ಬೆಂಗಳೂರು: “ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದೇಶದಿಂದ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಕುಟುಂಬವನ್ನು ಹೊರಗೆಹಾಕಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯಿತು. ನಮ್ಮ ಇಂಡಿಯಾ ಒಕ್ಕೂಟ 25 ಸೀಟುಗಳ ಅಂತರದಲ್ಲಿ ಅಧಿಕಾರದಿಂದ ವಂಚಿತವಾಯಿತು. ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ. ಆದರೆ ನಮ್ಮ ಬದ್ಧತೆಯನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕ್ವಿಟ್ ಇಂಡಿಯಾ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
ಇಂದು ದೇಶಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಈ ದೇಶದ ಸಮಗ್ರತೆ, ಐಕ್ಯತೆ, ಶಾಂತಿಗಾಗಿ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ನಮ್ಮ ರಾಜ್ಯದಲ್ಲೂ ಚಾಮರಾಜನಗರದಿಂದ ರಾಯಚೂರುವರೆಗೆ ಪಾದಯಾತ್ರೆ ನಡೆಯಿತು. ಈ ಯಾತ್ರೆ ಸಾಗಿದ ಎಲ್ಲಾ ಕಡೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಗೆಲ್ಲಲು ಸಾಧ್ಯವಾಯಿತು” ಎಂದರು.
ಭಾರತ ಜೋಡೋ ಯುವ ಶಕ್ತಿ ಸಂಘಕ್ಕೆ ಈ ತಿಂಗಳು ನೋಂದಣಿ ಆರಂಭ
“ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ವಾರ್ಡ್ ಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ ಜೋಡೋ ಯುವ ಶಕ್ತಿ ಸಂಘ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಯುವಜನ ಹಾಗೂ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಈ ಸಂಘ ಸ್ಥಾಪಿಸಲಾಗುವುದು. ಪ್ರತಿ ತಾಲ್ಲೂಚಿನಲ್ಲಿ ಸರಾಸರಿ 35-40 ಪಂಚಾಯ್ತಿಗಳಿರುತ್ತವೆ. ಪ್ರತಿ ಸಂಘಟಗಲ್ಲಿ 150ರಿಂದ 200 ಸದಸ್ಯರು ಇರುತ್ತಾರೆ. ಯುವಕರಲ್ಲಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಲು, ಮಹಿಳೆಯರಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು. ನೀವು ಅದಕ್ಕೆ ಸಿದ್ಧತೆ ಮಾಡಿಕೊಂಡು ಯುವಕರನ್ನು ಸದಸ್ಯರಾಗುವಂತೆ ಮಾಡಬೇಕು. 10 ರೂ. ಗೌರವ ಧನ ನೀಡಿ ಸದಸ್ಯತ್ವ ಪಡೆಯಬಹುದು. 16-40 ವಯೋಮಾನದವರು ಸದಸ್ಯರಾಗಬಹುದು. ಈ ತಿಂಗಳು ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ. 2028ರಲ್ಲಿ ಈ ರಾಜ್ಯಕ್ಕೆ ಹಾಗೂ 2029ರಲ್ಲಿ ದೇಶಕ್ಕೆ ಹೊಸ ಸಂದೇಶ ನೀಡಬೇಕು” ಎಂದು ಕರೆ ನೀಡಿದರು.





Leave a comment