ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಜಗಳೂರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಹೆಚ್. ಪಿ. ರಾಜೇಶ್ ಬಿಜೆಪಿಗೆ…?

On: February 15, 2024 4:28 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:15-02-2024

ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ರಣರೋಚಕ ಕದನದಲ್ಲಿ ಸ್ವಲ್ಪದರಲ್ಲಿ ಸೋಲು ಕಂಡಿದ್ದ ಜಗಳೂರು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬಿಜೆಪಿ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಬಿಜೆಪಿಯತ್ತ ಹೆಚ್ಚಿನ ಒಲವು ತೋರಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಬೇಕಿದೆ ಎಂದು ಬೆಂಗಳೂರಿನ ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಹೆಚ್. ಪಿ. ರಾಜೇಶ್ ಅವರು ಜಗಳೂರಿನಲ್ಲಿ ಕಾಂಗ್ರೆಸ್ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರಲ್ಲದೇ, ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಐದು ವರ್ಷಗಳ ಕಾಲ ಜನರ ಸೇವೆ ಮಾಡುವ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡವರು. ಜಗಳೂರು ಕ್ಷೇತ್ರದಿಂದ ಎಸ್. ವಿ. ರಾಮಚಂದ್ರಪ್ಪರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೂ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆಗ ಹೆಚ್. ಪಿ. ರಾಜೇಶ್ ಶಾಸಕರಾಗಿ ಆಯ್ಕೆಯಾಗಿದ್ದರು.

ಕ್ಷೇತ್ರಾದ್ಯಂತ ಉತ್ತಮ ಹೆಸರು ಹೊಂದಿದ್ದ ಹೆಚ್. ಪಿ. ರಾಜೇಶ್ ಅವರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಎಂಬ ಬಲವಾದ ವಿಶ್ವಾಸ ಹೊಂದಿದ್ದರು. 2018ರಲ್ಲಿ ಸೋಲು ಕಂಡಿದ್ದರೂ ಜನರ ಜೊತೆಗಿನ ನಂಟು
ಬಿಟ್ಟಿರಲಿಲ್ಲ. ಆದ್ರೆ, ಕಾಂಗ್ರೆಸ್ ಹೈಕಮಾಂಡ್ ಕೊನೆ ಹಂತದಲ್ಲಿ ರಾಜೇಶ್ ಅವರಿಗೆ ಕೈ ಕೊಟ್ಟು ದೇವೇಂದ್ರಪ್ಪರಿಗೆ ಟಿಕೆಟ್ ಕೊಟ್ಟಿತ್ತು. ಪಕ್ಷೇತರರಾಗಿ ಕಣಕ್ಕಿಳಿದಿದ್ದ ಹೆಚ್. ಪಿ. ರಾಜೇಶ್ ಅವರು ತೋರಿಸಿದ ಹೋರಾಟ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಬಿಜೆಪಿ ನಾಯಕರನ್ನು ನಡುಗಿಸಿತ್ತು. ಭಾರೀ ಕಡಿಮೆ ಅಂತರದಲ್ಲಿ ಸೋಲು ಕಂಡ ಹೆಚ್. ಪಿ. ರಾಜೇಶ್ ಅವರ ವರ್ಚಸ್ಸು, ತಾಕತ್ತು, ಶಕ್ತಿ ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಬಂಡೆದ್ದು ಸ್ಪರ್ಧಿಸಿದ್ದ ರಾಜೇಶ್ ಅವರು ಸ್ವಲ್ಪ ಹೆಚ್ಚು ಶ್ರಮ ಹಾಕಿದ್ದರೆ ಪಕ್ಷೇತರರಾಗಿ ಗೆದ್ದು ಶಾಸಕರಾಗಿಬಿಡುತ್ತಿದ್ದರು. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಂದ ಸ್ವಲ್ಪ ಹಿನ್ನೆಡೆ ಆಯ್ತು. ಇಲ್ಲದಿದ್ದರೆ ರಾಜೇಶ್ ಗೆಲ್ಲುತ್ತಿದ್ದರು.

ಪಕ್ಷೇತರರಾಗಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದರೂ ಪಡೆದಿದ್ದ ಮತಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸೆಡ್ಡು ಹೊಡೆದಿದ್ದರು. ಇದೀಗ ಅವರ ಮುಂದಿನ ಹಾದಿ ಯಾವ ಪಕ್ಷದತ್ತ ಎಂಬ ಕುತೂಹಲ ಗರಿಗೆದರಿದೆ. ಈಗಾಗಲೇ ಒಂದು ಸುತ್ತಿನ ಅಭಿಮಾನಿಗಳು, ಮುಖಂಡರ ಜೊತೆ ಸಭೆ ನಡೆಸಿರುವ ಹೆಚ್. ಪಿ. ರಾಜೇಶ್ ಅವರು ಬಿಜೆಪಿ ಸೇರುವುದು ಖಚಿತ ಎಂದು ತಿಳಿದು ಬಂದಿದೆ. ಮುಂಬರುವ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ರಾಜೇಶ್ ಅವರನ್ನು ಕರೆತಂದಿದ್ದರೆ ಜಗಳೂರು ತಾಲೂಕು ಮಾತ್ರವಲ್ಲ, ಜಿಲ್ಲೆಯಲ್ಲಿರುವ ವಾಲ್ಮೀಕಿ ಸಮಾಜದ ಮತಗಳು ಬಿಜೆಪಿಗೆ ಬರುವ ಲೆಕ್ಕಾಚಾರವೂ ಅಡಗಿದೆ. ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಮೋಸ ಮಾಡಿದೆ ಎಂಬ ಟ್ರಂಪ್ ಕಾರ್ಡ್ ಉಪಯೋಗಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿ ರಾಜೇಶ್ ಅವರ ವರ್ಚಸ್ಸು ಪಡೆದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಕೇಸರಿ ಪಡೆಯಲ್ಲಿದೆ.

ಪಕ್ಷೇತರ ಪರಾಜಿತ ಅಭ್ಯ ರ್ಥಿ ಮಾಜಿ ಶಾಸಕ ಎಚ್.ಪಿ ರಾಜೇಶ್ ಅವರು ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿಚಾರ ನಿಗೂಢವಾಗಿದ್ದರೂ, ಕಾಂಗ್ರೆಸ್ ನಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸು, ಜನಪ್ರಿಯತೆ, ಕುಸಿಯುತ್ತಿರುವ ಕಾಂಗ್ರೆಸ್ ಜನಪ್ರಿಯತೆ ಎಲ್ಲವನ್ನೂ ಪರಾಮರ್ಶಿಸಿದರೆ ಬಿಜೆಪಿಗೆ ಹೋಗುವುದೇ ಲೇಸು ಎಂಬ ನಿರ್ಧಾರಕ್ಕೆ ರಾಜೇಶ್ ಬಂದಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಸದ್ಯದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರಾಜೇಶ್ ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ಜಗಳೂರು ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಎಚ್. ಪಿ. ರಾಜೇಶ್ ರಾಷ್ಟ್ರೀಯ ಪಕ್ಷವೊಂದರಲ್ಲಿ ಸೇರುವ ನಿಲುವು ಪ್ರಕಟಿಸುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಸ್ಪಷ್ಟ ನಿರ್ಧಾರ ಸಿಗಲಿಲ್ಲ. ಆದರೂ,ಸಭೆಯಲ್ಲಿ ಮಹತ್ತರ ಬೆಳವಣಿಗೆಗಳು ನಡೆದವು.

ಸಭೆಯಲ್ಲಿ ಹಲವು ಮುಖಂಡರು ಟಿಕೆಟ್ ತಪ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಬೇಕು ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಉಳಿದಂತೆ ಕೆಲ ಮುಖಂಡರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ತಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ. ಆದರೆ ತಮ್ಮ ಸ್ಥಾನ ಭದ್ರಪಡಿಸಿಕೊಂಡು ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,10 ವರ್ಷ ಪಕ್ಷ ನಿಷ್ಠೆಯಿಂದ ಶ್ರಮಿಸಿದೆ. ಅಲ್ಲದೇ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಅತಿಹೆಚ್ಚು ಅಧ್ಯಕ್ಷ ಸ್ಥಾನಗಳಿಸಿದ ಇತಿಹಾಸವಿದೆ. ಆದರೂ ನನಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೈತಪ್ಪಿತು. ಆ ವೇಳೆ ನನಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನಡೆಸಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಿಂದ ಸ್ವಾಭಿಮಾನಿ ಕಾರ್ಯಕರ್ತರ ವ್ಯಾಪಕ ಬೆಂಬಲದಿಂದ ಕೇವಲ 1250 ಮತಗಳ ಅಂತರದ ಸೋಲು ನನಗೆ ಸೋಲು ಎನಿಸದೆ ತೃಪ್ತಿತಂದಿದೆ. ಆದರೆ ಶಾಸಕನಾಗಿ ಆಯ್ಕೆಯಾಗುವ ಅದೃಷ್ಟ ಸಿಗಲಿಲ್ಲ. ಕಷ್ಟ ಕಾಲದಲ್ಲಿ ಕೈಹಿಡಿದ ಮತದಾರರಿಗೆ ಸದಾ ಚಿರಋಣಿ ಎಂದು ಭಾವುಕರಾದರು.

