ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

M. P. Renukacharya: ಎಲ್ಲೋ ಕುಳಿತು ರಾಜ್ಯ ಬಿಜೆಪಿ ಕಂಟ್ರೋಲ್ ಮಾಡಿದ್ರೆ ಲೋಕಸಭೆಯಲ್ಲಿ ಗೆಲ್ಲೋದು ಕಷ್ಟ: ಸ್ವಪಕ್ಷೀಯರ ವಿರುದ್ಧ ಮತ್ತೆ ಬೆಂಕಿಯುಗುಳಿದ ರೇಣುಕಾಚಾರ್ಯ…!

On: August 26, 2023 4:21 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:26-08-2023

ದಾವಣಗೆರೆ: ಯಾರೋ ಎಲ್ಲೋ ಕುಳಿತು ರಾಜ್ಯ ಬಿಜೆಪಿ ಘಟಕ ನಿಯಂತ್ರಿಸುತ್ತಾರೆ. ಈ ರೀತಿಯಾದ ಧೋರಣೆ ಮುಂದುವರಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲೋದು ಕಷ್ಟ. ಇದುವರೆಗೆ
ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಬೇಡಿಕೆ ಇಟ್ಟರೂ ಈಡೇರಿಸಿಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅವರು ಸ್ವಪಕ್ಷೀಯ ನಾಯಕರ ವಿರುದ್ಧ ಬೆಂಕಿಯುಗುಳಿದ್ದಾರೆ.

ಹೊನ್ನಾಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯು ನಾವಿಕನಿಲ್ಲದ ಹಡಗು ಎಂಬಂತಾಗಿದೆ ಎಂದು ಜನರೇ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮನೆಯಲ್ಲಿ ಕೂರಿಸಿದ್ದು ಯಾಕೆ ಎಂಬ ಪ್ರಶ್ನೆ ಹೋದ ಬಂದಲೆಲ್ಲಾ ಕೇಳಲಾಗುತ್ತಿದೆ. ವಯಸ್ಸಾಯ್ತು ಎಂದು ಕೆಳಗಿಳಿಸಿದ್ದಕ್ಕೆ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಪಾದಯಾತ್ರೆ ಮಾಡಿ ಹಗಲಿರುಳು ಕಷ್ಟಪಟ್ಟು ಯಡಿಯೂರಪ್ಪರು ಬಿಜೆಪಿ ಕಟ್ಟಿರಲಿಲ್ವಾ. ಈಗ ಯಾರ್ಯೋರೋ ಬಂದು ನಿಯಂತ್ರಣ ಮಾಡುತ್ತಿದ್ದಾರೆ. ಇದು ಮುಂದುವರಿದರೆ ಮುಂದೆ ತುಂಬಾನೇ ಕಷ್ಟವಾಗುತ್ತದೆ ಎಂದು M. P. Renukacharya ಹೇಳಿದರು.

M. P. Renukacharya Clarification

ಬಿಎಸ್ ವೈ ಕಡೆಗಣನೆ ಶಾಪ: ಎಂ. ಪಿ. ರೇಣುಕಾಚಾರ್ಯ (M. P. Renukacharya)

ಮಾಜಿ ಸಿಎಂ ಯಡಿಯೂರಪ್ಪರನ್ನು ಕಡೆಗಣಿಸಿದ ಕಾರಣಕ್ಕೆ ಬಿಜೆಪಿ ಹೀನಾಯ ಸ್ಥಿತಿ ತಲುಪಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಇದು ಮುಂದುವರೆದರೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟವಾಗಲಿದೆ. ಇದು ನನ್ನ ಅಭಿಪ್ರಾಯವಲ್ಲ, ರಾಜ್ಯದ ಜನರ ಅಭಿಮತ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಷ್ಟು ಜನಪ್ರಿಯತೆ ಇದೆಯೋ ಅಷ್ಟೇ ಜನಪ್ರಿಯತೆ ಯಡಿಯೂರಪ್ಪ ಅವರಿಗೂ ಸಹ ಇದೆ. ಕರ್ನಾಟಕ ರಾಜಕಾರಣದಲ್ಲಿ ಅದರಲ್ಲಿಯೂ ಬಿಜೆಪಿಯಲ್ಲಿ ಯಾರೋ
ಎಲ್ಲೋ ಕುಳಿತು ಕಂಟ್ರೋಲ್ ಮಾಡಿದರೆ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿ. ಎಲ್. ಸಂತೋಷ್ ಹೆಸರು ಹೇಳದೇ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: 

