SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ಎರಡು ಸಾಗುವಾನಿ ಮರಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಉಪ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ರಕ್ಷಕರ ಅಮಾನತು ಮಾಡಲಾಗಿದೆ.
ಚನ್ನಗಿರಿ ತಾಲೂಕಿನ ಜೋಳದಾಳ್ ವಲಯದ ಅಮ್ಮನಗುಡ್ಡ ದೇವಸ್ಥಾನದ ಬಳಿ ರಸ್ತೆ ಬದಿಯಲ್ಲಿನ ಎರಡು ಸಾಗುವಾನಿ ಮರಗಳನ್ನು ಮಾರಾಟ ಮಾಡಿದ್ದ ಆರೋಪದ ಮೇಲೆ ಸಸ್ಪೆಂಡ್ ಮಾಡಲಾಗಿದ್ದು, ಜೋಳದಾಳ್ ಉಪವಲಯ ಅರಣ್ಯಾಧಿಕಾರಿ ಗಿರೀಶ್, ಮಾವಿನಕಟ್ಟೆ ಶಾಂತಿಸಾಗರ ವಲಯದ ಗಸ್ತು ಅರಣ್ಯ ರಕ್ಷಕರಾದ ರಾಮು ಮತ್ತು ಜಯರಾಂ ಅಮಾನತುಗೊಂಡವರು.
ಕಳೆದ ಜುಲೈ 7ರಂದು ಅಮ್ಮನಗುಡ್ಡ ದೇವಸ್ಥಾನದ ಸಮೀಪದಲ್ಲಿ ನ ರಸ್ತೆ ಬದಿಯಲ್ಲಿ ಎರಡು ಸಾಗುವಾನಿ ಮರಗಳು ಗಾಳಿ, ಮಳೆಗೆ ಬಿದ್ದು ಹೋಗಿದ್ದವು. ಬಳಿಕ ಮರಗಳನ್ನು ಕಡಿತಲೆ ಮಾಡಿ ಅರಣ್ಯ ಇಲಾಖೆ ಡಿಪೋಗೆ ಸಾಗಾಟ ಮಾಡಲಾಗಿತ್ತು. ಆದ್ರೆ, ಉಪ ಅರಣ್ಯಾಧಿಕಾರಿ, ಗಸ್ತು ಅರಣ್ಯ ರಕ್ಷಕರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ರೈತ ಸಂಘದವರು ಅರಣ್ಯ ಇಲಾಖೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮೇಲಾಧಿಕಾರಿಗಳು ಅಕ್ರಮವಾಗಿ ಮಾರಾಟ ಮಾಡಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಸಿಎಫ್ ಆಶೀಶ್ ರೆಡ್ಡಿ ತಿಳಿಸಿದ್ದಾರೆ.
ಚನ್ನಗಿರಿ ಅರಣ್ಯ ವಲಯ ವ್ಯಾಪ್ತಿಯ ಜೋಳದಾಳ್ ಗ್ರಾಮದ ಬಳಿ ಕಾಡಿನೊಳಗೆ ಕತ್ತರಿಸಿ ಬಚ್ಚಿಟ್ಟಿದ್ದ ಸುಮಾರು 10 ಲಕ್ಷ ಮೌಲ್ಯದ ಸಾಗುವಾನಿ ಮರ ಪತ್ತೆಯಾಗಿತ್ತು. ಮರ ಕತ್ತರಿಸಿ ಸಾಗಿಸಲು ಪ್ರಯತ್ನ ಮಾಡಿರುವ ಶಂಕೆ ಇದೆ. ಗಿರೀಶ್ ಸಸ್ಪೆಂಡ್ ಆಗಿದ್ದಾರೆ.. ಈ ಹಿಂದೆ ಇಂಥ ಹಲವು ಮರಗಳ್ಳತನ ಪ್ರಕರಣ ಆಗಿವೆ. ಅರಣ್ಯಾಧಿಕಾರಿಗಳು ಗೊತ್ತಿದ್ದೋ.. ಗೊತ್ತಿಲ್ಲದೆಯೋ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.