ಕಾಂಗ್ರೆ ಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರು ಸಂಪರ್ಕಿಸಿ ಆಹ್ವಾನಿಸಿದ್ದಾರೆ. ಆದರೆ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳದೇ ಯಾವುದೇ ಆಮಿಷಕ್ಕೆ ಒಳಗಾಗದೇ, ನನ್ನ ಅಭಿಮಾನಿ ದೇವರು ಸ್ವಾಭಿಮಾನಿ ಕಾರ್ಯಕರ್ತರು. ಯಾವುದೇ ಆಸೆ, ಆಮೀಷಗಳಿಗೆ ಬಲಿಯಾಗಿ ಸ್ವಾಭಿಮಾನ ಬಿಟ್ಟುಕೊಡುವ ವ್ಯಕ್ತಿ ಅಲ್ಲ. ನನ್ನನ್ನೇ ನಂಬಿರುವ ತಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ಇಂದಿನ ಸಭೆಯ ಅಭಿಪ್ರಾಯ ಕ್ರೂಢೀಕರಿಸಿ ನಂತರ ಮತ್ತೊಂದು ಮಹತ್ವದ ನಿರ್ಣಯ ಸಭೆ ನಡೆಸಿ ನಮಗೆ ಗೌರವಿಸುವ, ಸ್ವಾಭಿಮಾನಕ್ಕೆ ಧಕ್ಕೆ ತಾರದ ಪಕ್ಷಕ್ಕೆ ಲೋಕಸಭಾ ಚುನಾವಣೆ ವೇಳೆಗೆ ಸೇರ್ಪಡೆಯಾಗುವ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದರು.

ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ಹಳ್ಳಿಗಳಲ್ಲಿ ಮನೆಮನೆಗೆ ಪ್ರಚಾರಪಡಿಸುವಾಗ ಹಾಲಿ ಶಾಸಕ ಬಿ. ದೇವೇಂದ್ರಪ್ಪ ಅವರು ಟಿಕೆಟ್ ಗಾಗಿ ಬೆಂಗಳೂರಿಗೆ ಪದೇ ಪದೇ ತೆರಳುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದರು.

ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಎಲ್ಲಾ ನಿರೀಕ್ಷೆಯಿತ್ತು. ಆಗ ಸ್ವಾಭಿಮಾನಿ ಪಕ್ಷದಿಂದ ನಾನು ಸ್ಪರ್ಧಿಸಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು. ಅದನ್ನು ಮರೆತು ಹಾಲಿ ಶಾಸಕರು ತೆಂಗಿನಮರ ಗುರುತಿಗೆ ಮತ ಚಲಾಯಿಸಿದವರನ್ನು ತಾತ್ಸಾರ ಮಾಡುವುದು ಸರಿಯಲ್ಲ ಎಂದರು. ಒಟ್ಟಿನಲ್ಲಿ ಹೆಚ್. ಪಿ. ರಾಜೇಶ್ ಅವರನ್ನು ಬಿಜೆಪಿಗೆ ಸೆಳೆಯುವತ್ತ ಕಮಲ ನಾಯಕರು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಕಾಂಗ್ರೆಸ್ ನತ್ತ ಸೆಳೆಯಲು ಪ್ರಯತ್ನ ಮುಂದುವರಿಸಿದ್ದಾರೆ. ರಾಜೇಶ್ ಅವರ ಅಂತಿಮ ನಿರ್ಧಾರ ಏನು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಇನ್ನು ಕಾಂಗ್ರೆಸ್ ಮುಖಂಡರು ಯಾವ ರೀತಿ ಹೆಚ್. ಪಿ.ರಾಜೇಶ್ ಅವರನ್ನು ಕಾಂಗ್ರೆಸ್ ಗೆ ಸೆಳೆಯಲು ಪ್ರಯತ್ನಿಸುತ್ತಾರೋ ಕಾದು ನೋಡಬೇಕಿದೆ. ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ ಅವರ ನಡೆ ನಿಗೂಢವಾಗಿದ್ದು, ಬಿಜೆಪಿ ಸೇರುವುದು ಖಚಿತ ಎಂದು ರಾಜೇಶ್ ರ ಆಪ್ತ ಮೂಲಗಳು ತಿಳಿಸಿವೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment