SUDDIKSHANA KANNADA NEWS/ DAVANAGERE/ DATE:31-08-2024
ದಾವಣಗೆರೆ: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತಂತೆ ನನಗೆ ಯಾವುದೇ ನೊಟೀಸ್, ಪತ್ರ ಬಂದಿಲ್ಲ ಎಂದು ಸ್ವಾಭಿಮಾನಿ ಬಳಗದ ಪ್ರಮುಖರು ಹಾಗೂ ಲೋಕಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವ ಕುರಿತಂತೆ ರಹೀಂ ಖಾನ್ ಅವರು ಪ್ರಕಟಣೆ ನೀಡಿರುವ ಕುರಿತಂತೆ ಅಧಿಕೃತವಾಗಿ ನನಗೆ ಬಂದಿಲ್ಲ, ನಾನು ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇನೆ. ನನ್ನನ್ನು ಯಾಕೆ ಉಚ್ಚಾಟನೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಸಿಎಂ ಸಿದ್ದರಾಮಯ್ಯ, ಅಹಿಂದ ವರ್ಗದವರ ಪರ ಮಾತನಾಡಿದ್ದಕ್ಕಾಗಿಯೋ? ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪರು ಅಹಿಂದ ಪರ ಮಾತನಾಡಿಲ್ಲವೆಂಬ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿಯೋ ಎಂಬುದು ಸ್ಪಷ್ಟವಾಗಿಲ್ಲ. ನಾನು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಅಹಿಂದ ವರ್ಗದ ಪರವಾದ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಔಟ್ರಿಚ್ ವಿಭಾಗದ ರಾಜ್ಯ ಘಟಕದಲ್ಲಿ ನನಗೆ ಹುದ್ದೆ ನೀಡಲಾಗಿತ್ತು. ರಾಷ್ಟ್ರಾಧ್ಯಕ್ಷರಾದ ಉಮನ್ ಚಾಂಡಿ ಅವರು ನೇಮಕ ಮಾಡಿದ್ದರು. ಅವರು ಪಕ್ಷದಿಂದ ಉಚ್ಚಾಟನೆ ಮಾಡುವ ಕುರಿತಂತೆ ಯಾವುದೇ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಬಂದಿದೆ ಅಷ್ಟೇ. ಈ ಕುರಿತಂತೆ ಸುದೀರ್ಘವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಅಹಿಂದ ವರ್ಗವನ್ನು ಕೇವಲ ಮತಬ್ಯಾಂಕ್ ಆಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಮತದಾನದ ಕೊನೆ ವೇಳೆಗೆ ಆಗಮಿಸಿ ಜಿ. ಬಿ. ವಿನಯ್ ಕುಮಾರ್ ಮತ ನೀಡಬೇಡಿ ಎಂದಿದ್ದರು. ಆ ಬಳಿಕ ನಾನೇ ಅಭ್ಯರ್ಥಿಯೆಂದು ಪರಿಗಣಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದರು. ಪಾದಯಾತ್ರೆ, ಸಂಘಟನೆ, ಪಕ್ಷಕ್ಕೆ ಮಾಡಿದ ಸೇವೆ ಗುರುತಿಸಿ ಈ ಮಟ್ಟದಲ್ಲಿ ಹೆಸರು ನನ್ನದು ಇತ್ತು. ರಾಜ್ಯದ ಮುಖ್ಯಮಂತ್ರಿಯವರೇ ಈ ರೀತಿಯಾಗಿ ಹೇಳುತ್ತಾರೆಂದರೆ ದಾವಣಗೆರೆ ಜಿಲ್ಲೆಯ ಸ್ವಾಭಿಮಾನಿ ಜನರು ನೀಡಿದ ಶಕ್ತಿ ಏನೆಂಬುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ಪಕ್ಷೇತರ ಅಭ್ಯರ್ಥಿಗೆ ಬಂದ ಮತಗಳಿಗಿಂತ ನನಗೇ ಹೆಚ್ಚು. ಯಾಕೆಂದರೆ ಬಲಾಢ್ಯ ಪಕ್ಷಗಳ ನಡುವೆ ಏಕಾಂಗಿಯಾಗಿ ಚುನಾವಣೆ ಎದುರಿಸಿದೆ. ಲಕ್ಷಾಂತರ ಜನರು ಬೆಂಬಲಕ್ಕೆ ನಿಂತರೂ ಹಣಬಲ, ತೋಳ್ಬಲ, ಕುಟುಂಬ ರಾಜಕಾರಣ ಪೆಟ್ಟು ಕೊಟ್ಟಿತು. ಆದ್ರೆ, ಜನಸೇವೆ ಮಾಡಬೇಕು, ಜನರ ನಡುವೆ ಇರಬೇಕೆಂಬ ಹಂಬಲ, ಹಠ, ಗುರಿ ದೂರ ಆಗಿಲ್ಲ. ಉಚ್ಚಾಟನೆ ಕುರಿತಂತೆ ಸದ್ಯದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡುತ್ತೇನೆ, ಸುದೀರ್ಘವಾಗಿ ಮಾತನಾಡುತ್ತೇನೆ ಎಂದು ಜಿ. ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.