Home ದಾವಣಗೆರೆ ದಾವಣಗೆರೆಯಲ್ಲಿ ಜೂನ್ 19 ರಿಂದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಜೂನ್ 19 ರಿಂದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ

Share
ದಾವಣಗೆರೆ
Share

ದಾವಣಗೆರೆಯಲ್ಲಿ ‘ಗಂಡನಿಗೆ ತಕ್ಕ ಹೆಂಡತಿ’

ಹೌದು. ದಾವಣಗೆರೆಯಲ್ಲಿ ಇದೇ ಜೂನ್ 19 ರಿಂದ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ ಪ್ರಾರಂಭ. ಪಿ. ಬಿ. ರಸ್ತೆಯ ಬಿ.ಎಸ್.ಸಿ; ಅವರ ಜಾಗದಲ್ಲಿ ಪಾಪು ಕಲ್ಲೂರ ಒಡೆತನದ ಶ್ರೀಗುರು ಹೊಳೆ ಹುಚ್ಚೇಶ್ವರ ನಾಟಕ ಸಂಘದ ‘ಗಂಡನಿಗೆ ತಕ್ಕ ಹೆಂಡತಿ’ಯ ಅದ್ದೂರಿ ಆರಂಭ. ಇದು ಈಗಾಗಲೇ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ಕಲಬುರ್ಗಿ, ಬಾಗಲಕೋಟ, ಶಿರಸಿ ಮೊದಲಾದ ಊರುಗಳಲ್ಲಿ ನೂರಾರು ಪ್ರದರ್ಶನ ಕಂಡ ಸಂವೇದನಾಶೀಲ ಸಾಮಾಜಿಕ ನಾಟಕ.

ಮಟಮಟ ಮಧ್ಯಾಹ್ನದ ನಟ್ಟನಡು ಹೊತ್ತಲ್ಲೇ ಜೀವಬಿಟ್ಟು ಎದ್ದುಹೋದ ಹುಚ್ಚು ಹರೆಯದ ಕವಿಮಿತ್ರ ಮಹೇಶ ಕಲ್ಲೋಳ. ಹೋಗುವ ಮುನ್ನ ಯಾರಿಗೊಂದು ಮಾತನ್ನೂ ಹೇಳದೇ ಕತೆಯ ‘ಜೀವಲಯ’ ಕೊಟ್ಟು ಆತ ಬರೆದ ನಾಟಕವಿದು. ಅವನ ಕಾಲದ ಕವಿಗಳಲ್ಲದ ಕೆಲವು ಸೋಗಲಾಡಿ ನಾಟಕಕಾರರು ಚೋರ್ಮಾಟಿ ಮಾರಯ್ಯಗಳೇ ಆಗಿದ್ದರು. ಅದರಲ್ಲೊಬ್ಬರು ವಿಶೇಷ ಚೇತನ ವಸ್ತು ನೆಪದಲ್ಲಿ ಕಾರ್ಪೊರೇಟ್ ಟಿಆರ್ಪಿ ಟ್ರಿಕ್ ಬಳಸಿ, ಜಾಲತಾಣಗಳ ತಳುಕಿನ ಗೀಳು, ಹಣದ ಥೈಲಿ ಮತ್ತು ಅಮಲು ಕೀರ್ತಿಯ ಫಲಾನುಭವಿಯೇ ಆಗಿಬಿಟ್ಟರು.

ಆದರೆ ಕಲ್ಲೋಳ ಕವಿ ಮತ್ತು ಆತನ ನಾಟಕಗಳ ತಾತ್ವಿಕ ಅನುಸಂಧಾನಗಳನ್ನು ಅಂಥ ಸಾಲಿಗೆ ಸಮೀಕರಿಸಿ ನೋಡಲಾಗದು. ಸೋಪಜ್ಞತೆಯ ಈ ನಾಟಕ ಯಾವುದೇ ಮುಜುಗರವಿಲ್ಲದೇ ಕುಟುಂಬದ ಸದಸ್ಯರೆಲ್ಲರೂ ಕುಂತು ನೋಡಬಹುದಾದ ಸದಭಿರುಚಿ ಸೃಜಿಸುವ ರಂಗಪ್ರಯೋಗ. ಮೇಲಾಗಿ ನಮ್ಮ ದಾವಣಗೆರೆ ಎಂಬ “ಕರ್ನಾಟಕದ ನಡುನಾಡು” ವೃತ್ತಿ ರಂಗಭೂಮಿಯ ಮಹಾಮನೆ. ನೂರಕ್ಕೂ ಹೆಚ್ಚು ನಾಟಕ ಕಂಪನಿಗಳಿಗೆ ಆಶ್ರಯ ನೀಡಿದ ಸಹೃದಯ ತವರೂರು. ನಿಸ್ಸಂದೇಹವಾಗಿ ವೃತ್ತಿರಂಗದ ಆಡುಂಬೊಲ.

ನಾಟಕ ಕಂಪನಿಗಳ ಐತಿಹಾಸಿಕ ಚರಿತ್ರೆಯಷ್ಟೇ ಪ್ರಸಿದ್ಧವಾದುದು ದಾವಣಗೆರೆಯಲ್ಲಿ ಕ್ಯಾಂಪ್ ಮಾಡಿದ ಕಂಪನಿಗಳ ಕಥನ ಚರಿತೆ. ಹೀಗಾಗಿ ಕನ್ನಡ ರಂಗಭೂಮಿಯ ಆಯು ಪ್ರಮಾಣದಷ್ಟೆ ಶತಮಾನದ ಟ್ರೆಂಡಿಂಗ್ ರಂಗಚರಿತ್ರೆಯೂ ಈ ಊರಿಗಿದೆ. ಇದೀಗ ಇಲ್ಲಿಗೆ ಹೊಸದೊಂದು ನಾಟಕ ಕಂಪನಿಯ ಆಗಮನ. ಹಾಗೆ ನೋಡಿದರೆ ಇದೇ ಹೆಸರಿನ ಬಿ.ಆರ್. ಅರಿಶಿಣಗೋಡಿ ಮಾಲೀಕತ್ವದ ಹೊಳೆ ಹುಚ್ಚೇಶ್ವರ ನಾಟಕ ಕಂಪನಿ ದಾವಣಗೆರೆಯಲ್ಲಿ ಒಂದೆರಡು ಬಾರಿ ಮೊಕ್ಕಾಂ ಮಾಡಿದ್ದು ಕೊನೆಯದಾಗಿ ಅದು ಕ್ಯಾಂಪ್ ಮಾಡಿದಾಗ ‘ಸೊಸೆ ಹಾಕಿದ ಸವಾಲ್’ ನಾಟಕದ ಯಶಸ್ವಿ ಪ್ರದರ್ಶನ ಕಂಡದ್ದು.‌ ಜನಪ್ರಿಯ ಹಾಸ್ಯನಟ ರಾಜು ತಾಳಿಕೋಟಿ ಅವರಿಗೆ ಸ್ಟಾರ್ ಇಮೇಜ್ ದಕ್ಕಿಸಿಕೊಟ್ಟ ನಾಟಕ ಮತ್ತು ಕಂಪನಿ ಅದಾಗಿತ್ತು.

ಅದಾದ ಮೇಲೆ ಅದೇ ಹೆಸರಿನ ಶ್ರೀಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ, ಹೆಸರಿನ ಪಾಪು ಕಲ್ಲೂರು ಒಡೆತನದ ನಾಟಕ ಕಂಪನಿ ಇದೇ ಮೊದಲ ಬಾರಿಗೆ ದಾವಣಗೇರಿ ಶಹರಕ್ಕೆ ಬಂದಿದೆ. ನರಹರಿ ಶೇಟ್ ಸಭಾಭವನ ಮತ್ತು ಪಿ. ಬಿ. ರಸ್ತೆಯ ಪಕ್ಕದ ಜಾಗದಲ್ಲಿ ಕ್ಯಾಂಪ್ ಮಾಡಿದೆ. ಇನ್ನೂ ಮೊನ್ನೆ ಮೊನ್ನೆಯಷ್ಟೇ ದಾವಣಗೆರೆ ರಂಗಾಯಣ ಏರ್ಪಡಿಸಿದ್ದ ೨೦೨೬ರ ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ಇದೇ ಕಂಪನಿಯ ಇದೇ ‘ಗಂಡನಿಗೆ ತಕ್ಕ ಹೆಂಡತಿ’ ನಾಟಕ ಪ್ರದರ್ಶನ ಕಂಡಿತು. ತನ್ಮೂಲಕ ನೆರೆದ ನೂರಾರು ಮಂದಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಗೊಂಡ ನೆನಪು ಹಚ್ಚ ಹಸಿರಾಗಿದೆ. ಇದೀಗ ಅದೇ ನೆನಪಿನ ಲೋಕಪ್ರಿಯ ಪ್ರಯೋಗಗಳಿಗೆ ಅದೇ ಕಂಪನಿ, ಹುಣಶ್ಯಾಳ ಮಹಾದೇವಪ್ಪನವರ ಮ್ಯಾನೇಜರಗಿರಿಯಲ್ಲಿ ಸಜ್ಜುಗೊಂಡಿದೆ.

