Home ಕ್ರೈಂ ನ್ಯೂಸ್ ದಾವಣಗೆರೆ ಜಿಲ್ಲೆಯ ಜಗಳೂರಿನ ಬಡವರ ಅಕ್ಕಿ ಕಳ್ಳಸಾಗಣೆ: ಹರಿಯಾಣ ಸರ್ಕಾರದ ಮುದ್ರೆಯಿದ್ದ 403 ಗೋಣಿ ಚೀಲ ಅಕ್ಕಿ ವಶ, ಚಾಲಕ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆ ಜಿಲ್ಲೆಯ ಜಗಳೂರಿನ ಬಡವರ ಅಕ್ಕಿ ಕಳ್ಳಸಾಗಣೆ: ಹರಿಯಾಣ ಸರ್ಕಾರದ ಮುದ್ರೆಯಿದ್ದ 403 ಗೋಣಿ ಚೀಲ ಅಕ್ಕಿ ವಶ, ಚಾಲಕ ಅರೆಸ್ಟ್!

Share
ದಾವಣಗೆರೆ
Share

ದಾವಣಗೆರೆ: ಬಡವರಿಗೆ ವಿತರಿಸಲು ಮೀಸಲಿಟ್ಟಿದ್ದ ಸರ್ಕಾರದ ಪಡಿತರ ಅಕ್ಕಿಯನ್ನು ಕಾನೂನುಬಾಹಿರವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಜಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಕಾನನಕಟ್ಟೆ ಟೋಲ್ ಬಳಿ ಈ ದಾಳಿ ನಡೆದಿದ್ದು, ಸುಮಾರು 403 ಚೀಲ ಪಡಿತರ ಅಕ್ಕಿ ಹಾಗೂ ಕೃತ್ಯಕ್ಕೆ ಬಳಸಿದ್ದ ಐಷರ್ (Eicher) ಕ್ಯಾಂಟರ್ ಲಾರಿಯನ್ನು ಜಪ್ತಿ ಮಾಡಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ:

ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ಐಪಿಎಸ್ ರವರಿಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಐಜಿಪಿ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಜಗಳೂರು ಪೊಲೀಸ್ ನಿರೀಕ್ಷಕ ಶ್ರೀ ಸಿದ್ರಾಮಯ್ಯ ಬಿ.ಎಂ ಹಾಗೂ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಶ್ರೀ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಜಗಳೂರು ತಾಲ್ಲೂಕು ಆಹಾರ ನಿರೀಕ್ಷಕರಾದ ಶ್ರೀ ಶಿವಪ್ರಕಾಶ್ ಎನ್.ವಿ. ಅವರೊಂದಿಗೆ ಜಂಟಿಯಾಗಿ ಪೊಲೀಸರು ಕಾನನಕಟ್ಟೆ ಟೋಲ್ ಬಳಿ ಹೊಂಚು ಹಾಕಿ ಕುಳಿತಿದ್ದರು.

ಹರಿಯಾಣ ಸರ್ಕಾರದ ಮುದ್ರೆ ಪತ್ತೆ:

ಈ ವೇಳೆ ಹೆದ್ದಾರಿಯಲ್ಲಿ ಬಂದ ಕೆಎ-16-ಡಿ-6845 ಸಂಖ್ಯೆಯ ಕ್ಯಾಂಟರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ, ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ. ಲಾರಿಯ ತುಂಬಾ ಸರ್ಕಾರದ ಪಡಿತರ ಅಕ್ಕಿ ತುಂಬಿದ ಗೋಣಿ ಚೀಲಗಳನ್ನು ಲೋಡ್ ಮಾಡಲಾಗಿತ್ತು. ವಿಶೇಷವೆಂದರೆ, ವಶಪಡಿಸಿಕೊಂಡ ಈ ಚೀಲಗಳ ಮೇಲೆ ‘GOVERNMENT OF HARYANA’ (ಹರಿಯಾಣ ಸರ್ಕಾರ) ಎಂದು ಮುದ್ರಿಸಲಾಗಿತ್ತು. ಇದು ಬಡವರಿಗಾಗಿ ಸರ್ಕಾರ ಉಚಿತವಾಗಿ ನೀಡುವ ರೇಷನ್ ಅಕ್ಕಿ ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ದಾಖಲೆಗಳಿಲ್ಲದ ಸಾಗಾಟ – ಮೂವರ ವಿರುದ್ಧ ಕೇಸ್:

ಲಾರಿ ಚಾಲಕ, ಕೊಪ್ಪಳ ಜಿಲ್ಲೆಯ ವೀರೇಶ ನಿಂಗಪ್ಪ ಕುರ್ನಾಲ (26) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಾವುದೇ ಅಧಿಕೃತ ದಾಖಲೆಗಳು ಪತ್ತೆಯಾಗಿಲ್ಲ. ಅಕ್ಕಿ ಚೀಲಗಳನ್ನು ಗುರುರಾಜ ಪೋತನಾಳ್ ಹಾಗೂ ಸಿಂಗನಾಳ್ ಸುರೇಶ ಎಂಬುವವರು ಲೋಡ್ ಮಾಡಿ ಕಳುಹಿಸಿಕೊಟ್ಟಿರುವುದಾಗಿ ಚಾಲಕ ಒಪ್ಪಿಕೊಂಡಿದ್ದಾನೆ. ಜಗಳೂರು ಆಹಾರ ನಿರೀಕ್ಷಕರ ದೂರಿನ ಮೇರೆಗೆ ಸದ್ಯ ಜಗಳೂರು ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ (EC Act) ಕಲಂ 3, 7 ಹಾಗೂ ಪಿಡಿಎಸ್ ನಿಯಂತ್ರಣ ಆದೇಶ-1992ರ ಕಲಂ 18 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಲಾ 50 ಕೆಜಿ ತೂಕದ ಒಟ್ಟು 403 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ತಂಡಕ್ಕೆ ಶ್ಲಾಘನೆ:

ಯಶಸ್ವಿಯಾಗಿ ದಾಳಿ ನಡೆಸಿ ಅಕ್ರಮ ಜಾಲ ಬೇಧಿಸಿದ ಜಗಳೂರು ಇನ್ಸ್‌ಪೆಕ್ಟರ್ ಸಿದ್ರಾಮಯ್ಯ ಬಿ.ಎಂ, ಸಿಬ್ಬಂದಿಗಳಾದ ಪಕ್ಷಣ್ಣ, ನಾಗರಾಜಯ್ಯ, ನಾಗರಾಜ ಹಾಗೂ ನಾಗಭೂಷಣ ಅವರ ಸಮಯಪ್ರಜ್ಞೆ ಮತ್ತು ದಕ್ಷತೆಯನ್ನು ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles