ಮುಂಬೈ: ಬಾಲಿವುಡ್ ಹಿರಿಯ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನೀತಾ ಆಹುಜಾ ನಡುವಿನ ಕೌಟುಂಬಿಕ ಕಲಹ ಮತ್ತು ಅಫೇರ್ ವದಂತಿಗಳು ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ಗೋವಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಪತ್ನಿ ಸುನೀತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಮೌನ ಮುರಿದಿರುವ ಗೋವಿಂದ, ಪತ್ನಿ ಸುನೀತಾ ಅವರಿಗೆ “ನಿಮ್ಮ ಹದ್ದಿನಲ್ಲಿ ಇರಿ” ಎಂದು ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ.
ಸಮಸ್ಯೆಗೆ ಕಾರಣವೇನು?
ಇತ್ತೀಚೆಗೆ ‘ರೂಪಾ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಟಿ ಕೋಮಲ್ ರಾಣಿ ಜೊತೆ ಗೋವಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಪಾರಾಜಿಗಳ ಜೊತೆ ಮಾತನಾಡಿದ್ದ ಸುನೀತಾ, “ನನ್ನ ಮಗಳ ವಯಸ್ಸಿನ ಹುಡುಗಿಯ ಜೊತೆ ಗೋವಿಂದ ತಿರುಗಾಡುತ್ತಿದ್ದಾರೆ. ಅವರಿಗೆ ಸ್ವಲ್ಪ ಆದರೂ ನಾಚಿಕೆ ಇರಬೇಕು, ಪ್ರಚಾರ ಮಾಡುವ ಮೊದಲು ಸಿನಿಮಾ ಮುಗಿಯಬೇಕು” ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ಶೂಗರ್ ಡ್ಡ್ಯಾಡಿ ಎಂದೂ ಕಾಲೆಳೆದಿದ್ದರು.
ಗೋವಿಂದ ನೀಡಿದ ಸ್ಪಷ್ಟನೆ ಹಾಗೂ ಆರೋಪಗಳು:
ಕೆಲಸದಲ್ಲಿ ಹಸ್ತಕ್ಷೇಪ: ಸುನೀತಾ ತಮ್ಮ ವೃತ್ತಿಜೀವನ ಹಾಗೂ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ನನ್ನ ಕೆಲಸದ ವಿಷಯದಲ್ಲಿ ಅವರು ಹಸ್ತಕ್ಷೇಪ ಮಾಡಬಾರದು.
ಭಾಷೆಯ ಬಳಕೆ: ಸಾರ್ವಜನಿಕವಾಗಿ ಸುನೀತಾ ಬಳಸುತ್ತಿರುವ ಭಾಷೆ ಮತ್ತು ಗાળಿಗಳಿಂದ ಕಿರಿಯರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇಂತಹ ಕೆಟ್ಟ ಭಾಷೆ ಬಳಕೆಯನ್ನು ಅವರು ನಿಲ್ಲಿಸಬೇಕು.
ವಯಸ್ಸಿನ ಅಂತರದ ಸಮರ್ಥನೆ: ಚಿತ್ರರಂಗದ ಪ್ರಮುಖ ನಟರೆಲ್ಲರೂ ತಮಗಿಂತ ಕಿರಿಯ ನಟಿಯರೊಂದಿಗೆ ಅಭಿನಯಿಸಿದ್ದಾರೆ, ಇದರಿಂದ ಸಿನಿಮಾಗಳು ಹಾಗೂ ನಟರ ಯೌವನದ ಲುಕ್ ಉಳಿಯುತ್ತದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಹದ್ದಿನಲ್ಲಿರಿ ಎಂದು ಎಚ್ಚರಿಕೆ: ಸುನೀತಾ ಅವರ ಹಿಂದೆ ಒಂದು “ಗ್ಯಾಂಗ್” ಕೆಲಸ ಮಾಡುತ್ತಿದೆ. ಭವಿಷ್ಯದಲ್ಲಿ ಅವರಿಗೂ ನನ್ನ ಸಹಾಯ ಬೇಕಾಗಬಹುದು, ಆದ್ದರಿಂದ “ಸ್ವಲ್ಪ ನಿಮ್ಮ ಹದ್ದಿನಲ್ಲಿ ಇರಿ” ಎಂದು ಪತ್ನಿಗೆ ಎಚ್ಚರಿಕೆ ನೀಡಿದ್ದಾರೆ.





Leave a comment