ಫಿಲಡೆಲ್ಫಿಯಾ: ಅಮೆರಿಕದ ಫಿಲಡೆಲ್ಫಿಯಾದ ಪೆನ್ಸಿಲ್ವೇನಿಯಾ ಕನ್ವೆನ್ಷನ್ ಸೆಂಟರ್‌ನಲ್ಲಿ ಅಮೆರಿಕನ್ನಡ ಕೂಟಗಳ ಒಕ್ಕೂಟ (AKKA) ಆಯೋಜಿಸಿರುವ ‘ಅಕ್ಕಾ’ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನ ಶನಿವಾರ ವೈಭವೋಪೇತವಾಗಿ ಆರಂಭಗೊಂಡಿತು. ವಿಶ್ವದ ವಿವಿಧೆಡೆ ನೆಲೆಸಿರುವ ಸಾವಿರಾರು ಕನ್ನಡಿಗರ ಸಮಾಗಮಕ್ಕೆ ಸಾಕ್ಷಿಯಾದ ಸಮ್ಮೇಳನವು ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡಿಗರ ಜಾಗತಿಕ ಸಾಧನೆಗಳನ್ನು ಅನಾವರಣಗೊಳಿಸುವ ವಿಶಾಲ ವೇದಿಕೆಯಾಯಿತು.
‘ಅಕ್ಕಾ’ದ ರಜತ ಪಯಣಕ್ಕೆ ಶ್ರೀ ಜಗದ್ಗುರುಗಳ ಮೆಚ್ಚುಗೆ
ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ‘ಅಕ್ಕಾ’ದ ರಜತ ಮಹೋತ್ಸವವನ್ನು ಉತ್ತರ ಅಮೆರಿಕದ ಕನ್ನಡಿಗರ ಹಿರಿದಾದ ಕನಸಿನ ಸಾರ್ಥಕ ಸಾಕಾರವೆಂದು ಬಣ್ಣಿಸಿದರು. “ಇಪ್ಪತ್ತೈದು ವರ್ಷಗಳ ಹಿಂದೆ ಕನಸಾಗಿ ಕಂಡ ‘ಅಕ್ಕಾ’, ಇಂದು ರಜತ ಮಹೋತ್ಸವ ಆಚರಿಸುತ್ತಿರುವುದು ಕೇವಲ ಒಂದು ಸಂಸ್ಥೆಯ ಬೆಳವಣಿಗೆಯಲ್ಲ; ಕನ್ನಡದ ಜಾಗತಿಕ ಪಯಣದ ಮಹತ್ವದ ಮೈಲಿಗಲ್ಲು” ಎಂದು ಹೇಳಿದರು.
ದೇಶ ದೂರವಾದರೂ ನುಡಿಯ ಬಂಧ ಅಚಲ
ಅಕ್ಕಮಹಾದೇವಿಯ “ಅಕ್ಕಾ ಕೇಳವ್ವಾ, ನಾನೊಂದು ಕನಸ ಕಂಡೆ” ಎಂಬ ವಚನವನ್ನು ಸ್ಮರಿಸಿದ ಅವರು, ಉತ್ತರ ಅಮೆರಿಕದ ಕನ್ನಡಿಗರು ಕಂಡ ಹಿರಿದಾದ ಕನಸಿನ ಸಾಕಾರ ರೂಪವೇ ‘ಅಕ್ಕಾ’ ಎಂದರು. ದೇಶ ಬದಲಾದರೂ ದೇಸಿಯ ಸ್ಮೃತಿ ಬದಲಾಗುವುದಿಲ್ಲ; ನೆಲ ದೂರವಾದರೂ ನುಡಿಯ ಬಂಧ ದೂರವಾಗುವುದಿಲ್ಲ. ಸಾಗರದಾಚೆ ನೆಲೆಸಿರುವ ಕನ್ನಡಿಗರ ಹೃದಯದಲ್ಲಿ ಕನ್ನಡದ ನೆಲ, ನುಡಿ ಮತ್ತು ಸಂಸ್ಕೃತಿ ಸದಾ ಜೀವಂತವಾಗಿರುತ್ತದೆ ಎಂದರು.
ವಿಶ್ವದಾದ್ಯಂತ ವಿಸ್ತರಿಸಿದ ಕನ್ನಡದ ಸೀಮೆ
““ಭೌಗೋಳಿಕ ಕರ್ನಾಟಕಕ್ಕೆ ಗಡಿಯಿದೆ; ಕನ್ನಡದ ಕರ್ನಾಟಕಕ್ಕೆ ಗಡಿಯಿಲ್ಲ” ಎಂಬ ಅವರ ಮಾತು ಸಮ್ಮೇಳನದ ಆಶಯಕ್ಕೆ ಹೊಸ ಅರ್ಥ ನೀಡಿತು. ನಕ್ಷೆಯಲ್ಲಿ ಕರ್ನಾಟಕದ ಗಡಿ ಎಲ್ಲಿ ಮುಗಿದರೂ, ಕನ್ನಡಿಗನ ಹೃದಯದಲ್ಲಿ ಕನ್ನಡದ ಸೀಮೆ ಅಲ್ಲಿಂದಲೇ ಮತ್ತಷ್ಟು ವಿಸ್ತರಿಸುತ್ತದೆ. ಕನ್ನಡವು ಕೇವಲ ಮಾತನಾಡುವ ಭಾಷೆಯಲ್ಲ; ಅದು ಒಂದು ಜನಸಮುದಾಯದ ಸಾಮೂಹಿಕ ಸ್ಮೃತಿ, ಜೀವನಾನುಭವ, ಸಂಸ್ಕೃತಿ, ಚಿಂತನೆ ಮತ್ತು ಅಸ್ಮಿತೆಯನ್ನು ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ಜೀವಂತ ಸೇತುವೆ ಎಂದು ಅವರು ಹೇಳಿದರು.
ಮುಂದಿನ ಪೀಳಿಗೆಗೆ ಕನ್ನಡದ ಬೇರು ಪರಿಚಯಿಸುವ ಕರೆ
ವಿದೇಶದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ ಕಲಿಸುವುದು ಕೇವಲ ಭಾಷಾ ಶಿಕ್ಷಣವಲ್ಲ; ಅವರನ್ನು ತಮ್ಮ ಬೇರು, ಪರಂಪರೆ ಮತ್ತು ಪೂರ್ವಜರ ಸಾಂಸ್ಕೃತಿಕ ಸ್ಮೃತಿಯೊಂದಿಗೆ ಬೆಸೆಯುವ ಕಾರ್ಯ ಎಂದು ಪ್ರತಿಪಾದಿಸಿದರು. ಕನ್ನಡವು ಭೂತಕಾಲದ ನೆನಪಾಗಿ ಉಳಿಯದೆ ಜ್ಞಾನ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಸೃಜನಶೀಲತೆಯ ಸಮರ್ಥ ಭಾಷೆಯಾಗಿ ಬೆಳೆಯಬೇಕು. ವಿಶ್ವದ ಜ್ಞಾನವನ್ನು ಕನ್ನಡಕ್ಕೆ ತರುವುದರ ಜೊತೆಗೆ ಕನ್ನಡದ ಜ್ಞಾನವನ್ನು ವಿಶ್ವಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
‘ಅಕ್ಕಾ’ ಸಾಂಸ್ಕೃತಿಕ ಸೇತುವೆಯಾಗಿ ಬೆಳೆಯಲಿ
‘ಅಕ್ಕಾ’ದ ಮುಂದಿನ ಪಯಣವು ಕೇವಲ ಸಮ್ಮೇಳನಗಳ ಆಯೋಜನೆಗೆ ಸೀಮಿತವಾಗದೆ, ತಾಯ್ನುಡಿಯಿಂದ ತಾಯ್ನಾಡಿಗೆ, ಪರಂಪರೆಯಿಂದ ಮುಂದಿನ ಪೀಳಿಗೆಗೆ ಮತ್ತು ಕನ್ನಡದಿಂದ ವಿಶ್ವಮಾನವೀಯತೆಗೆ ಸೇತುವೆಯಾಗಬೇಕು ಎಂದು ಆಶಿಸಿದರು. ವಿಶ್ವದ ಕನ್ನಡಿಗರ ಹೃದಯಗಳಲ್ಲಿ ಕನ್ನಡದ ಅಖಂಡ ದೀಪ ನಿರಂತರವಾಗಿ ಬೆಳಗಲಿ ಎಂದು ಹಾರೈಸಿದರು.
