SUDDIKSHANA KANNADA NEWS/ DAVANAGERE/ DATE:12-01-2024
ದಾವಣಗೆರೆ: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಪುಟಿದೇಳಲಾರಂಭಿಸಿದೆ. ರಾಜ್ಯದ ಕೆಲವೇ ಕೆಲ ನಾಯಕರನ್ನು ಹೊರತುಪಡಿಸಿದರೆ ಹೋದ ಕಡೆಗಳಲ್ಲಿ ಅದ್ಧೂರಿ ಸ್ವಾಗತ ಸಿಗುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪರ ಮೇಲಿನ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಬಿಜೆಪಿ ಮುಖಂಡರು, ಕಾರ್ಯಕರ್ತರ ಉತ್ಸಾಹವೂ ಹೆಚ್ಚಾಗಿದೆ. ಈ ನಡುವೆ ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಚುರುಕುಗೊಂಡಿದೆ. ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಅಧ್ಯಕ್ಷರು ಯಾರಾಗ್ತಾರೆ ಎಂಬ ಕುತೂಹಲವೂ ಗರಿಗೆದರಿದೆ. ಈ ನಡುವೆ ಅಧ್ಯಕ್ಷರ ಹೆಸರು ಘೋಷಣೆಗೆ ಮುನ್ನ ಅಸಮಾಧಾನ ಬುಸುಗುಟ್ಟಲಾರಂಭಿಸಿದೆ.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಪ್ರಮುಖವಾಗಿ ಹರಿಹರ ಶಾಸಕ ಬಿ. ಪಿ. ಹರೀಶ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಬಿ. ಎಸ್. ಜಗದೀಶ್, ಎನ್. ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯರೂ ಆದ ಹಿಂದೂ ಸಾಮ್ರಾಟ್ ಅಂತಾನೇ ಕರೆಯಿಸಿಕೊಳ್ಳುವ ಎಸ್. ಟಿ. ವೀರೇಶ್ ಅವರ ಹೆಸರೂ ಚರ್ಚೆಯಲ್ಲಿವೆ. ಅಂತಿಮವಾಗಿ ಬಿ. ಪಿ. ಹರೀಶ್, ಕೆ. ಎಂ. ಸುರೇಶ್, ಎನ್. ರಾಜಶೇಖರ್, ಜಗದೀಶ್ ಹೆಸರು ಹೆಚ್ಚು ಪ್ರಸ್ತಾಪದಲ್ಲಿದೆ.
ಕೆ. ಎಂ. ಸುರೇಶ್ ಪರ ಬ್ಯಾಟಿಂಗ್
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಶಿವಯೋಗಿಸ್ವಾಮಿ ಅವರು ಕೆ. ಎಂ. ಸುರೇಶ್ ಪರ ಬ್ಯಾಟ್ ಬೀಸುತ್ತಿದ್ದರೆ, ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಬಿ. ಪಿ. ಹರೀಶ್ ಇಲ್ಲವೇ ಜಗದೀಶ್ ಅವರ ಹೆಸರು ಸೂಚಿಸಿದ್ದಾರೆ. ಇನ್ನು ತೀವ್ರ ವಿರೋಧ ವ್ಯಕ್ತವಾದರೆ ಎನ್. ರಾಜಶೇಖರ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿಸಿ ಎಂಬ ಸಲಹೆಯನ್ನು ಆರ್ ಎಸ್ ಎಸ್ ನೀಡಿದೆ. ಎಸ್. ಟಿ. ವೀರೇಶ್ ಅವರೂ ಸಹ ಅರ್ಜಿ ಸಲ್ಲಿಸಿದ್ದಾರೆ. ಅವರ ಹೆಸರೂ ಕೂಡ ಪ್ರಸ್ತಾಪ ಆಗಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ತಾನು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಆಣೆ ಮಾಡಿದ್ದಾರೆ. ನಾನು ಅರ್ಜಿಯನ್ನೂ ಹಾಕಿಲ್ಲ ಎಂದು ಹೇಳಿದ್ದಾರೆ. ಆದ್ರೆ, ಬಿಜೆಪಿ ಮೂಲಗಳ ಪ್ರಕಾರ, ಕೆ. ಎಂ. ಸುರೇಶ್ ಪರ ನಿಂತಿದ್ದಾರೆ ಎಂದು ತಿಳಿಸಿವೆ.
ಬಿ. ಪಿ. ಹರೀಶ್ ಯಾಕೆ ಬೇಕು…? ಯಾಕೆ ಬೇಡ…?
ಬಿ. ಪಿ. ಹರೀಶ್ ಗೆ 62 ವರ್ಷ ವಯಸ್ಸಾಗಿರುವುದು ಅಧ್ಯಕ್ಷ ಸ್ಥಾನಕ್ಕೆ ಘೋಷಣೆ ಮಾಡಲು ತೊಡಕಾಗಿದೆ. ಈಗಾಗಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಯಸ್ಸಿನ ಮಿತಿ ಇರುವ ಕಾರಣಕ್ಕೆ ಆ ನಿಯಮದೊಳಗೆ ಆಯ್ಕೆ ಮಾಡಬೇಕು. ಒಂದು ವೇಳೆ ಬಿ. ಪಿ. ಹರೀಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿಸಿದರೆ ಬೇರೆ ಜಿಲ್ಲೆಗಳಲ್ಲಿಯೂ 60 ವರ್ಷ ಮೇಲ್ಪಟ್ಟವರು ಸ್ಥಾನ ಕೇಳಬಹುದು. ವಿವಿಧ ಘಟಕಗಳ ನೇಮಕಾತಿಯಲ್ಲಿಯೂ ಅಪಸ್ವರ ಕೇಳಿಬರಬಹುದು ಎಂಬ ಕಾರಣಕ್ಕೆ ಹರೀಶ್ ಅವರ ಹೆಸರು ಮುಂಚೂಣಿಯಲ್ಲಿದ್ದರೂ ಅಳೆದು ತೂಗಲಾಗುತ್ತಿದೆ.
ಜಿಲ್ಲೆಯಲ್ಲಿರುವ ಏಕೈಕ ಬಿಜೆಪಿ ಶಾಸಕ ಬಿ. ಪಿ. ಹರೀಶ್. ಸಾದು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ. ಮುಂಬರುವ ಲೋಕಸಭೆ ಚುನಾವಣೆಗೆ ಇವರು ಅಧ್ಯಕ್ಷರಾದರೆ ಪಕ್ಷಕ್ಕೆ ಹಾಗೂ ಅಭ್ಯರ್ಥಿಗೆ ನೆರವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನು ಜಗದೀಶ್ ಅವರು ಸಹ ಸಾದು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಒಂದು ವೇಳೆ ಲಿಂಗಾಯತ ಸಮುದಾಯಕ್ಕೆ ತಪ್ಪಿದರೆ ಆಗ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಶ್ರೀನಿವಾಸ್ ದಾಸಕರಿಯಪ್ಪ. ಸಿದ್ದೇಶ್ವರ ಅವರ ಆಪ್ತರಾಗಿರುವ ಶ್ರೀನಿವಾಸ್
ದಾಸಕರಿಯಪ್ಪ ಅವರು ಸಂಘಟನಾ ಚತುರ.
ಬುಸುಗುಡಲಾರಂಭಿಸಿದೆ ಅಸಮಾಧಾನ
ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ. ಗುಂಪುಗಾರಿಕೆ, ಮುಖಂಡರಿಂದ ಲಾಬಿ, ದಾವಣಗೆರೆ ಜಿಲ್ಲೆಯ ಮುಂದಿನ ಮೂರು ವರ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಹಲವಾರು ಜನ ಆಕಾಂಕ್ಷಿಗಳಿದ್ದು ಜಿಲ್ಲೆಯಲ್ಲಿ ಸ್ಪಷ್ಟವಾಗಿ 2 ಗುಂಪುಗಳು ಇದ್ದು ಒಂದು ಗುಂಪಿನವರು ತಮ್ಮ ಹಿಂಬಾಲಕರನ್ನು ಅಧ್ಯಕ್ಷರನ್ನಾಗಿ ಮಾಡಲು ರಾಜ್ಯಾಧ್ಯಕ್ಷರ ಮೇಲೆ ಬೇರೆ ಬೇರೆ ಕಡೆಯಿಂದ ಒತ್ತಡ ಹಾಕಲು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.
ತೀವ್ರ ವಿರೋಧ
ತಮ್ಮ ಗುಂಪಿನ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಲು ತೀವ್ರ ಪ್ರಯತ್ನವನ್ನು ನಡೆಸಿದ್ದಾರೆ. ಕಾರ್ಯಕರ್ತರ ಸಂಪರ್ಕವಿಲ್ಲದೆ ಕೇವಲ ಮುಖಂಡರ ಜೊತೆ ತಿರುಗಾಡುವುದೇ ಆ ವ್ಯಕ್ತಿಗೆ ಅರ್ಹತೆ ಎಂಬಂತೆ ಮುಖಂಡರು ವರ್ತಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಅಂಟಿಕೊಂಡರೆ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಅರಿವಿಲ್ಲದೆ ಮುಖಂಡರು ನಡೆದುಕೊಳ್ಳುತ್ತಿದ್ದಾರೆ. ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯಾಧ್ಯಕ್ಷರಿಗೆ ಆ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡದಂತೆ ಒತ್ತಡ ಹೇರಲು ಸಹ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಆದರೆ ಆ ವ್ಯಕ್ತಿಯ ವಿರುದ್ಧ ದಾವಣಗೆರೆ ಜಿಲ್ಲೆಯ ಎಲ್ಲಾ ಬಿಜೆಪಿ ಮೂಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷದ ಚಟುವಟಿಕೆಯಿಂದ ದೂರ ಇರಲು ನಿರ್ಧಾರ
ಒಂದು ವೇಳೆ ಆ ವ್ಯಕ್ತಿಯನ್ನೇ ಮಾಡಿದಲ್ಲಿ ಪಕ್ಷದ ಚಟುವಟಿಕೆಯಿಂದ ದೂರವಿರಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಹಲವಾರು ಜನ ಆಕಾಂಕ್ಷಿಗಳಿದ್ದರೂ ಸಹ ಮುಖಂಡರು ಒಬ್ಬ ವ್ಯಕ್ತಿಗೆ ಅಂಟಿಕೊಂಡಿರುವ ಉದ್ದೇಶವಾದರೂ ಏನು? ಅವರಿಂದ ಪಕ್ಷಕ್ಕೆ ಕೊಡುಗೆಯಾದರೂ ಏನು? ಮಹಾನಗರ ಪಾಲಿಕೆ ಸದಸ್ಯತ್ವ
ಸ್ಥಾನಕ್ಕೂ ಸೇರಿದಂತೆ ಎಂಎಲ್ಎ, ಎಂಎಲ್‌ಸಿ, ಎಂಪಿ,ಇದೀಗ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಅವರ ಹೆಸರನ್ನು ಹೇಳುವ ಇವರು ಮುಂದೊಂದು ದಿನ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಅದೇ ಹೆಸರನ್ನು ಹೇಳಿದರು ಅಚ್ಚರಿ ಇಲ್ಲ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಹೇಳಿದ್ದಾರೆ.
ಚುನಾವಣೆ ನಡೆಸಿ, ಅಧ್ಯಕ್ಷರ ಆಯ್ಕೆ ಮಾಡಿ
ಹಿರಿಯ ಕಾರ್ಯಕರ್ತರು, ಹಾಲಿ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಮಾಜಿ ಉಪ ಮಹಾಪೌರರು, ಮಾಜಿ ಮಹಾಪೌರರು, ದೂಡಾ ಮಾಜಿ ಅಧ್ಯಕ್ಷರು ಹಾಲಿ ಮತ್ತು ಮಾಜಿ ಸರ್ಕಾರಿ ನಾಮನಿರ್ದೇಶಿತ ಸದಸ್ಯರು, ಪದಾಧಿಕಾರಿಗಳು ಸೇರಿದಂತೆ ಹಿರಿಯ ಕಾರ್ಯಕರ್ತರು ಅಸಮಾಧಾನ ತೋರಿಕೊಳ್ಳುತ್ತಿದ್ದಾರೆ.
ದಯವಿಟ್ಟು ರಾಜ್ಯಾಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರು ದಾವಣಗೆರೆ ಜಿಲ್ಲೆಯ ಎಲ್ಲ ಪ್ರಮುಖ ಕಾರ್ಯಕರ್ತರ ಸಭೆ ಕರೆದು ಕಾರ್ಯಕರ್ತರ ಅಭಿಪ್ರಾಯ ಪಡೆದು ಬೇಕಾದರೆ ಚುನಾವಣೆ ಮೂಲಕ ದಾವಣಗೆರೆ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಒತ್ತಾಯ ಮಾಡುತ್ತಿದ್ದಾರೆ.
ಒಂದು ವೇಳೆ ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಆ ವ್ಯಕ್ತಿಗೆ ನೀಡಿದರೆ ಪಕ್ಷದ ಚಟುವಟಿಕೆಯಿಂದ ದೂರವಿರಲು ನಿರ್ಧರಿಸಿದ್ದಾರೆ. ಒಂದು ವೇಳೆ ವಿರೋಧಿಸುತ್ತಿರುವವರನ್ನೇ ಅಧ್ಯಕ್ಷರನ್ನಾಗಿಸಿದರೆ ಮುಂಬರುವ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗುತ್ತದೆ ಇಲ್ಲವೇ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಯಾವ ರೀತಿ ಸರಿಮಾಡುತ್ತಾರೆ, ಇಲ್ಲವೇ ಅಸಮಾಧಾನ ಭುಗಿಲೆದ್ದು ಪಕ್ಷಕ್ಕೆ ಹಿನ್ನೆಡೆಯಾದರೆ ಯಾರು ಹೊಣೆ ಎಂಬ ಮಾತು ಕೇಳಿ ಬರಲಾರಂಭಿಸಿದೆ.
ಲೋಕಸಭೆ ಚುನಾವಣೆ ವಿಷಯಕ್ಕೆ ಬಂದರೆ ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಚಿತ್ರದುರ್ಗದಿಂದ ಬೇರ್ಪಟ್ಟು ದಾವಣಗೆರೆ ಜಿಲ್ಲೆ ಘೋಷಣೆಯಾದ ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಖಾತೆ ತೆರೆಯಲು ಆರಂಭವಾಗಿಲ್ಲ. ಮಲ್ಲಿಕಾರ್ಜುನಪ್ಪ ಹಾಗೂ ಡಾ. ಜಿ. ಎಂ. ಸಿದ್ದೇಶ್ವರ ಗೆದ್ದು ಬಂದಿದ್ದಾರೆ. 2024ರ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಲಾಗುತ್ತಿದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಈಗ ಬಿಜೆಪಿ ರಾಜ್ಯ ನಾಯಕರಿಗೆ ತಲೆಬಿಸಿ ತಂದಿದ್ದು, ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.