SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: ಚನ್ನಗಿರಿಯ ಶಾಸಕ, ಆಪ್ತ ಶಿವಗಂಗಾ ಬಸವರಾಜ್ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಿಡಿಮಿಡಿಗೊಂಡಿದ್ದಾರೆ. ಮಾತ್ರವಲ್ಲ, ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಿ ಮುಜುಗರಕ್ಕೆ ಕಾರಣವಾಗಿದ್ದ ಶಿವಗಂಗಾ ಬಸವರಾಜ್ ಮತ್ತೊಂದು ಮಾತು ಈಗ ವಿವಾದದ ಕಿಡಿ ಎಬ್ಬಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕೊಡಿಸದ ಾಗೂ ಪಕ್ಷ ಗೆಲ್ಲಿಸದ ಸಚಿವರಿಗೆ ಸಚಿವ ಸಂಪುಟದಿಂದ ಕೊಕ್ ನೀಡಬೇಕು. ಹೊಸಬರಿಗೆ ಅವಕಾಶ ನೀಡಬೇಕೆಂಬ ಶಿವಗಂಗಾ ಬಸವರಾಜ್ ಹೇಳಿಕೆಗೆ ಆಕ್ರೋಶ ವ್ಯ.ಕ್ತಪಡಿಸಿರುವ ಡಿ. ಕೆ. ಶಿವಕುಮಾರ್ ಅವರು, ಶಾಸಕರೇ ಬಾಯ್ಮುಚ್ಚಿಕೊಂಡು ಇರಿ. ಜನರು ನೀಡಿರುವ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದೆ. ತಪ್ಪು ತಿದ್ದುಕೊಳ್ಳೋಣ ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದ ಶಿವಗಂಗಾ ಬಸವರಾಜ್ ಅವರು, ಪ್ರತಿಯೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷರು ಸಚಿವರಿಗೆ ನೀಡಿದ್ದರು. ಆದ್ರೆ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದಿರಲಿ, ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಸಚಿವರು ಮುನ್ನಡೆ ಕೊಡಿಸಲು ಸಾಧ್ಯವಾಗಿಲ್ಲ. ಇಂಥ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
ರಾಹುಲ್ ಗಾಂಧಿ ಹಾಗೂ ಪಕ್ಷದ ಹಿರಿಯ ನಾಯಕರು ಇಂಥ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದರೂ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಗೆ ಬಂದಿಲ್ಲ. ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಪ್ರತಿನಿಧಿಸುವ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೂ, ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಬಾಯ್ಮುಚ್ಚಿಕೊಂಡು ಇದ್ದರೆ ತುಂಬಾ ಒಳ್ಳೆಯದು:
ಬೆಂಗಳೂರಿನಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮದವರು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಅವರ ಹೇಳಿಕೆ ಕುರಿತು ಕೇಳುತ್ತಿದ್ದಂತೆಯೇ ಸಿಟ್ಟಾದರು. ಲೋಕಸಭೆ ಚುನಾವಣೆಯಲ್ಲಿ ಆಗಿರುವ ಹಿನ್ನೆಡೆ ಎಲ್ಲರಿಗೂ ಆಘಾತ ತಂದಿದೆ. ಈ ವಿಚಾರದಲ್ಲಿ ಶಾಸಕರು ಮರ್ಯಾದೆಯಿಂದ ಬಾಯ್ಮುಚ್ಚಿಕೊಂಡು ಇದ್ದರೆ ತುಂಬಾ ಒಳ್ಳೆಯದು ಎಂದು ಕಿಡಿಕಾರಿದರು.
ಅನಗತ್ಯವಾಗಿ ಯಾರೂ ಬಹಿರಂಗವಾಗಿ ಹೇಳಿಕೆ ನೀಡಬಾರದು. ಸೋಲಿಗೆ ಕೆಲವು ಶಾಸಕರು ಕಾರಣವೆಂದು ಸಚಿವರು ದೂರು ನೀಡಿದ್ದಾರೆಯೇ ಎಂಬ ಕುರಿತಂತೆ ನನ್ನ ಬಳಿ ಬಂದು ಯಾರೂ ದೂರು ಕೊಟ್ಟಿಲ್ಲ. ಯಾರ ಮೇಲೆ ದೂರು ನೀಡಿದರೂ ಪ್ರಯೋಜನವಿಲ್ಲ. ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾ್ಯಕರ್ತರ ಬಳಿ ಮಾತನಾಡಿ, ಎಲ್ಲಿ ತಪ್ಪಾಗಿದೆಯೆಂದು ಪರಿಶೀಲಿಸಿ, ಪರಿಹಾರ ಸಮೇತ ಉತ್ತರ ನೀಡಬೇಕು ಅಷ್ಟೇ ಎಂದು ಖಡಕ್ ಆಗಿಯೇ ಡಿಕೆಶಿ ಹೇಳಿದರು.
ಸೋಲು ಸೋಲೇ:
ನನ್ನ ಕ್ಷೇತ್ರದಲ್ಲಿಯೇ ಅನೇಕ ನಾಯಕರ ಊರಿನಲ್ಲಿಯೇ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ನೀಡಿದರೆ ಯಾರೂ ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ. ಪ್ರಮುಖ ನಾಯಕರ ಕ್ಷೇತ್ರಗಳಲ್ಲಿಯೇ
ನಿರೀಕ್ಷೆಯಷ್ಟು ಮತಗಳು ಕಾಂಗ್ರೆಸ್ ಗೆ ಬಂದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪು ನಮಗೆ ಎಚ್ಚರಿಕೆ ಗಂಟೆ. ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಜೊತೆ ಪರಾಮರ್ಶೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಫಲಿತಾಂಶದಲ್ಲಿ ಯಾಕೆ ಹೆಚ್ಚು ಸ್ಥಾನ ಬರಲಿಲ್ಲ ಎಂಬ ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ನಾಯಕರ ಜೊತೆ ಸಭೆ ನಡೆಸಲಾಗುವುದು. ಸದ್ಯದಲ್ಲಿಯೇ ಸಭೆಯ ದಿನ ಗೊತ್ತುಪಡಿಸಲಾಗುವುದು. ಕರ್ನಾಟಕ, ಹಿಮಾಚಲ ಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನೆಡೆ ಆಗಿರುವುದು ಎಐಸಿಸಿ ಅಧ್ಯಕ್ಷರಿಗೆ ಬೇಸರ
ತರಿಸಿರಬಹುದು. ರಾಜ್ಯದಲ್ಲಿ ಕಾಂಗ್ರೆಸ್ 14-15 ರಿಂದ ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಜನರ ತೀರ್ಪಿಗೆ ನಾವೆಲ್ಲರೂ ತಲೆಬಾಗುತ್ತೇವೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.