SUDDIKSHANA KANNADA NEWS/ DAVANAGERE/ DATE:09-12-2024
ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರು ಅಹಿಂದ ಮತಗಳಿಂದ ಗೆದ್ದವರು. ಆದ್ರೆ, ಅವರು ಅಹಿಂದ ಪರ ನಿಲ್ಲಲಿಲ್ಲ ಎಂಬ ಹೇಳಿಕೆ ನೀಡಿದ್ದಕ್ಕೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು. ಶಿವಮೊಗ್ಗಕ್ಕೆ ಹೋಗಿ ಬಿಜೆಪಿ ಅಭ್ಯರ್ಥಿ ಪರ ಮಾತನಾಡಿದರೆ ಉಚ್ಚಾಟನೆ ಮಾಡಲಿಲ್ಲ. ಕಾಂಗ್ರೆಸ್ ಪರ ಮಾತನಾಡಿದ್ದಕ್ಕೆ ಉಚ್ಚಾಟಿಸಿದರು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಹೊನ್ನಾಳಿ ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನನಗೆ ಹೆಚ್ಚು ಮತಗಳು ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ಬಂದಿವೆ. ದುಡ್ಡು ಹಂಚದೇ ಆಮೀಷವೊಡ್ಡದೇ ತೆಗೆದುಕೊಂಡ ಮತಗಳು. ಪಾದಯಾತ್ರೆ ನಡೆಸುವ ವೇಳೆ ನಾನು ದಾವಣಗೆರೆಯಲ್ಲಿ ಇರುತ್ತೇನೆಯೋ ಇಲ್ಲವೋ ಎಂಬ ಕುಹಕ ಮಾತನಾಡಿದ್ದರು. ಆದ್ರೆ, ನಾನು ಎಲ್ಲಿಯೂ ಹೋಗಿಲ್ಲ. ನುಡಿದಂತೆ ನಡೆಯುತ್ತಿದ್ದೇನೆ. ದಾವಣಗೆರೆಯಲ್ಲಿ ಕೆಲಸ ಮುಂದುವರಿಸಿದ್ದೇನೆ. 8 ಕ್ಷೇತ್ರಗಳ ಪೈಕಿ ಹರಿಹರ, ಹೊನ್ನಾಳಿ, ದಾವಣಗೆರೆ ಉತ್ತರ, ಹರಪನಹಳ್ಳಿಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಜಗಳೂರು, ಚನ್ನಗಿರಿಯಲ್ಲಿಯೂ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪರು ಅಹಿಂದ ಸಂಘಟನೆಯಲ್ಲಿ ಪಾಲ್ಗೊಳ್ಳಲಿಲ್ಲ. ನಾನು ಅಹಿಂದ ಪರವಾಗಿ ಕೆಲಸ ಮಾಡಿದೆ. ಎಲ್ಲಾ ವರ್ಗದವರ ಪ್ರೀತಿ ಸಂಪಾದನೆ ಮಾಡಿದ್ದೆ. ಬಡವರು, ಶೋಷಿತರು, ಅಹಿಂದ ವರ್ಗದವರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಾದರೆ ಸ್ವಾಭಿಮಾನಿ ಬಳಗ ಸ್ಥಾಪನೆ ಮಾಡಿ ಜನರೇ ಹೇಳಿ ಒತ್ತಡ ಹೇರಿದರು. ಹಾಗಾಗಿ ಸ್ವಾಭಿಮಾನಿ ಬಳಗ ಶುರು ಮಾಡಿದೆ. ಸ್ವಾಭಿಮಾನದಿಂದ ಹೋರಾಟ ಮಾಡಿದ್ದೀರಾ. ಹೋರಾಟ ಮುಂದುವರಿಸಿ ಎಂದಿದ್ದೇ ಜನರು. ನಾನು ಯಾರೊಟ್ಟಿಗೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆ ವೇಳೆ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತು. ಸಿಎಂ ಸಿದ್ದರಾಮಯ್ಯರು ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದರೂ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದು ವಾಪಸ್ ಪಡೆಯಲಿಲ್ಲ. ಜನರಿಗೋಸ್ಕರ ಹೋರಾಟ ಮಾಡಿದ್ದೀನಿ. ಹಾಗಾಗಿ ಸ್ವಾಭಿಮಾನಿ ಬಳಗ ಸ್ಥಾಪನೆ ಮಾಡಲಾಗಿದೆ. ಇದು ನೋಂದಾಯಿತ ಸಂಸ್ಥೆ. ಮುಸ್ಲಿಂ, ಎಸ್ಸಿ, ಎಸ್ಟಿ, ಲಿಂಗಾಯತರು ಸೇರಿದಂತೆ ಎಲ್ಲಾ ವರ್ಗದವರೂ ಸೇರಿದ್ದಾರೆ ಎಂದು ತಿಳಿಸಿದರು.