ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗೃಹಜ್ಯೋತಿ ನಂದಿಸಲು ಎಸ್ಕಾಂಗಳು ಸನ್ನದ್ಧ: ಇತಿಶ್ರೀ ಹಾಡುವ ಮುನ್ಸೂಚನೆ ಇದು ಎಂದ್ರು ಬಿ. ವೈ. ವಿಜಯೇಂದ್ರ!

On: February 24, 2025 12:19 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-02-2025

ಬೆಂಗಳೂರು: ಬಿಟ್ಟಿ ಭಾಗ್ಯಗಳಲ್ಲಿ ಒಂದಾದ ಗೃಹ ಜ್ಯೋತಿ ನಂದಿಸಲು ಎಸ್ಕಾಂಗಳು ಸನ್ನದ್ಧವಾಗಿವೆ. 15 ಬಾರಿ ಬಜೆಟ್ ಮಂಡಿಸಿರುವ ದಾಖಲೆ ತಮ್ಮದೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಿಟ್ಟಿ ಭಾಗ್ಯಗಳಿಗೆ ಹಣ ಸರಿದೂಗಿಸಲು ಸಮತೋಲನ ಕಳೆದುಕೊಂಡಿರುವುದು ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಅನಾವರಣಗೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ದೂರದೃಷ್ಟಿತ್ವವಿಲ್ಲದ, ಬದ್ಧತೆಯಿಲ್ಲದ ಮತ ಬ್ಯಾಂಕ್ ಆಧಾರಿತ ಯೋಜನೆಗಳು ಸೊರಗುತ್ತಿದೆ, ಅಭಿವೃದ್ಧಿ ಎನ್ನುವುದು ಗಗನಕುಸುಮವಾಗಿದೆ, ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಇದರ ನಡುವೆ ಪಂಚ ಗ್ಯಾರಂಟಿಯ ಯೋಜನೆಗಳು ತೋರಿಕೆಗೆ, ಹೇಳಿಕೆಗೆ ಮಾತ್ರ ಎಂಬಂತೆ ಜನರಿಗೆ ತಲುಪುವಲ್ಲಿ ಬಹುತೇಕ ವಿಫಲವಾಗಿವೆ ಎಂದು ದೂರಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣ ಸ್ಥಗಿತಗೊಂಡಂತೆ ಕಾಣುತ್ತಿದೆ, ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೊಡುವ ಗರೀಬ್ ಕಲ್ಯಾಣ್ ಅನ್ನ ಯೋಜನೆಯ 5 ಕೆಜಿ ಅಕ್ಕಿಯ ಹೊರತುಪಡಿಸಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹೆಚ್ಚುವರಿ 5 ಕೆಜಿಯ ಅಕ್ಕಿಯೂ ಇಲ್ಲ, ಬದಲಾಗಿ ಹಣವೂ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿಲ್ಲ. ಯುವ ನಿಧಿ ಯೋಜನೆ ಅರ್ಜಿ ಕರೆಯುವ ಪ್ರಕಟಣೆಗಳನ್ನು ಬಿಟ್ಟರೆ ಯುವಜನರ ಖಾತೆಗಳಿಗೆ ಜಮೆಯಾದ ಬಗ್ಗೆ ಈವರೆಗೆ ವಿವರಗಳೇ ಲಭ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಕೆ.ಎಸ್.ಆರ್.ಟಿ.ಸಿ ಈಗಾಗಲೇ ನಷ್ಟದ ಹಾದಿ ಹಿಡಿದಿದೆ, ಹೆಚ್ಚುವರಿ ದರ ಏರಿಕೆ ಪರೋಕ್ಷವಾಗಿ ಪ್ರಯಾಣಿಕರ ಮೇಲೆ ಹೇರಲಾಗಿದೆ. ಇದೀಗ ಗೃಹ ಜ್ಯೋತಿ ಯೋಜನೆಗೆ ಸರ್ಕಾರ ಎಸ್ಕಾಂ ಗಳಿಗೆ ಹಣ ಪಾವತಿಸದ ಪರಿಣಾಮ ಯೋಜನೆ ಫಲಾನುಭವಿಗಳಿಂದಲೇ ವಸೂಲಿ ಮಾಡುವುದಕ್ಕಾಗಿ ಅಧಿಕಾರಿಗಳು ಸಜ್ಜಾಗಿ ನಿಂತಿದ್ದಾರೆ. ಆ ಮೂಲಕ ಗೃಹ ಜ್ಯೋತಿಗೆ ಇತಿಶ್ರೀ ಆಡುವ ಮುನ್ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂಚ ಭಾಗ್ಯಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೇವಲ ಒಂದೂವರೆ ವರ್ಷದಲ್ಲೇ ಯೋಜನೆಗಳನ್ನು ಕಾರ್ಯಗತ ಮಾಡುವಲ್ಲಿ ಸಂಪೂರ್ಣ ಎಡವಿದೆ ಹಾಗೂ ಸರ್ಕಾರದ ಆಡಳಿತ ವ್ಯವಸ್ಥೆ ನಿಷ್ಕ್ರಿಯಗೊಂಡಿದ್ದು, ಕೃಷಿ ಸೇರಿದಂತೆ ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಬಿಡಿಗಾಸು ಇಲ್ಲದೆ ಬರಿಗೈಯಲ್ಲಿ ಕೈ ಚಾಚಿ ಕುಳಿತಿರುವುದು ಕರ್ನಾಟಕದ ದೌರ್ಭಾಗ್ಯವಾಗಿದೆ‌ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ಸಿಗರಿಗೆ ಅಧಿಕಾರ ಅನುಭವಿಸಲು ಜನ ಆಯ್ಕೆ ಮಾಡಿಲ್ಲ, ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆಯಲ್ಲಿ ಚುನಾಯಿಸಿದ್ದಾರೆ, ಆದರೆ ಜನರ ನಿರೀಕ್ಷೆ, ಅಪೇಕ್ಷೆಗಳೆಲ್ಲವೂ ಮಣ್ಣು ಪಾಲಾಗುತ್ತಿವೆ. ಸ್ವಪ್ರತಿಷ್ಠೆ, ಸ್ವಾರ್ಥ, ಭ್ರಷ್ಟಾಚಾರದಲ್ಲಿ ಮುಳುಗೇಳುವ ಗುರಿಯನ್ನು ಮಾತ್ರ ಈ ಕಾಂಗ್ರೆಸ್ ಸರ್ಕಾರ ಇಟ್ಟುಕೊಂಡಂತೆ ಕಾಣುತ್ತಿದೆ. 2025 ಜನತೆ ಹಾಗೂ ರಾಜ್ಯದ ಪಾಲಿಗೆ ಕರಾಳ ವರ್ಷವಾಗುವ ಸೂಚನೆ ಕಾಣುತ್ತಿದೆ, ಜನಾಕ್ರೋಶ ಭುಗಿಲೇಳುವ ಮುನ್ನ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಕೊಟ್ಟು ತಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಲಿ ಎಂದು
ಆಗ್ರಹಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment