SUDDIKSHANA KANNADA NEWS/ DAVANAGERE/ DATE:19-02-2024
ದಾವಣಗೆರೆ: ದೇಶ ವಿಭಜನೆಗೆ ಕೈ ಹಾಕುವ ಹಾಗೂ ಜಿನ್ನಾ ಸಂಸ್ಕೃತಿ ಹೊಂದಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತನಾಡಿದ್ದೆ. ಅದರಲ್ಲಿ ತಪ್ಪೇನಿದೆ. ಈ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಡಿಸಿಎಂ ಡಿ. ಕೆ. ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದಾರೆ. ಮತ್ತೆ ಜೈಲಿಗೆ ಹೋಗುತ್ತಾರೆ. ನನಗೇನೂ ಸಂಸದ ಡಿ. ಕೆ. ಸುರೇಶ್ ರ ಮೇಲೆ ವೈಯಕ್ತಿಕ ದ್ವೇಷ ಇಲ್ಲ. ದೇಶ ಇಬ್ಬಾಗ ಮಾಡುವವರ ವಿರುದ್ಧ ಮಾತನಾಡಿದ್ದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಸಮರ್ಥಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೇಳಿದ್ದು ಸರಿಯಾಗಿದೆ. ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಡಿ. ಕೆ. ಸುರೇಶ್ ಹೇಳಿಕೆ ಒಪ್ಪುವುದಿಲ್ಲ ಎಂದಿದ್ದಾರೆ. ನನ್ನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದರೂ ಕೋರ್ಟ್ ತಡೆಯಾಜ್ಞೆ ನೀಡಿದೆ. ದೇಶ ಒಪ್ಪುವ ನನ್ನ ಮಾತಿನಿಂದ ಡಿ. ಕೆ. ಶಿವಕುಮಾರ್ ಹಾಗೂ ಡಿ. ಕೆ. ಸುರೇಶ್ ಗೆ ಇನ್ನು ಸಮಾಧಾನ ಇಲ್ಲ. ಗುಂಡಿಟ್ಟು ಹೊಡೆಯಲಿ, ನಾನೇ ಹೋಗುತ್ತೇನೆ ಎಂಬ ಸುರೇಶ್ ಹೇಳಿಕೆಗೆ ನಗುತ್ತಲೇ ಉತ್ತರಿಸಿದರು.
ರಾಜ್ಯದ ಸಿಎಂಗೆ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿರುವುದು ಇದೇ ಮೊದಲು. ಜೈಲಿಗೆ ಹೋಗಿ ಬಂದ ಡಿ. ಕೆ. ಶಿವಕುಮಾರ್ ಏನು ಎಂಬುದು ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯ ಬಂದಾಗ ಪಾಕಿಸ್ತಾನ, ಹಿಂದೂಸ್ತಾನ ಎಂದು ಇಬ್ಬಾಗ ಮಾಡಲಾಯಿತು. ಈಗ ಉತ್ತರ ಭಾರತ, ದಕ್ಷಿಣ ಭಾರತವನ್ನು ಭಾಗ ಮಾಡಲು ಹೊರಟಿರುವುದರ ವಿರುದ್ಧ ಇದ್ದೇನೆ ಎಂದರು.
ಮನೆಯಲ್ಲಿ ಬಟ್ಟೆ ತರುವ ವಿಚಾರಕ್ಕೆ ಜಗಳವಾಗುತ್ತದೆ. ಹಬ್ಬಕ್ಕೆ ತೆಗೆದುಕೊಳ್ಳುವುದು ನೀವು ಬೇಡ ಎಂದರೆ ನಿಮ್ಮ ಹೆಂಡತಿ ಈಗಲೇ ಬೇಕು ಅಂತಾರೆ. ಹಾಗಾಗಿ, ದೇಶ ಆಳುವ ಚುನಾವಣೆ ಇದು. ಬಿಜೆಪಿಯಲ್ಲಿ ಟಿಕೆಟ್ ನೀಡಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಕೇಂದ್ರದ ನಾಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿ ಪೊಲಿಟಿಕಲ್ ಪಾರ್ಟಿ. ಎದುರಾಳಿಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡುತ್ತೇವೆ. ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಈಶ್ವರಪ್ಪರ ಪುತ್ರ ಕೆ. ಇ. ಕಾಂತೇಶ್, ಜಿಲ್ಲಾ ವಕ್ತಾರ ಡಿ. ಎಸ್. ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಐರಾಣಿ ಅಣ್ಣೇಶ್, ಅನಿಲ್ ಕುಮಾರ್ ನಾಯಕ್, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ಕೆ. ಬಿ. ಕೊಟ್ರೇಶ್, ಎಲ್. ಎನ್. ಕಲ್ಲೇಶ್, ಕೊಳೇನಹಳ್ಳಿ ಸತೀಶ್, ಗುರುನಾಥ್, ಲಿಂಗರಾಜ, ಎಚ್. ಎಸ್. ಕೃಷ್ಣಮೂರ್ತಿ ಪವಾರ್ ಮತ್ತಿತರರು ಹಾಜರಿದ್ದರು.