SUDDIKSHANA KANNADA NEWS/ DAVANAGERE/ DATE:11-03-2025
ದಾವಣಗೆರೆ: ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೇ ಅನಧಿಕೃತವಾಗಿ ತಂಬಾಕು ಬೆಳೆಯುತ್ತಿರುವುದು ಕಂಡು ಬಂದಿದ್ದು, ಈ ಕುರಿತು ಪರವಾನಗಿ ಇಲ್ಲದೆ ತಂಬಾಕು ಬೆಳೆಯುತ್ತಿರುವ ಬಗ್ಗೆ ವರದಿ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ, ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಕೋಟ್ಪಾ-2003 ರ ಕಾಯ್ದೆಯ ಸೆಕ್ಷನ್-6ಬಿ ಅನುಸಾರ ಶೈಕ್ಷಣಿಕ ಸಂಸ್ಥೆಗಳ 100 ಗಜಗಳ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆಯವರು ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಸುತ್ತ-ಮುತ್ತ ತಂಬಾಕು ಬಳಕೆಯಾಗದಂತೆ ಶೈಕ್ಷಣಿಕ ಸಂಸ್ಥೆಯವರು ಕ್ರಮಕೈಗೊಳ್ಳುವುದು. ಮತ್ತು ರಾಜ್ಯ ಮಟ್ಟದಿಂದ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ ಕುರಿತಂತೆ ಮೊಬೈಲ್ ಆಪ್ ಅನುಷ್ಠಾನಗೊಳಿಸಿದ್ದು, ಕಡ್ಡಾಯವಾಗಿ ಮುಖ್ಯೋಪಾಧ್ಯಾಯರು ಮೊಬೈಲ್ ಆಪ್ ಮುಖಾಂತರ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಜಿ.ಡಿ ಮಾತನಾಡಿ ಅವರು ಹಿಂದಿನ ತ್ರೈಮಾಸಿಕ ಸಭೆಯ ಅನುಪಾಲನಾ ವರದಿಯನ್ನು ಮಂಡಿಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನವದೆಹಲಿ ಸೆಕ್ಷನ್-7 ರ ಅಡಿಯಲ್ಲಿ ಹೊರಡಿಸಿರುವ ಆದೇಶದಂತೆ, ತಯಾರಕರು ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಠ ಆರೋಗ್ಯದ ಎಚ್ಚರಿಕೆ ಸಂದೇಶಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಈ ಕುರಿತಂತೆ ಕ್ರಮ ಕೈಗೊಳ್ಳಬೇಕು, ಏಪ್ರಿಲ್-2025 ರಿಂದ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಂಗಡಿ, ಮಾಲೀಕರು ಟ್ರೇಡ್ ಲೈಸನ್ಸ್ ಜೊತೆಗೆ ತಂಬಾಕು ಪರವಾನಗಿ, ಮಾರಾಟ ಲೈಸನ್ಸ್ ಪಡೆದುಕೊಳ್ಳುವಂತೆ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಂಡಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್ ಮಾತನಾಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಪ್ರಸಕ್ತ ಸಾಲಿನಲ್ಲಿ 101 ಶಾಲಾ ಅರಿವು ಕಾರ್ಯಕ್ರಮಗಳನ್ನು, ತಂಬಾಕು ವ್ಯಸನಿಗಳಿಗೆ 54 ಗುಂಪು ಚರ್ಚೆಗಳನ್ನು
ಮಾಡಲಾಯಿತು. ಹಾಗೂ 77 ತಂಬಾಕು ದಾಳಿಗಳನ್ನು ಕೈಗೊಂಡು 935 ಪ್ರಕರಣಗಳನ್ನು ದಾಖಲಿಸಿ ರೂ.1,32,235 ದಂಡವನ್ನು ವಿಧಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಪೊಲೀಸ್ ಠಾಣೆಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದರಿಂದ ಶಾಲಾ ವಲಯಗಳಲ್ಲಿ ಮಾರಾಟ ಮಾಡಿರುವುದರಿಂದ ಫೆಬ್ರವರಿ-2025 ರ ಮಾಹೆಯಲ್ಲಿ 913 ಪ್ರಕರಣ ದಾಖಲಿಸಿ ರೂ. 1,82,700 ದಂಡವನ್ನು ವಿಧಿಸಿ ಹಾಗೂ 2 ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಸಭೆಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಾನಾಯ್ಕ, ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಡಾ|| ಷಣ್ಮುಖಪ್ಪ.ಎಸ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ನಾಗೇಂದ್ರಪ್ಪ, ಜಿಲ್ಲಾ ಕಾರಾಗೃಹ ಪೊಲೀಸ್ ಅಧೀಕ್ಷಕರಾದ ಆನಂದ್ ಸಿ.ಬಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೋಟ್ರೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಉಪಸ್ಥಿತಿರಿದ್ದರು.