SUDDIKSHANA KANNADA NEWS/ DAVANAGERE/ DATE:27-08-2024
ದಾವಣಗೆರೆ: ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ 59 ವರ್ಷ ಮಹಿಳೆಯು ತೀವ್ರರೀತಿಯ ಸೋಂಕಿನಿಂದ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆಂದು ವರದಿ ಬಂದಿದೆ. ಕಲುಷಿತ ನೀರಿನ ಸೇವನೆಯಿಂದ ಸಾವು ಕಂಡಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆಯು ಸ್ಪಷ್ಟನೆ ನೀಡಿದೆ.
ಹುಣಸಘಟ್ಟ ಗ್ರಾಮದಲ್ಲಿ ಕಳೆದ ವಾರ ಸುಮಾರು 20 ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 9 ರೋಗಿಗಳು ಸ್ಥಳೀಯ ಕ್ಯಾಸಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 11 ರೋಗಿಗಳು ಶಿವಮೊಗ್ಗದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮದ 59 ವರ್ಷದ ಒಬ್ಬ ಮಹಿಳೆಯು ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಕಳೆದ 24ರಂದು ಮೃತಪಟ್ಟಿದ್ದು ಆಸ್ಪತ್ರೆಯ ದಾಖಲೆಯಲ್ಲಿ ತೀವ್ರ ತರದ ಸೊಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿದೆ.
ಈ ಮಹಿಳೆಯ ಮನೆ ಹಾಗೂ ಸುತ್ತಮುತ್ತಲು ಸರಬರಾಜು ಮಾಡುವ ಪೈಪ್ ಮತ್ತು ನಲ್ಲಿ ನೀರಿನ 4 ಮಾದರಿಗಳನ್ನು ಜಿಲ್ಲಾ ಜನಾರೋಗ್ಯ ಪ್ರಯೋಗಶಾಲೆಯಲ್ಲಿ ಪರೀಕ್ಷೆ ಮಾಡಿದ್ದು ನಾಲ್ಕೂ ನೀರಿನ ಮಾದರಿಗಳಲ್ಲಿ ಯಾವುದೇ ಸೂಕ್ಷ್ಮಾಣು ಕಂಡು ಬಂದಿಲ್ಲ. ಆದ್ದರಿಂದ ಮಹಿಳೆಯು ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟಿರುವುದಿಲ್ಲವೆಂದು ಮತ್ತು ತೀವ್ರ ತರದ ಸೋಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯದಿಂದ ಮರಣ ಸಂಭವಿಸಿದೆ ಎಂದು ಧೃಢೀಕರಿಸಿದೆ.
ಗ್ರಾಮದ ಎಲ್ಲಾ ನೀರಿನ ಮೂಲಗಳನ್ನು ಕ್ಲೋರಿನೇಶನ್ ಮಾಡಲಾಗಿದ್ದು ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.