ್ಗೆ ಹರ್‌ಸಿಮ್ರತ್ ಕೌರ್ ಬಾದಲ್ ಆಕ್ರೋಶ!

Share
ಸೋನಿಯಾ ಗಾಂಧಿ
Share

ಚಂಡೀಘಢ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇತ್ತೀಚಿನ “ಬೆಲಾಂಗಿಂಗ್: ಎ ಜರ್ನಿ ಆಫ್ ಲವ್” (Belonging: A Journey of Love) ಆತ್ಮಕಥೆಯು ಬಿಡುಗಡೆಯಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ 1984ರಲ್ಲಿ ನಡೆದ ಸಿಖ್ ವಿರೋಧಿ ಹತ್ಯಾಕಾಂಡದ ಕುರಿತು ಪುಸ್ತಕದಲ್ಲಿ ಕೇವಲ ಸಾಂಪ್ರದಾಯಿಕ ಉಲ್ಲೇಖ ಮಾಡಲಾಗಿದ್ದು, ಇಂದಿಗೂ ಯಾವುದೇ ಕ್ಷಮೆ ಯಾಚಿಸಿಲ್ಲ ಎಂದು ಶಿರೋಮಣಿ ಅಕಾಲಿ ದಳದ ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ತೀವ್ರವಾಗಿ ಕಿಡಿಕಾರಿದ್ದಾರೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಸಾವಿರಾರು ನಿರಪರಾಧಿ ಸಿಖ್ಖರನ್ನು ಹತ್ಯೆ ಮಾಡಿ ನಾಲ್ಕು ದಶಕಗಳು ಕಳೆದಿದ್ದರೂ ಕಾಂಗ್ರೆಸ್ ಪಕ್ಷದಿಂದ ಇದುವರೆಗೆ ಯಾವುದೇ ಅಧಿಕೃತ ಕ್ಷಮೆ ಕೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ಯಾಕಾಂಡದಂತಹ ಮಹಾಪರಾಧವನ್ನು ತಮ್ಮ ಆತ್ಮಕಥೆಯಲ್ಲಿ ಕೇವಲ ಒಂದು ಅಡಿಟಿಪ್ಪಣಿಯಂತೆ (Footnote) ಸಾಧಾರಣವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ. “ಪಂಜಾಬ್ ಎಂದಿಗೂ ಇದನ್ನು ಮರೆಯುವುದಿಲ್ಲ, ಎಂದಿಗೂ ಕ್ಷಮಿಸುವುದಿಲ್ಲ” ಎಂದು ಹರ್‌ಸಿಮ್ರತ್ ಕೌರ್ ಬಾದಲ್ ಎಚ್ಚರಿಕೆ ನೀಡಿದ್ದಾರೆ.

ಕ್ಷಮೆಯಾಚನೆ ಇಲ್ಲದಿರುವ ಬಗ್ಗೆ ಆಕ್ರೋಶ: ನಾಲ್ಕು ದಶಕಗಳ ಹಿಂದೆ ನಡೆದ ಸಿಖ್ ಹತ್ಯಾಕಾಂಡದ ಕುರಿತು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಕೇವಲ ಮೇಲ್ನೋಟಕ್ಕೆ ಪ್ರಸ್ತಾಪಿಸಿದ್ದಾರೆಯೇ ವಿನಃ ಯಾವುದೇ ಕ್ಷಮೆಯಾಚನೆ ಮಾಡಿಲ್ಲ ಎಂದು ಬಾದಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುಸ್ತಕದಲ್ಲಿನ ಒಪ್ಪಿಗೆ: ತಮ್ಮ ಆತ್ಮಕಥೆಯಲ್ಲಿ 1984ರ ಗಲಭೆಯನ್ನು “ದುರಂತ ಮತ್ತು ನಾಚಿಕೆಗೇಡಿನ ಅಧ್ಯಾಯ” ಎಂದು ಬಣ್ಣಿಸಿರುವ ಸೋನಿಯಾ ಗಾಂಧಿ, ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಅಥವಾ ನಿರ್ದೇಶಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಭಾಗಿಯಾಗಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ರಾಜಕೀಯ ವಲಯದಲ್ಲಿ ಚರ್ಚೆ: ರಾಜಧಾನಿ ದೆಹಲಿ ಒಂದರಲ್ಲೇ ಎರಡು ಸಾವಿರಕ್ಕೂ ಅಧಿಕ ನಿರಪರಾಧಿಗಳು ಪ್ರಾಣ ಕಳೆದುಕೊಂಡಿದ್ದರೂ, ಕಾಂಗ್ರೆಸ್ ಪಕ್ಷಕ್ಕೆ ನರಮೇಧವು ಕೇವಲ ಒಂದು ಅಡಿಟಿಪ್ಪಣಿಯಂತೆ ಗೋಚರಿಸಿದೆ ಎಂದು ಶಿರೋಮಣಿ ಅಕಾಲಿ ದಳ ತೀವ್ರವಾಗಿ ಖಂಡಿಸಿದೆ.

ಇಂದಿರಾ ಗಾಂಧಿಯವರ ಹತ್ಯೆಯ ಸುದ್ದಿ ಹರಡಿದಾಗ ಉಂಟಾದ ಆಕ್ರೋಶ, ದೆಹಲಿ ಸೇರಿದಂತೆ ವಿವಿಧಡೆ ಭುಗಿಲೆದ್ದ ಹಿಂಸಾಚಾರ ಹಾಗೂ ಪ್ರಧಾನಿ ರಾಜೀವ್ ಗಾಂಧಿ ಅವರು ಶಾಂತಿಗಾಗಿ ಮಾಡಿದ ಮನವಿಗಳ ಕುರಿತು ಸೋನಿಯಾ ಗಾಂಧಿ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಆದರೆ, ಸಂತ್ರಸ್ತರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರೂ, ಈ ಗಂಭೀರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪೂರ್ಣ ಪ್ರಮಾಣದ ಹೊಣೆಗಾರಿಕೆ ಹೊತ್ತು ಬಹಿರಂಗ ಕ್ಷಮೆ ಕೋರಬೇಕಿತ್ತು ಎಂಬುದು ಸಿಖ್ ಮುಖಂಡರ ಮತ್ತು ವಿರೋಧ ಪಕ್ಷಗಳ ಮುಖ್ಯ ಆಗ್ರಹವಾಗಿದೆ.

Share

Leave a comment

Leave a Reply

Your email address will not be published. Required fields are marked *