SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: 2025-26ನೇ ಸಾಲಿನಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ವಿವಿಧ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಒಳಗೊಂಡಂತೆ ಪ್ರಸಕ್ತ ಸಾಲಿನಲ್ಲಿ ರೂ.185.44 ಕೋಟಿಗಳ ಆದಾಯವು ಬರುವುದಾಗಿ ನಿರೀಕ್ಷಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.
2025-26ನೇ ಸಾಲಿನಲ್ಲಿ ಪ್ರಾಧಿಕಾರವು ತನ್ನ ಸಾಮಾನ್ಯ ಆಡಳಿತದ ನಿಶ್ಚಿತ ವೆಚ್ಚಗಳನ್ನು ಒಳಗೊಂಡಂತೆ ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.184.40 ಕೋಟಿಗಳ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.
2025-26ನೇ ಸಾಲಿನಲ್ಲಿ ಪ್ರಾಧಿಕಾರವು ರೂ.1.03 ಕೋಟಿಗಳ ಉಳಿತಾಯದ ಆಯವ್ಯಯ ವನ್ನು ಮಂಡಿಸಲಾಗಿದೆ. ನಿಧಿ-01 (ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆ ನಕ್ಷೆ) 2025-26ನೇ ಸಾಲಿನ ರೂ.28.19 ಕೋಟಿಗಳ ಆದಾಯ ನಿರೀಕ್ಷಿಸಲಾಗಿದೆ.
ಪ್ರಾಧಿಕಾರದ ಸಿಬ್ಬಂದಿಗಳಿಗೆ ವೇತನ, ಪಿಂಚಣಿ, ಸಂಭಾವನೆ ಮತ್ತು ಇತರೇ ವೆಚ್ಚಗಳಿಗೆ ರೂ.6.58 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಸರ್ಕಾರಕ್ಕೆ ಪಾವತಿ ಮಾಡುವ ಶುಲ್ಕಗಳಿಗೆ ರೂ.1.74 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ದಾವಣಗೆರೆ-ಹರಿಹರ ಮಹಾಯೋಜನೆಗೆ ನಕ್ಷೆ ತಯಾರಿಕೆಗಾಗಿ ರೂ.75 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆಯಾದ ಕಾಮಗಾರಿಗಳ ವೆಚ್ಚಕ್ಕಾಗಿ ರೂ.6.95 ಕೋಟಿಗಳನ್ನು ಕಾಯ್ದಿರಿಸಲಾಗಿದೆ.
2025-26ನೇ ಸಾಲಿನ ಹೊಸ ಕಾಮಗಾರಿಗಳಿಗೆ ರೂ.12 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಮಹಾಯೋಜನೆಯಲ್ಲಿರುವ ಬೇತೂರು ಗ್ರಾಮದಿಂದ ಬಸಾಪುರ ಗ್ರಾಮದವರೆಗೆ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ರೂ.2.50 ಕೋಟಿಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ಹರಿಹರ ತಾಲ್ಲೂಕು ಗುತ್ತೂರು ಗ್ರಾಮದಿಂದ ಅಮರಾವತಿ ಗ್ರಾಮದವರೆಗೆ ಇರುವ 60 ಅಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರೂ.3.50 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಮಹಾಯೋಜನೆಯಲ್ಲಿರುವ ದಾವಣಗೆರೆ ನಗರದ ಶಾಬನೂರು ಗ್ರಾಮದ ರಿಸನಂ:210 ರಿಂದ ರಿಸನಂ:221ರವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರೂ.3 ಕೋಟಿಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಪಾಮೇನಹಳ್ಳಿ ಗ್ರಾಮದಿಂದ ತೋಳಹುಣಸೆ ಎಸ್ ಹೆಚ್-76 ರವರೆಗೆ ರಸ್ತೆ ನಿರ್ಮಾಣಕ್ಕಾಗಿ ರೂ.1 ಕೋಟಿಗಳನ್ನು ಕಾಯ್ದಿರಿಸಲಾಗಿದೆ. ಮಹಾಯೋಜನೆಯಲ್ಲಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಬೀರೂರು ಸಮ್ಮಸಗಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತ, ಪ್ರತಿಮೆ ಅಭಿವೃದ್ಧಿ ಪಡಿಸಲು ರೂ.25 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ಹರಿಹರ ನಗರದ ನದಿ ದಂಡೆಯ ಹತ್ತಿರ ಸರ್ವಜ್ಞ ಮೂರ್ತಿ ನಿರ್ಮಾಣ ಮಾಡಲು ರೂ.25 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿರುವ ಹಳೇಯ ಕಡತಗಳನ್ನು ಮತ್ತು ದಾಖಲಾತಿಗಳನ್ನು ವರ್ಗೀಕರಿಸಿ, ಡಿಜಿಟಲೀಕರಣಗೊಳಿಸಿ ಭೌತಿಕ ಕಡತಗಳನ್ನು ಸಂರಕ್ಷಿಸಲು ರೂ.75 ಲಕ್ಷಗಳನ್ನು ಕಾಯ್ದಿರಿಸಲಾಗಿದೆ. ಮಹಾಯೋಜನೆಯಲ್ಲಿರುವ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ವೃತ್ತಗಳನ್ನು ಅಭಿವೃದ್ಧಿಪಡಿಸಲು ರೂ.25 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಮಹಾಯೋಜನೆಯಲ್ಲಿರುವ ಹರಿಹರ ನಗರದ ನೇಕಾರ (ಆಶ್ರಯ) ಕಾಲೋನಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ರೂ.25 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.ಹರಿಹರ ನಗರದ ಬೆಂಕಿ ನಗರ ವಾರ್ಡ್ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಅಡ್ಡ ರಸ್ತೆಯವರೆಗೆ ರಸ್ತೆ ಅಭಿವೃದ್ಧಿಗಾಗಿ ರೂ.25.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕರಾದ ಬಿ. ಪಿ. ಹರೀಶ್, ಕೆ. ಎಸ್. ಬಸವಂತಪ್ಪ ಮತ್ತಿತರರು ಹಾಜರಿದ್ದರು.