ದಾವಣಗೆರೆ: ಸೆ.14 ರಂದು ಆಚರಿಸಲಿರುವ ಗಣೇಶ ಚತುರ್ಥಿ ಹಬ್ಬವನ್ನ ಜಲಮೂಲಗಳನ್ನು ಮಲಿನಗೊಳಿಸದೇ, ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಹಾನಗರಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ತಿಳಿಸಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಲ್ಪಟ್ಟ ಮತ್ತು ರಾಸಾಯನಿಕ ಬಣ್ಣಲೇಪಿತ ವಿಗ್ರಹಗಳನ್ನು ಪೂಜಿಸಿ ಜಲ ಮೂಲಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತವಾಗಿ ಜಲಚರಗಳಿಗೆ ಪ್ರಾಣಹಾನಿಯುಂಟು ಮಾಡುವುದಲ್ಲದೇ ನಮ್ಮ ಭವಿಷ್ಯದ ಪೀಳಿಗೆಗೆ ನಾವೇ ಕಲುಷಿತ ಪರಿಸರ ನೀಡಿದಂತಾಗುತ್ತದೆ.
₹10,000 ದಂಡ ಹಾಗೂ ಶಿಸ್ತುಕ್ರಮ:
ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ವಿಗ್ರಹಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹ ವಿಗ್ರಹಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಜೊತೆಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ ರೂ. 10,000/- ಗಳ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ಸಾರ್ವಜನಿಕರು, ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಪರಿಸರ ಕಾಳಜಿಯಿಂದ ಮಹಾನಗರ ಪಾಲಿಕೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಆಯುಕ್ತರು ಕೋರಿದ್ದಾರೆ.
ಆದ್ದರಿಂದ ವಿಘ್ನನಿವಾರಕನೆಂದು ಸಮುದಾಯಗಳ ಐಕ್ಯತೆ ಸಂಕೇತವಾಗಿ ಪೂಜಿಸಲ್ಪಡುವ ಗಣೇಶನ ಹಬ್ಬವನ್ನು ನಮ್ಮೆಲ್ಲರ ಹಾಗೂ ವಿವಿಧ ಜೀವರಾಶಿಗಳ ಆರೋಗ್ಯಕ್ಕೆ ಪೂರಕವಾಗಿ ಪರಿಸರ ಸ್ನೇಹಿಯಾಗಿ ಆಚರಿಸುವ ಸಲುವಾಗಿ ಜೇಡಿ ಮಣ್ಣು , ಅರಿಶಿನ, ಬೆಲ್ಲ ಹಾಗೂ ಇತರೆ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿ ಬಣ್ಣರಹಿತ, ನೈಸರ್ಗಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಮಾತ್ರವೇ ಉಪಯೋಗಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಸಿದ್ಧಪಡಿಸಿದ ರಾಸಾಯನಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಪಿಒಪಿ, ರಾಸಾಯನಿಕ ಬಣ್ಣಲೇಪಿತ ವಿಗ್ರಹಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ರೂ. 10,000/- ಗಳ ದಂಡ ವಿಧಿಸಿ ಕಾನೂನು ರೀತ್ಯಾ ಕ್ರಮವಹಿಸಲಾಗುವುದು. ಪ್ರಯುಕ್ತ, ಪರಿಸರ ಸ್ನೇಹಿ ಗಣೇಶ ಆಚರಣೆಯಲ್ಲಿ ಎಲ್ಲಾ ಸಾರ್ವಜನಿಕರು, ಗಣೇಶ ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದ್ದಾರೆ.





Leave a comment