ಭಕ್ತಿ–ಗೌರವದಿಂದ ಜಗದ್ಗುರುಗಳಿಗೆ ಆದರ
‘ಅಕ್ಕಾ’ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಯೋಜಕರು ಪೂಜನೀಯ ಶ್ರೀ ತರಳಬಾಳು ಜಗದ್ಗುರುಗಳುಯವರನ್ನು ಅತ್ಯಂತ ಭಕ್ತಿಯಿಂದ ಗೌರವಿಸಿದರು. ಶ್ರೀ ಜಗದ್ಗುರುಗಳವರ ಅಮೆರಿಕಾ ಪ್ರವಾಸ ಹಾಗೂ ‘ಅಕ್ಕಾ’ ರಜತ ಮಹೋತ್ಸವ ಸಮ್ಮೇಳನದ ಸಾನ್ನಿಧ್ಯವು ಕನ್ನಡಿಗರಲ್ಲಿ ವಿಶೇಷ ಭಕ್ತಿ ಮತ್ತು ಸಂಭ್ರಮ ಮೂಡಿಸಿತು. ಜಗದ್ಗುರುಗಳ ಆಶೀರ್ವಚನವನ್ನು ಭಕ್ತಿಯಿಂದ ಆಲಿಸಿದ ಕನ್ನಡಿಗರು, ಕನ್ನಡದ ಜಾಗತಿಕ ಏಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಕುರಿತ ಅವರ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಕ್ಕ’ದ ಮುಂದಿನ ಪಯಣವು ಕೇವಲ ಸಮ್ಮೇಳನಗಳನ್ನು ಆಯೋಜಿಸುವುದಕ್ಕೆ ಸೀಮಿತವಾಗದೆ, ತಾಯ್ನುಡಿಯಿಂದ ತಾಯ್ನಾಡಿಗೆ, ಪರಂಪರೆಯಿಂದ ಮುಂದಿನ ಪೀಳಿಗೆಗೆ ಮತ್ತು ಕನ್ನಡದಿಂದ ವಿಶ್ವಮಾನವೀಯತೆಗೆ ಸಂಪರ್ಕ ಕಲ್ಪಿಸುವ ಸಾಂಸ್ಕೃತಿಕ ಸೇತುವೆಯಾಗಬೇಕು ಎಂದು ಆಶಿಸಿದರು. “ಕನ್ನಡಿಗರು ಎಲ್ಲೆಲ್ಲಿ ನೆಲೆಸಿದ್ದಾರೋ ಅಲ್ಲೆಲ್ಲ ಕನ್ನಡದ ಕಂಪು, ಕನ್ನಡದ ಕರುಳು, ಕನ್ನಡದ ಕೀರ್ತಿ ಮತ್ತು ಕನ್ನಡದ ಕರುಣೆ ಪಸರಿಸಲಿ. ವಿಶ್ವದ ಕನ್ನಡಿಗರ ಹೃದಯಗಳಲ್ಲಿ ಕನ್ನಡದ ಅಖಂಡ ದೀಪ ಎಂದೆಂದಿಗೂ ಬೆಳಗುತ್ತಿರಲಿ” ಎಂದು ಹಾರೈಸಿದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯ ಸಚಿವ ಶಿವರಾಜ ತಂಗಡಗಿ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಸರವಣ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಮ್ಮೇಳನಕ್ಕೆ ಶುಭ ಹಾರೈಸಿದರು.





Leave a comment