SUDDIKSHANA KANNADA NEWS/ DAVANAGERE/ DATE:25-03-2024
ದಾವಣಗೆರೆ: ಭದ್ರಾ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 5 ದಿನಗಳಾದರೂ ಕಾಲುವೆಯಲ್ಲಿ ನೀರು ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿ ಇರುವ ಕಾಲುವೆಗೆ ಆಗಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಕರ್ನಾಟಕ ನೀರಾವರಿ ನಿಗಮದ ಇಕ್ಸಿಕ್ಯುಟೀವ್ ಇಂಜಿನಿಯರ್ ಆರ್ ಮಂಜುನಾಥರವರೊಂದಿಗೆ ವಾಗ್ವಾದಕ್ಕಿಳಿದರು.
ರೈತರು ಜಲಾಶಯದಿಂದ ನೀರು ಹರಿಸಿ 2ನೇ ದಿನಕ್ಕೆ ಶಿರಮಗೊಂಡನಹಳ್ಳಿ ಕಾಲುವೆಗೆ ನೀರು ಬರುತ್ತಿತ್ತು. ಈಗ 5 ದಿನಗಳಾದರೂ ಬಂದಿಲ್ಲ. ಹೋಳಿ ಹಬ್ಬ ಆಚರಣೆ ಮಾಡಿಕೊಂಡ ಹುಡುಗರು ಕಾಲುವೆ ನೀರಿನಲ್ಲಿ ಮುಳುಗಿ ಸ್ನಾನ ಮಾಡುತ್ತಿದ್ದರು. ಕೆಲವರು ಮೇಲಿಂದ ಡೈ ಹೊಡೆಯುತ್ತಿದ್ದರು. ಈಗ ಕೈ ಕಾಲು ತೊಳೆಯಲು ನೀರಿಲ್ಲ ಎಂದು ಕೂಗಾಡಿದರು. ನಂತರ ಸಮಾಧಾನವಾದ ರೈತರು ಅವರನ್ನು ಕರೆದುಕೊಂಡು ಜಿಲ್ಲಾಧಿಕಾರಿ ಬಳಿಗೆ ಹೋದರು.
ಜಿಲ್ಲಾಧಿಕಾರಿಯವರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಬೆಸ್ಕಾಂ ಎಕ್ಸಿಕ್ಯೂಟೀವ್ ಇಂಜಿನಿಯರ್ ಪಟೇಲ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮತ್ತು ನೀರಾವರಿ ಎಕ್ಸಿಕ್ಯುಟೀವ್ ಇಂಜಿನಿಯರ್ ಆರ್ ಮಂಜುನಾಥರವರೊಂದಿಗೆ ರೈತರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ನಮ್ಮ ಜಿಲ್ಲೆಗೆ ಬರಬೇಕಾದ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಶಿವಮೊಗ್ಗ ಜಿಲ್ಲೆಗೆ ಒಂದು ವೇಳಾಪಟ್ಟಿ ದಾವಣಗೆರೆ ಜಿಲ್ಲೆಗೆ ಒಂದು ವೇಳಾಪಟ್ಟಿ ಪ್ರಕಟಣೆ ಮಾಡಿರುವುದು ತಾರತಮ್ಯದ ನೀತಿಯಾಗಿದೆ. ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನರವರು ಮತ್ತು ಡಿಸಿಯವರು ಐಸಿಸಿ ಸಭೆಗೆ ಹಾಜರಾಗಿ ನಮ್ಮ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶದ ಇದೆ. ದೂರದ ಪ್ರದೇಶಕ್ಕೆ ನೀರು ತಲುಪ ಬೇಕಾದರೆ ನೀರಿನ ಹರಿವಿನ ಪ್ರಮಾಣ ಮತ್ತು ವೇಗ (PRESSURE) ಹೆಚ್ಚಿದ್ರೆ ಮಾತ್ರ ಮತ್ತು ನೀರು ಬಿಡುವ ಅವಧಿ ಹೆಚ್ಚಿದ್ರೆ ಮಾತ್ರ ಕೊನೆಯ ಭಾಗಕ್ಕೆ ನೀರು ತಲುಪುತ್ತದೆ ಎಂದು ಹೇಳಿದರು.
ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ರವರು ಮಾತನಾಡಿ ಅಕ್ರಮ ಪಂಪ್ ಸೆಟ್ ಗಳ ಹಾವಳಿ ವಿಪರೀತವಾಗಿದೆ. ತೆರವು ಕಾರ್ಯಾಚರಣೆ ಕೇವಲ ನೆಪ ಮಾತ್ರಕ್ಕೆ ನಡೆಯುತ್ತಿದೆ ಎಂದು ಹೇಳಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್ ರವರು ಕಾಲುವೆ ಉದ್ದಕ್ಕೂ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಬೆಸ್ಕಾಂ ಇಕ್ಸಿಕ್ಯುಟೀವ್ ಇಂಜಿನಿಯರ್ ಪಟೇಲ್ ರವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ನೀರಾವರಿ ಇಂಜಿನಿಯರ್ ಗಳು ಪೊಲೀಸ್ ರಕ್ಷಣೆಯೊಂದಿಗೆ ಕಾಲುವೆಯಿಂದ ಅಕ್ರಮವಾಗಿ ನೀರು ಎತ್ತುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೊನೆ ಭಾಗಕ್ಕೆ ನೀರು ತಲುಪಿಸಲು ಅಧಿಕಾರಿಗಳು ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಮುಖಂಡರಾದ ಜಿಮ್ಮಿ ಹನುಮಂತಪ್ಪ, ಬಿ.ಮಹೇಶಪ್ಪ, ಭಾಸ್ಕರರೆಡ್ಡಿ, ಆರುಂಡಿ ಪುನೀತ್, ಅಣ್ಣಪ್ಪ, ಹೆಚ್. ಎನ್. ಮಹಾಂತೇಶ, ಹೆಚ್ ಎಸ್ ಸೋಮಶೇಖರ, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ, ಆರನೇಕಲ್ಲು ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.