SUDDIKSHANA KANNADA NEWS/ DAVANAGERE/ DATE:03-01-2024
ದಾವಣಗೆರೆ: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ. ರಾಮಮಂದಿರ ಉದ್ಘಾಟನೆಗೆ 20 ದಿನಗಳ ಬಾಕಿ ಇದೆ. ಇಂಥ ಸಂದರ್ಭದಲ್ಲಿ ರಾಮಭಕ್ತರು, ಕರಸೇವಕರನ್ನು ಬೆದರಿಸುವ ತಂತ್ರಗಾರಿಕೆಗೆ ಮುಂದಾಗಿರುವುದು ದುರಾದೃಷ್ಟಕರ. ನಾಯಕತ್ವ ಲೋಕಸಭೆ ಚುನಾವಣೆಯಲ್ಲಿ ಸೋಲು ಒಪ್ಪಿಕೊಳ್ಳುತ್ತೇವೆ ಎಂಬ ದೃಷ್ಟಿಯಿಂದ ದ್ವೇಷದ ರಾಜಕಾರಣಕ್ಕೆ ಇಳಿದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ಜಿಎಂಐಟಿ ಅತಿಥಿ ಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂಬ ಸರ್ವೇ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇಂಡಿಯಾ ಛಿದ್ರ ಛಿದ್ರ ಆಗುವ ಸಮಯ ಬಂದಿದೆ. ಡಿಎಂಕೆ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದೆ. ಸನಾತನ ಧರ್ಮದ ಬಗ್ಗೆ ಮಾತನಾಡಿದೆ. ರಾಮಾಯಣ ಕಾಲ್ಪನಿಕ, ರಾಮ ಇದ್ದಾರೋ ಇಲ್ಲವೋ ಗೊತ್ತಿಲ್ಲ, ಸಾಕ್ಷಿಯಿಲ್ಲ ಎಂದವರು ಕಾಂಗ್ರೆಸ್ ನವರು. ರಾಮಮಂದಿರ ಕಟ್ಟಲು ಕಾಂಗ್ರೆಸ್ ಇಷ್ಟವಿಲ್ಲ ಎಂದು ಆರೋಪಿಸಿದರು.

ಕಳೆದ 25 ವರ್ಷಗಳಿಂದಲೂ ಪ್ರಣಾಳಿಕೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂಬ ಘೋಷಣೆ ಮಾಡಿದ್ದೆವು. 30 ವರ್ಷ ಹಿಂದಿನ ಕರಸೇವಕನ ಕೇಸ್ ಅನ್ನು ಮತ್ತೆ ತೆರೆಯಲಾಗಿದೆ. ಕರಸೇವಕರು ಮನೆಮನೆಗೆ ತೆರಳಿ ಮಂತ್ರಾಕ್ಷತೆ ನೀಡುತ್ತಿದ್ದಾರೆ. ಕಾಂಗ್ರೆಸ್ ನ ಹಿಂದೂ ವಿರೋಧಿ ಕ್ರಮದ ವಿರುದ್ಧ ನಮ್ಮ ಹೋರಾಟ. ರಾಮಭಕ್ತರ ಮನೆಗೆ ಭೇಟಿ ನೀಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ರಾಮಭಕ್ತರು, ಕರಸೇವಕರೆಲ್ಲರನ್ನೂ ಶುಭಾಶಯ ಕೋರಲು ಹೋಗುತ್ತೇವೆ, ಎಲ್ಲೇ ಗಲಾಟೆ ಆದರೂ ಬಿಜೆಪಿ ನಿಮ್ಮ ಜೊತೆಗೆ ನಿಲ್ಲುತ್ತೇವೆ. ಹಿಂದೂಗಳು ನಿಮ್ಮ ಪರವಾಗಿ ಇದ್ದೇವೆ. ರಾಜ್ಯದಲ್ಲಿ ಮಂತ್ರಾಕ್ಷತೆ ತೆಗೆದುಕೊಂಡವರು ಧೈರ್ಯದಿಂದ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ. ಬೆಂಗಳೂರಿನಲ್ಲಿ ಪೊಲೀಸರು ಯಾಕೆ ಮಂತ್ರಾಕ್ಷತೆ ತರುತ್ತೀರಾ ಎಂದು ಕೇಳಿದ್ದಾರೆ. ಕಾಂಗ್ರೆಸ್ ನ ದುರಹಂಕಾರಕ್ಕೆ ಜನರು ಪಾಠ ಕಲಿಸುತ್ತಾರೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನ ಎಲ್ಲವೂ ಬಂಡವಾಳ ಹೊರ ಬರಲಿದೆ ಎಂದು ಭವಿಷ್ಯ ನುಡಿದರು.
ಅಯೋಧ್ಯೆಯ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ 30 ವರ್ಷ ಆದ ಮೇಲೆ ಮೂವರು ತೀರಿಕೊಂಡಿದ್ದಾರೆ. ಐವರು ಖುಲಾಸೆ ಆಗಿದ್ದಾರೆ. ನಾನು ತೀರ್ಪಿನ ಪ್ರತಿ ಓದಿದ್ದೇನೆ. ಗಲಾಟೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ವಕೀಲರ ಜೊತೆ ಚರ್ಚೆ ನಡೆಸಿದ್ದೇನೆ. ಸಿದ್ದರಾಮಯ್ಯರಿಗೆ ಕಾನೂನು ಗೊತ್ತಿದೆಯಾ? ಪರಾರಿಯಾಗಿದ್ದಾರೆ ಎಂದು ಹೇಳುತ್ತೀರಾ. ಅದೇ ಪೊಲೀಸ್ ಠಾಣೆ ಮುಂದೆ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ನೊಟೀಸ್ ಕೊಟ್ಟಿಲ್ಲ. ಯಾವಾಗ ಬೇಕಾದರೂ ಬಂಧಿಸಿ ಜೈಲಿಗೆ ಕಳುಹಿಸಿಬಿಡಬಹುದಾ? ಇದೇನೂ ಕೊಲೆ, ಕೊಲೆ ಯತ್ನ, ದೇಶದ್ರೋಹಿಗಳ ಕೇಸ್ ಇದಾ ಎಂದು ಪ್ರಶ್ನಿಸಿದರು.
ಪಿಎಫ್ಐ 175 ಕೇಸ್ ವಾಪಸ್ ಪಡೆದಿರಿ. 1700 ಜನರನ್ನು ಬಿಡುಗಡೆ ಮಾಡಿದಿರಿ. ಯಾಕೆ ವಾಪಸ್ ತೆಗೆದುಕೊಂಡಿದ್ದೀರಾ. ಸುಮಾರು 40 ಕೊಲೆ ಮಾಡಿದ್ದಾರೆ ಎಂದು ಅಫಿಡವಿಟ್ ಅನ್ನು ಕೇರಳ ಸರ್ಕಾರಕ್ಕೆ ನೀಡಲಾಗಿದೆ. ಕೊಲೆಗಡುಕರ ಕೇಸ್ ಅನ್ನು ವಾಪಸ್ ಪಡೆದಿದ್ದಾರೆ. ರಾಮಭಕ್ತರನ್ನು ಬಂಧಿಸಿ, ಪಿಎಫ್ಐ ದೇಶದ್ರೋಹಿಗಳನ್ನು ಬಿಡುಗಡೆ ಮಾಡಿದ್ದೀರಾ. ದೇಶಭಕ್ತರ ಬಂಧನ, ದೆೇಶದ್ರೋಹಿಗಳ ಬಿಡುಗಡೆ, ಇದು ಕಾಂಗ್ರೆಸ್ ಸ್ಲೋಗನ್. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಬಂಧಿತರನ್ನು ಬಿಡುಗಡೆ ಮಾಡಬೇಕು. ಅಧಿಕಾರಿಯನ್ನು ಅಮಾನತು ಮಾಡಬೇಕು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಅಯೋಧ್ಯೆ ಅಭಿಯಾನ ಹತ್ತಿಕ್ಕಲು ಹಿಂದೂ ಕಾರ್ಯಕರ್ತರು ಮನೆಗೆ ಸೇರಿಸಬೇಕು ಎಂಬ ಕಾರಣಕ್ಕೆ ಭಯಭೀತಿ ಸೃಷ್ಟಿಸಲು ಹೊರಟಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಹೇಳಬೇಕು. ಕರ್ನಾಟಕದಲ್ಲಿ ಅಯೋಧ್ಯೆಯ ಮೆರವಣಿಗೆ ಇಲ್ಲ, ಭಜನೆ ಇಲ್ಲ, ಯಾವುದೂ ಇಲ್ಲ ಎಂಬಂತೆ ಮಾಡಿದ್ದೀವಿ ಎಂದು ತೋರಿಸಲು ಈ ರೀತಿ ಸಿದ್ದರಾಮಯ್ಯರ ಸರ್ಕಾರ ವರ್ತಿಸುತ್ತಿದೆ. ಸಿದ್ದರಾಮಯ್ಯ ಅವರು ಟಿಪ್ಪು ಸಿದ್ಧಾಂತ ಜಾರಿಗೆ ತರುತ್ತಿದ್ದೇವೆ, ಟಿಪ್ಪು ಮತಾಂತರ ಮಾಡಿದಂತೆ ಮತಾಂಧತೆ ತರುತ್ತಿದ್ದೇವೆ ಎಂದು ತೋರಿಸುವುದಕ್ಕಾಗಿ ಹಿಂದೂಗಳ ವಿರುದ್ಧ ಈ ಕ್ರಮ ಎಂದು ಅಶೋಕ ಕಿಡಿಕಾರಿದರು.
ಈ ವೇಳೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಶಾಸಕ ಬಿ. ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.