Gruhalakshmi: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದೀರಾ: 2 ಸಾವಿರ ರೂಪಾಯಿ ನಿಮ್ಗೆ ಬರುತ್ತಾ ಇಲ್ಲವೋ.. ಈ ಲಿಂಕ್ ಕ್ಲಿಕ್ ಮಾಡಿ ತಿಳಿದುಕೊಳ್ಳಿ…!

ವಿಪಕ್ಷ ನಾಯಕನ ಆಯ್ಕೆ ಮಾಡದಿದ್ದಕ್ಕೆ ಆಕ್ರೋಶ:

ಬಿ. ಎಸ್. ಯಡಿಯೂರಪ್ಪ ಅವರ ನಾಯಕತ್ವ ಬೇಕು. ಅವರನ್ನೇ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ ಎಂದು ಜನರು ಹೇಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕನ ಆಯ್ಕೆ ಇದುವರೆಗೆ ಆಗದ ಕಾರಣ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಯಾಕೆ ಇಷ್ಟೊಂದು ತಡ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು. ಅದೂ ಸಮರ್ಥ ನಾಯಕತ್ವ ಹೊಂದಿರುವವರಿಗೆ ಮಾತ್ರ ಈ ಹುದ್ದೆ ಸಿಗುವಂತಾಗಬೇಕು ಎಂದು ಎಂ. ಪಿ. ರೇಣುಕಾಚಾರ್ಯ (M. P. Renukacharya) ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಗ್ಯಾರಂಟಿಯಿಂದ ಸೋಲು:

2013ರಲ್ಲಿ ಬಿಎಸ್ ವೈ ಕಡೆಗಣನೆ ಮಾಡಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಪುನಃ 2023ರಲ್ಲಿಯೂ ಯಡಿಯೂರಪ್ಪರ ನಿರ್ಲಕ್ಷ್ಯ ಮಾಡಿದ್ದರಿಂದ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಎಸ್ ವೈ ಅವರನ್ನು ಮನೆಯಲ್ಲಿ ಯಾಕೆ ಕೂರಿಸಿದ್ದೀರಿ ಎಂಬ ಮಾತು ಜನರಿಂದ ಕೇಳಿ ಬರುತ್ತಲೇ ಇದೆ. ಯಡಿಯೂರಪ್ಪ ಕಡೆಗಣಿಸಿದ್ದಕ್ಕೆ ಬಿಜೆಪಿಗೆ ಶಾಪ ತಟ್ಟಿದೆ. ಕಾಂಗ್ರೆಸ್ ನ ಗ್ಯಾರಂಟಿಗಳಿಂದ ನಾವು ಸೋತಿದ್ದೇವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹಿರಿಯರಾದ ಕೆ. ಎಸ್. ಈಶ್ವರಪ್ಪ ಸೇರಿದಂತೆ ಅನೇಕರಿಗೆ ಟಿಕೆಟ್ ನೀಡಲಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಕೆಲ ನಾಯಕರು ಪಕ್ಷ ಬಿಟ್ಟು ಹೋಗುವಂತೆ ಮಾಡಿದರು. ನಮ್ಮವರ ತಪ್ಪು, ಸರ್ಕಾರದ ತಪ್ಪು ನಿರ್ಧಾರಗಳಿಂದ ನಾವು ಸೋಲಬೇಕಾಯಿತು. ಬಿ ಎಸ್ ವೈ ಇಳಿಸಿದ್ದೇ ನಮಗೆ ದೊಡ್ಡ ಹಿನ್ನೆಡೆಯಾಗಲು ಕಾರಣ ಎಂದು ಪದೇ ಪದೇ ಉಲ್ಲೇಖಿಸಿ ಹೇಳಿದರು.

