ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಕೇಂದ್ರದ ಮಾಜಿ ಸಚಿವರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯರಾದ ಡಾ. ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನವನ್ನು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಉಪಕುಲಪತಿಗಳು, ಕುಲಸಚಿವರು, ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು ಹಾಗೂ ಬೋಧಕ ಮತ್ತು ಬೋಧಕೇತರ ಜಿಎಂ ಶೈಕ್ಷಣಿಕ ಸಮೂಹ ಸಂಸ್ಥೆಗಳ ಬಳಗದ ಗಣ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ವಿನಿಮಯ ಮಾಡುವ ಮೂಲಕ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಜಿ.ಎಂ. ಸಿದ್ದೇಶ್ವರ ಅವರು ಎಲ್ಲರ ಪ್ರೀತಿ, ಹಾರೈಕೆಗಳಿಗೆ ಕೃತಜ್ಞತೆ ಸಲ್ಲಿಸುತ್ತಾ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿ.ಎಂ. ವಿಶ್ವವಿದ್ಯಾಲಯವು ಪ್ರಥಮ ಸ್ಥಾನದಲ್ಲಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಕ್ಯಾಂಪಸ್ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದ ಈ ಸಾಧನೆಗೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು, ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು ಹಾಗೂ ಬೋಧಕ, ಬೋಧಕೇತರ ವರ್ಗದವರ ಶ್ರಮವೇ ಪ್ರಮುಖ ಕಾರಣ ಎಂದು ಶ್ಲಾಘಿಸಿದ ಅವರು, ಶಿಕ್ಷಕರ ಜವಾಬ್ದಾರಿಯನ್ನು ಒತ್ತಿ ಹೇಳುತ್ತಾ, “ವಿದ್ಯಾರ್ಥಿಗಳು ಕಲ್ಲಿನಂತಿದ್ದು, ಶಿಕ್ಷಕರು ಅವರನ್ನು ಶಿಲ್ಪಿಯಂತೆ ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಬೇಕು”. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ, ಸಂಸ್ಥೆಯನ್ನು ತಮ್ಮದೇ ಎಂಬ ಭಾವನೆಯಿಂದ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಜ್ಞಾನ ನೀಡಿ, ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಾಧ್ಯಾಪಕರ ಹೊಣೆ. ಆ ಮೂಲಕ ರಾಜ್ಯದಲ್ಲೇ ಜಿಎಂ ವಿಶ್ವವಿದ್ಯಾಲಯ ಹೆಸರುವಾಸಿಯಾಗುವಂತೆ ಮಾಡುವಂತೆ ಪ್ರಾಧ್ಯಾಪಕರಿಗೆ ಕಿವಿಮಾತು ಹೇಳಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ 10,500 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ವರ್ಷ ಆ ಸಂಖ್ಯೆ 12,000 ದಿಂದ 12,500 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಮುಂದಿನ 3-4 ವರ್ಷಗಳಲ್ಲಿ ವಿಶ್ವವಿದ್ಯಾಲಯದಲ್ಲಿ 15,000 ದಿಂದ 20,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. 1999-2000ನೇ ಇಸವಿಯಲ್ಲಿ ಕೇವಲ 10 ಎಕರೆ ಜಾಗದಲ್ಲಿ ಪ್ರಾರಂಭವಾದ ಸಂಸ್ಥೆ, ಹಂತಹಂತವಾಗಿ ಬೆಳೆದು ಇಂದು 52 ಎಕರೆಗಳ ವಿಶಾಲ ಕ್ಯಾಂಪಸ್ ಆಗಿ ರೂಪುಗೊಂಡಿದೆ ಎಂದು ಹೇಳಿದರು.
ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಕೇವಲ ಹೆಸರಿಗಷ್ಟೇ ಅಲ್ಲದೆ, ತಲಾ 10 ಗ್ರಾಂ ತೂಕದ ನೈಜ ಚಿನ್ನದ ಪದಕಗಳನ್ನು ನೀಡಿ ಗೌರವಿಸುವ ಮೂಲಕ ಸಂಸ್ಥೆಯು ತನ್ನ ಬದ್ಧತೆಯನ್ನು ಮೆರೆದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಉನ್ನತ ಶ್ರೇಣಿ ಪಡೆದ ಬಡ ಹಿನ್ನೆಲೆಯ ನಾಲ್ವರು ವಿದ್ಯಾರ್ಥಿಗಳಿಗೆ, ಅವರು ಪಾವತಿಸಿದ್ದ ಸಂಪೂರ್ಣ ಶುಲ್ಕವನ್ನು ವಾಪಸ್ ನೀಡುವ ಮೂಲಕ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದೆ ಎಂದು ನೆನಪಿಸಲಾಯಿತು.
