SUDDIKSHANA KANNADA NEWS/ DAVANAGERE/ DATE:05-01-2024
ದಾವಣಗೆರೆ: ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಅರಣ್ಯ ಕೃಷಿ ಹೀಗೆ ಸಮಗ್ರ ಬೇಸಾಯ ಪದ್ಧತಿಯಿಂದ ರೈತರ ಜೀವನ ಬಂಗಾರವಾಗುತ್ತದೆ. ಏಕಬೆಳೆ ಪದ್ಧತಿ ಬದಲಾಗಿ ಬಹುಬೆಳೆ ಪದ್ಧತಿ ಆಧರಿಸಿ ರೈತರು ಕೃಷಿಯನ್ನು ರೂಢಿಸಿ ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಸಾವಯುವ ಗೊಬ್ಬರ ಬಳಸಿ ಭೂತಾಯಿಯ ಫಲವತ್ತತೆ ಹೆಚ್ಚಿಸಿದಲ್ಲಿ ರೈತನೂ ಕೂಡ ಕೋಟ್ಯಾಧೀಶನಾಗಬಹುದು ಎಂದು ರಾಷ್ಟ್ರೀಯ ಮಹಿಳಾ ಕೃಷಿ ತಜ್ಞೆ ಕವಿತಾ ಮಿಶ್ರ ಅವರು ರೈತರಲ್ಲಿ ಹೊಸ ಉತ್ಸಾಹ ತುಂಬಿದರು.
ಸಿದ್ಧಗಂಗಾ ವಿದ್ಯಾಸಂಸ್ಥೆಯ ವಾರ್ಷಿಕ ಸಂಭ್ರಮದ ಎರಡನೇ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಂಜರು ನೆಲವನ್ನು ಸುಸ್ಥಿರ ಕೃಷಿಯ ಮೂಲಕ ಹೇಗೆ ಆದಾಯದ ಗಣಿಯನ್ನಾಗಿ ಮಾಡಿದರೆಂಬುದನ್ನು ಮಕ್ಕಳ ಮತ್ತು ಪೋಷಕರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು. ಕೃಷಿಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಆದಾಯಕ್ಕಾಗಿ ಶ್ರೀಗಂಧ ಬೆಳೆಯಬಹುದು ಎಂದು ಸಲಹೆ ನೀಡಿದರು. ವಿದ್ಯಾವಂತರು ಕೃಷಿಯತ್ತ ಗಮನಹರಿಸಲು ಕರೆ ನೀಡಿದರು. ಸಮಾರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸುದೀರ್ಘಸೇವೆ ಸಲ್ಲಿಸಿದ ಶಿಕ್ಷಕಿ ಶಶಿಕಲಾ ಸಾಯಿನಾಥ್ರವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಉಪನ್ಯಾಸಕ ಅರುಣ್ ಕುಮಾರ್ ಜಿ. ಎಂ ಮತ್ತು ಶಿಕ್ಷಕಿ ಅಂಬುಜಾಕ್ಷಿಯವರಿದ್ದರು. ನಿರೂಪಣೆ ರೇಖಾರಾಣಿ ಮಾಡಿದರು. ಮುಖ್ಯ ಅತಿಥಿ ಕವಿತಾ ಮಿಶ್ರರವರ
ಪರಿಚಯವನ್ನು ಯಶಸ್ವಿನಿ ಮಾಡಿಕೊಟ್ಟಳು. ದ್ವಿತೀಯ ಪಿ.ಯು.ಸಿಯಲ್ಲಿ 90+ ಅಂಕಗಳನ್ನು ಪಡೆದ ಮಕ್ಕಳಿಗೆ ಸಿದ್ಧಗಂಗಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಾರಂಭದಲ್ಲಿ ಸಂಗೀತ ಶಿಕ್ಷಕಿ ರುದ್ರಾಕ್ಷಿಬಾಯಿಯವರ ನೇತೃತ್ವದಲ್ಲಿ ಮಕ್ಕಳು ಶಾಲಾಗೀತೆ ಹಾಡಿದರು. ಸುನೀತ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕ ತಂಡದವರು ಭಕ್ತಿ ಪ್ರಧಾನವಾದ ಹಾಡುಗಳ ಮೂಲಕ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ನೇರಪ್ರಸಾರಕ್ಕೆ ಸಂಸ್ಥೆಯ ಅಧ್ಯಕ್ಷ ಡಿ. ಎಸ್. ಪ್ರಶಾಂತ್ರವರು ವ್ಯವಸ್ಥೆ ಮಾಡಿದ್ದರು. ಕಾರ್ಯದರ್ಶಿ ಹೇಮಂತ್, ನಿರ್ದೇಶಕ ಡಾ. ಜಯಂತ್ರವರ ಮತ್ತು ಶಾಲೆ-ಕಾಲೇಜಿನ ಬೋಧಕ ಬೋಧಕೇತರ ವರ್ಗದವರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.