ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಅಸಮಾಧಾನ ಸ್ಫೋಟಗೊಂಡಿದೆ. ಶಾಸಕರಾದ ಯಶವಂತರಾಯಗೌಡ ಪಾಟೀಲ್ ಹಾಗೂ ಬೇಳೂರು ಗೋಪಾಲಕೃಷ್ಣ ರಾಜೀನಾಮೆ ನಿರ್ಧಾರ ಪ್ರಕಟಿಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಅವರಿಗೂ ನೋವಾಗಿರುತ್ತದೆ, ನನಗೆ ನೋವಾಗಿರಲಿಲ್ಲವೇ? ನನಗೂ ಮತ್ತು ಪರಮೇಶ್ವರ್ ಅವರಿಗೂ ಹಿಂದೆ ನೋವಾಗಿತ್ತು” ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತ ಶಾಸಕರ ಅಸಮಾಧಾನ ಶಮನಕ್ಕೆ ಪ್ರಯತ್ನಿಸಲಾಗುವುದು ಎಂಬ ಸೂಚನೆ ನೀಡಿದರು. ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, “ಮಹಿಳೆಯರಿಗೆ ಖಂಡಿತವಾಗಿಯೂ ಸ್ಥಾನ ಕೊಟ್ಟೇ ಕೊಡುತ್ತೇವೆ. ಮಹಿಳೆಯರಿಲ್ಲದೆ ನಮ್ಮ ಪಕ್ಷವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಖಾತೆ ಹಂಚಿಕೆ ವಿಳಂಬದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದ ಸಿಎಂ, “ಬಿಎಸ್ ಯಡಿಯೂರಪ್ಪ ಅವರ ಸರ್ಕಾರದ ಇತಿಹಾಸವನ್ನು ನೀವೇ ಒಮ್ಮೆ ತಿರುಗಿ ನೋಡಿ. ಅವರ ಸರ್ಕಾರ ರಚನೆಯಾಗಿದ್ದಾಗ ಆರಂಭದಲ್ಲಿ ಒಬ್ಬರೇ ಸರ್ಕಾರ ನಡೆಸಲಿಲ್ಲವೇ?” ಎಂದು ಪ್ರಶ್ನಿಸಿದರು.
ಇನ್ನು ಪ್ರಕರಣ ಎದುರಿಸುತ್ತಿರುವ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವ ಕುರಿತು ಸಮರ್ಥಿಸಿಕೊಂಡ ಅವರು, “ಹಿಂದೆ ನನ್ನ ಮೇಲೆಯೂ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರಲಿಲ್ಲವೇ? ಹಾಗಿದ್ದರೂ ನಮ್ಮ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ?” ಎಂದು ತಿರುಗೇಟು ನೀಡಿದರು.
ಸಚಿವರ ಖಾತೆಗಳ ಬದಲಾವಣೆ ವಿಚಾರವಾಗಿ ಮಾತನಾಡಿ, “ಪಕ್ಷದ ಹೈಕಮಾಂಡ್ ಏನು ಸೂಚಿಸುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇವೆ” ಎಂದರು. ಹಾಗೆಯೇ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಖಾತೆ ಬದಲಾವಣೆ ಕುರಿತು ಕೇಳಿದಾಗ, “ನನ್ನ ಹಾಗೂ ರಾಮಲಿಂಗಾರೆಡ್ಡಿ ಅವರದ್ದು 40 ವರ್ಷಗಳ ಸುದೀರ್ಘ ಸ್ನೇಹ. ನಾನು ಈಗಾಗಲೇ ಅವರೊಂದಿಗೆ ಮಾತನಾಡಿದ್ದೇನೆ. ಅವರು ಮಾಧ್ಯಮಗಳ ಮುಂದೆ ಏನು ಹೇಳಿದ್ದಾರೆ ಮತ್ತು ನನ್ನ ಬಳಿ ಏನು ಮಾತನಾಡಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ” ಎಂದು ಹೇಳಿದರು.
- B Nagendra
- Belur Gopalakrishna
- Congress High Command
- DK Shivakumar
- Karnataka Cabinet expansion
- Karnataka CM DK Shivakumar
- Karnataka Politics News
- Ramalinga Reddy
- Yashwantharayagowda Patil
- ಕರ್ನಾಟಕ ರಾಜಕೀಯ
- ಕರ್ನಾಟಕ ಸಚಿವ ಸಂಪುಟ ವಿಸ್ತರಣೆ
- ಡಿ. ಕೆ. ಶಿವಕುಮಾರ್
- ಬಿ ನಾಗೇಂದ್ರ
- ಬೇಳೂರು ಗೋಪಾಲಕೃಷ್ಣ
- ಯಶವಂತರಾಯಗೌಡ
- ರಾಮಲಿಂಗಾರೆಡ್ಡಿ
- ಸಿಎಂ ಡಿ ಕೆ ಶಿವಕುಮಾರ್






Leave a comment