ಕೌಟುಂಬಿಕ ಬದುಕು ಮತ್ತು ವಿಸ್ತೃತ ದಾಂಪತ್ಯ ಪ್ರೀತಿ, ಕ್ಷಣಭಂಗುರದ ಕುತೂಹಲ, ವಿಭಿನ್ನ ಖಳನಾಯಕತ್ವ, ತುಸು ಡಿಫರೆಂಟಾದ ಹಾಸ್ಯ ಮತ್ತು ಹಾಡುಗಳು ಹೀಗೆ ಇದೊಂದು ವರ್ತಮಾನೀಕೃತ ರಂಗಪಲ್ಲವ. ತಾರುಣ್ಯಭರಿತ ಪರಿಣಿತ ಕಲಾವಿದರಿಂದಾಗಿ ಸೃಜನಶೀಲತೆ ಕಾಪಿಟ್ಟುಕೊಂಡಿದೆ. ಅದರೊಂದಿಗೆ ಅಗ್ಗದ ಜನಪ್ರಿಯತೆ ಕುರಿತು ಅಂತರ ಕಾಪಾಡಿಕೊಳ್ಳುವ ವಿವೇಕ.

ಅದರಲ್ಲೂ ದಾವಣಗೆರೆಯ ಅಳಿಯ ಮತ್ತು ಕಾಮೆಡಿ ಕಿಲಾಡಿಗಳು ಖ್ಯಾತಿಯ ಸಂಕೇತ ಮಂಗಳೂರು ಈ ನಾಟಕದ ವಿಶೇಷ ಆಕರ್ಷಣೆ. ಆತನ ಪತ್ನಿ ದಾವಣಗೆರೆಯ ಮೇಘನಾ ನಾಕೋಡ ಅಭಿನಯದ ವೈನೋದಿಕ ಪ್ರಜ್ಞೆಯೂ ಗಮನೀಯ. ಕಂಪನಿಯ ಮಾಲೀಕರು ‌ಮತ್ತು ತಾರಾದಂಪತಿ ಕನಕಲಕ್ಷ್ಮಿ ಪಾಪು ಕಲ್ಲೂರು, ಇಬ್ಬರೂ ಮುಖ್ಯ ಭೂಮಿಕೆಯಲ್ಲಿ ರಂಗ ಪ್ರೀತಿಯ ಗಂಗೋತ್ರಿಯನೇ ಹರಿಸುವರು.

ವಾಸ್ತವ ಜೀವನದ ಗಂಡ ಹೆಂಡತಿ ಈರ್ವರೂ ಅಂತರ್ ಧರ್ಮೀಯರಾಗಿದ್ದು ರಂಗಸಾಂಗತ್ಯ ಬದುಕಿನಲ್ಲಂತೂ ಹತ್ತು ಹಲವು ಹೊಂಗನಸುಗಳ ಮಹತ್ವಾಕಾಂಕ್ಷೆಯ ರಂಗಜೋಡಿ. ಪ್ರಸ್ತುತ ಅವರ ನಾಟಕ ಕಂಪನಿಯೆಂದರೆ ನಾಟ್ಯ ಸರಸ್ವತಿಯನೇ ನಿರುತಾಗಿ ನೆನಪಿಸುವ ರಂಗಮಂದಿರ. ವರ್ತಮಾನದ ಕಂಪನಿಗಳಲ್ಲಿ ಹೆಚ್ಚು ಮೆಚ್ಚುಗೆಯ ಕಂಪನಿ ಇದಾಗಿದೆ. ಅದೀಗ ನಮ್ಮೂರಿಗೇ ಬಂದಿದೆ. ದಾವಣಗೆರೆ ಪರಿಸರದ ಸಹೃದಯ ಪ್ರೇಕ್ಷಕರಿಗಿದು ಸದಭಿರುಚಿ ಸವಿಯುವ ಸದವಕಾಶ. ಟಿ.ವಿ., ಸೆಲ್ ಫೋನುಗಳಿಗೆ ತಾಸೊಪ್ಪತ್ತು ರೆಸ್ಟ್ ಕೊಟ್ಟು ಬರ್ರಿ. ಜೀವ ಸಂವೇದನೆಯ ರಂಗಸಂಭ್ರಮದಲ್ಲಿ ಪಾಲ್ಗೊಳ್ಳೋಣ.

ಮಲ್ಲಿಕಾರ್ಜುನ ಕಡಕೋಳ,  9341010712

Share

Leave a comment

Leave a Reply

Your email address will not be published. Required fields are marked *

Related Articles