ಜಿ.ಎಂ. ವಿಶ್ವವಿದ್ಯಾಲಯದ ಸಹ-ಕುಲಪತಿಗಳಾದ ಡಾ. ಎಂ. ವೇಣುಗೋಪಾಲ ರಾವ್ ಅವರು ಉಪಸ್ಥಿತರಿದ್ದು, ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ತಿಳಿಸಿದರು. ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್. ಅವರು ಸ್ವಾಗತಿಸುತ್ತಾ, ಜಿ.ಎಂ. ಸಿದ್ದೇಶ್ವರ ಅವರ ವಿಶೇಷ ಸಾಧನೆಯ ಮೆಲುಕು ಹಾಕಿದರು.
ಈ ಶುಭ ಸಂದರ್ಭದಲ್ಲಿ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ, ಶ್ರೀಶೈಲ ಎಜುಕೇಷನಲ್ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಜಿ.ಎಂ. ಪ್ರಸನ್ನ ಕುಮಾರ್, ಟ್ರಸ್ಟ್‌ನ ಖಜಾಂಚಿಗಳಾದ ಜಿ.ಎಸ್. ಅನಿತ್ ಕುಮಾರ್, ಆಡಳಿತಧಿಕಾರಿಗಳಾದ ವೈ.ಯು. ಸುಭಾಷ, ಶ್ರೀಮತಿ ಗಾಯತ್ರಿ ಸುಭಾಷ್, ಶ್ರೀಮತಿ ಪ್ರಮೀಳಾ ನಟರಾಜ್, ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜ್ ಅವರ ಪುತ್ರರಾದ ರಾಜೀವ್ ಸೇರಿದಂತೆ ಜಿಎಂ ಸೌಹಾರ್ದ ಪತ್ತಿನ ಸಹಕಾರ ಸಂಘದ ನಿರ್ದೇಶಕರು ವಿಶೇಷವಾಗಿ ಉಪಸ್ಥಿತರಿದ್ದರು.
ಕುಮಾರಿ ವೈಷ್ಣವಿ ಕೆ. ಮತ್ತು ಕುಮಾರಿ ವಿನುತಾ ಯು ಪ್ರಾರ್ಥಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಾಜೇಶ್ವರಿ ವೈ.ಎಂ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಫ್‌ಸಿಐಟಿ (FCIT) ವಿಭಾಗದ ಡೀನ್ ಡಾ. ಶ್ವೇತಾ ಮರಿಗೌಡರ್ ಅವರು ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಜನ್ಮದಿನದ ಪ್ರಯುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಹಣ್ಣು ಮತ್ತು ಪರಿಸರ ಸ್ನೇಹಿ ಸಸಿಗಳ ನೆಟ್ಟು ಪ್ರಕೃತಿ ಪ್ರೇಮ ಮೆರೆದರು.
- DAVANAGERE NEWS
- GM Lingaraj
- GM Siddeshwara 74th birthday
- GM Siddeshwara birthday
- GM University Davanagere
- GMIT Davanagere
- GMU campus Davanagere
- Gold medal GM University
- Higher education Karnataka
- ಚಿನ್ನದ ಪದಕ ಜಿಎಂ ಯುನಿವರ್ಸಿಟಿ
- ಜಿ ಎಂ ಲಿಂಗರಾಜು
- ಜಿ ಎಂ ಸಿದ್ದೇಶ್ವರ 74ನೇ ಹುಟ್ಟುಹಬ್ಬ
- ಜಿ ಎಂ ಸಿದ್ದೇಶ್ವರ ಜನ್ಮದಿನ
- ಜಿಎಂ ವಿಶ್ವವಿದ್ಯಾಲಯ ದಾವಣಗೆರೆ
- ಜಿಎಂಐಟಿ ದಾವಣಗೆರೆ
- ದಾವಣಗೆರೆ ಸುದ್ಧಿ
- ಶಿಕ್ಷಣ ಸಂಸ್ಥೆಗಳು ದಾವಣಗೆರೆ
- ಶೈಕ್ಷಣಿಕ ಪ್ರಗತಿ






Leave a comment