ರಾಜ್ಯಾಧ್ಯಕ್ಷರ ಆಯ್ಕೆ ಯಾಕೆ ಮಾಡಲಿಲ್ಲ…?

ಕಳೆದ ಎರಡು ವರ್ಷಗಳ ಹಿಂದೆಯೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಆದರೂ ತಲೆಕೆಡಿಸಿಕೊಳ್ಳಲಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರ ಬಗ್ಗೆ ಮಾತನಾಡುವುದಿಲ್ಲ. ಅವರು ದೇಶದಲ್ಲಿ ಬಿಜೆಪಿ ಜನಪ್ರಿಯತೆ ಗಳಿಸಲು ಕಾರಣ. ಆದ್ರೆ, ಕರ್ನಾಟಕ ವಿಚಾರದಲ್ಲಿ ಯಡಿಯೂರಪ್ಪರನ್ನು ಕಡೆಗಣನೆ ಮಾಡಿ ಸಾಧಿಸಿದ್ದಾದರೂ ಏನು ಎಂದು ಪ್ರಶ್ನಿಸಿದರು.

ಲೋಕಸಭೆಗೆ ಪ್ರಬಲ ಆಕಾಂಕ್ಷಿ, ಇದ್ರಲ್ಲಿ ತಪ್ಪೇನಿದೆ…? 

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ. ಪ್ರಬಲ ಆಕಾಂಕ್ಷಿಯೂ ಹೌದು. ದಾವಣಗೆರೆ ಲೋಕಸಭಾ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರು, ಮುಖಂಡರಿಂದ ಒತ್ತಡ ಬರುತ್ತಿದೆ. ನನಗೆ ಟಿಕೆಟ್ ನೀಡಬೇಕೆಂಬ ಒತ್ತಾಯವೂ ಇದೆ. ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡಲು ಸಿದ್ಧ. ನಾನು ಹೊನ್ನಾಳಿಯಲ್ಲಿ ಸೋತಿರಬಹುದು. ಆದ್ರೆ, ಪ್ರಧಾನಿಯವರ ಅಭಿವೃದ್ಧಿ ಕಾರ್ಯಗಳು ನಮಗೆ ಶ್ರೀರಕ್ಷೆ ಎಂದು ತಿಳಿಸಿದರು.

ಕಾಂಗ್ರೆಸ್ ಗೆ ನನ್ನ ಅವಶ್ಯಕತೆ ಇಲ್ಲ:

ಕಾಂಗ್ರೆಸ್ ಗೆ ನನ್ನ ಅವಶ್ಯಕತೆ ಇಲ್ಲ. ನಾನು ಸೋತವನು. ಗೆದ್ದವರೇ ತುಂಬಾ ಜನ ಇದ್ದಾರೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಅವರಿಗೇನೂ ಲಾಭ. ರಾಜಕೀಯವೇ ಬೇರೆ, ವಿಶ್ವಾಸವೇ ಬೇರೆ. ಎರಡಕ್ಕೂ ಒಂದಕ್ಕೊಂದು ಸಂಬಂಧ ಕಲ್ಪಿಸುವುದು ಸರಿಯಲ್ಲ. ಈ ಹಿಂದೆಯೂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹೊನ್ನಾಳಿಗೆ ಬರುವಂತೆ ಮನವಿ ಮಾಡಿದ್ದೆ, ಅವರೂ ಬಂದಿದ್ದರು. ಈಗ ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಳೆ ಬಾರದ ಕಾರಣ ಸಮಸ್ಯೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಇದರಲ್ಲಿ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment