Home ಕ್ರೈಂ ನ್ಯೂಸ್ ಮನೆಯ ಕೆಲಸದಾಕೆಯೇ ಮಾಸ್ಟರ್‌ಮೈಂಡ್: ನಿವೃತ್ತ ಐಪಿಎಸ್ ಅಧಿಕಾರಿಯ ಪತ್ನಿ ಹತ್ಯೆ ಮಾಡಿದ್ದ ನೇಪಾಳ ಮೂಲದ ನಾಲ್ವರು ಆರೋಪಿಗಳ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮನೆಯ ಕೆಲಸದಾಕೆಯೇ ಮಾಸ್ಟರ್‌ಮೈಂಡ್: ನಿವೃತ್ತ ಐಪಿಎಸ್ ಅಧಿಕಾರಿಯ ಪತ್ನಿ ಹತ್ಯೆ ಮಾಡಿದ್ದ ನೇಪಾಳ ಮೂಲದ ನಾಲ್ವರು ಆರೋಪಿಗಳ ಅರೆಸ್ಟ್!

Share
ಪತ್ನಿ
Share

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ನಲ್ಲಿ ಮೇ ತಿಂಗಳಲ್ಲಿ ನಡೆದಿದ್ದ ನಿವೃತ್ತ ಐಪಿಎಸ್ ಅಧಿಕಾರಿಯ ಪತ್ನಿ ತನುಜಾ ರಂಜನ್ ಅವರ ಭೀಕರ ಕೊಲೆ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇಪಾಳ ಮೂಲದ ನಾಲ್ವರು ಪ್ರಮುಖ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ನಾಂಪಲ್ಲಿ ರೈಲು ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಸುಮಾರು ಐದು ತಿಂಗಳ ಕಾಲ ವಿವಿಧ ರಾಜ್ಯಗಳು ಹಾಗೂ ಭಾರತ-ನೇಪಾಳ ಗಡಿ ಭಾಗದಲ್ಲಿ ನಡೆದ ಸುದೀರ್ಘ ಕಾರ್ಯಾಚರಣೆಯ ನಂತರ ಈ ಮಹತ್ವದ ಬಂಧನ ನಡೆದಿದ್ದು, ದರೋಡೆ ಮತ್ತು ಕೊಲೆಯ ಜಾಲದ ರಹಸ್ಯ ಬಹಿರಂಗಗೊಂಡಿದೆ.

ಮನೆಯ ಕೆಲಸದಾಕೆ ನೀಡಿದ ಸುಳಿವು ಹಾಗೂ ಮಾಹಿತಿ ಆಧಾರದ ಮೇಲೆ ಈ ಕೃತ್ಯ ಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 7ರ ರಾತ್ರಿ ಜುಬಿಲಿ ಹಿಲ್ಲಸ್‌ನ ಪ್ರಶಾಸನ್ ನಗರದಲ್ಲಿರುವ ನಿವಾಸದಲ್ಲಿ ತನುಜಾ ರಂಜನ್ ಅವರ ಕೈಕಾಲುಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಅಲ್ಲದೆ, ಸುಮಾರು 225 ಗ್ರಾಂ ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಪೂಣೆ, ಗುರ್ಗಾಂವ್ ಹಾಗೂ ನೇಪಾಳದಲ್ಲಿ ನೆಲೆಸಿದ್ದ ಆರೋಪಿಗಳಾದ ಧರ್ಮ ತಿರುವಾ, ಗಣೇಶ್ ಬಿ.ಕೆ., ಚಂದ್ರ ಬಹದ್ದೂರ್ ತಮಾಂಗ್ ಹಾಗೂ ಗಣೇಶ್ ಬಹದ್ದೂರ್ ಶಾಹಿ ಎಂಬುವವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಕೆಲಸದಾಕೆಯ ಸಂಚು: ಮನೆಯ ದಿನಚರಿ ಹಾಗೂ ಒಡವೆಗಳ ಬಗ್ಗೆ ನೇಪಾಳ ಮೂಲದ ಕೆಲಸದಾಕೆ ಧರ್ಮ ತಿರುವಾ ಗ್ಯಾಂಗ್‌ಗೆ ನಿರಂತರ ಮಾಹಿತಿ ನೀಡಿ ದರೋಡೆಗೆ ಸಂಪೂರ್ಣ ಸಹಕರಿಸಿದ್ದಾಳೆ.

ಐದು ತಿಂಗಳ ಸುದೀರ್ಘ ಕಾರ್ಯಾಚರಣೆ: ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ತಂಡವು (SIT) ಹಲವು ರಾಜ್ಯಗಳ ನಗರಗಳಲ್ಲಿ ತಪಾಸಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸ್‌ ಎಚ್ಚರಿಕೆ: ಮನೆಗಳಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಕಡ್ಡಾಯವಾಗಿ ಪೊಲೀಸ್ ಪರಿಶೀಲನೆ ನಡೆಸುವಂತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಹೈದರಾಬಾದ್ ಪೊಲೀಸ್ ಕಮಿಷನರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಆರೋಪಿಗಳಿಂದ ನಗದು ಹಾಗೂ ಕೃತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ತೀವ್ರವಾಗಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *