SUDDIKSHANA KANNADA NEWS/ DAVANAGERE/ DATE:10-09-2023
ದಾವಣಗೆರೆ (Davanagere): ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಮಾಜಿ ಶಾಸಕ ಗುರುಸಿದ್ದನಗೌಡ, ದಾವಣಗೆರೆ (Davanagere) ಸಂಸದ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಜೊತೆಗೆ ಗುಟುರು ಸಹ ಹಾಕಿದ್ದಾರೆ.
ನೂತನ್ ಕಾಲೇಜು ಸಮೀಪದ ತನ್ನ ನಿವಾಸದಲ್ಲಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮವದರ ಜೊತೆ ಮಾತನಾಡಿದ ಅವರು, ಸಿದ್ದೇಶ್ವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಈ ಸುದ್ದಿಯನ್ನೂ ಓದಿ:
M. P. Renukacharya: ಗುರುಸಿದ್ದನಗೌಡರ ಪರ ಬ್ಯಾಟಿಂಗ್: ಬಿಜೆಪಿ ಜಿಲ್ಲಾಧ್ಯಕ್ಷರು, ನಾಯಕರ ವಿರುದ್ಧ ರೇಣುಕಾಚಾರ್ಯ ಗರಂ..!
ದಾವಣಗೆರೆ (Davanagere) ಬಿಜೆಪಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ಆಗಲು ಕಾರಣ ಸಂಸದ ಸಿದ್ದೇಶ್ವರ ಅವರು. ಚಿತ್ರದುರ್ಗದಲ್ಲಿದ್ದ ಅವರ ಅಪ್ಪ ಮಲ್ಲಿಕಾರ್ಜುನಪ್ಪ ಅವರನ್ನು ದಾವಣಗೆರೆಗೆ ಕರೆದುಕೊಂಡು ಬಂದಿದ್ದು ನಾನೇ. ಆಗ ಜಿ. ಎಂ. ಸಿದ್ದೇಶ್ವರ್ ಎಲ್ಲಿದ್ದರು ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು, ತಂದೆ ಮಲ್ಲಿಕಾರ್ಜುನಪ್ಪ ಅವರು ದಾವಣಗೆರೆಗೆ ಬಂದ ಬಳಿಕ ಬಂದವರು. ನಮ್ಮ ಅಪ್ಪ ಬಿಜೆಪಿಗೆ ಹೋಗಿ ಗೆದ್ದ ಬಳಿಕ ನಾನು ಬಿಜೆಪಿಗೆ ಬರುತ್ತೇನೆ ಎಂದು ಹೇಳಿದ್ದ ಮನುಷ್ಯ. ಈಗ ಬಿಜೆಪಿ ಕಾರ್ಯಕರ್ತರ ಬಗ್ಗೆ ಲಘುವಾಗಿ ಮಾತನಾಡುವುದು, ಉದಾಸೀನತೆಯಿಂದ ವರ್ತನೆ ತೋರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಗುಡುಗಿದರು.
ಸಿದ್ದೇಶ್ವರ ಅವರ ಎಲ್ಲಾ ನಡವಳಿಕೆಗಳ ವಿರುದ್ಧ ಕೇಂದ್ರದ ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇವೆ. ನನ್ನ ಪುತ್ರ ರವಿಕುಮಾರ್ ಮುಂಬರುವ 2024ರ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಸಿದ್ದೇಶ್ವರ ಅವರಿಗೆ ಟಿಕೆಟ್ ಕೈ ತಪ್ಪುವ ಭೀತಿಯಿಂದ ಈ ರೀತಿಯ ಷಡ್ಯಂತ್ರ ಮಾಡಲಾಗಿದೆ. ನಮ್ಮನ್ನು ಉಚ್ಚಾಟನೆ ಮಾಡುವ ಹಿಂದೆ ಈ ಒಂದೂ ಕಾರಣವಿರಬಹುದು ಎಂದು ಹೇಳಿದರು.
ಎಂ. ಪಿ. ರೇಣುಕಾಚಾರ್ಯರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಯಾರ ವಿರುದ್ಧವೂ ಮಾತನಾಡಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಕಾರಣಕ್ಕೆ ಭೇಟಿ ಮಾಡಿದರು. ಇದೊಂದು ಸೌಜನ್ಯ ಹಾಗೂ ಸೌಹಾರ್ದಯುತ ಭೇಟಿ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಕಷ್ಟಪಟ್ಟು ಕಟ್ಟಿದ್ದೇವೆ. ಇಂದು ಶಕ್ತಿಶಾಲಿಯುತವಾಗಿದೆ. ಇದನ್ನು ಮತ್ತಷ್ಟು ಬಲಿಷ್ಠಗೊಳಿಸಲು ಎಲ್ಲರೂ ಶ್ರಮಿಸಬೇಕು. ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು, ಹಿರಿಯರಿಗೆ ಗೌರವ ಸಿಗುವಂತಾಗಬೇಕು. ಯಾರೊಬ್ಬರ ಕೈಯಲ್ಲಿ ಬಿಜೆಪಿ ಇರಬಾರದು ಎಂಬುದು ನಮ್ಮ ಅಪೇಕ್ಷೆ ಎಂದು ಗುರುಸಿದ್ದನಗೌಡ ಹೇಳಿದರು.