SUDDIKSHANA KANNADA NEWS/ DAVANAGERE/ DATE:07-12-2024
ದಾವಣಗೆರೆ: ಕಳ್ಳತನವಾದ 24 ಗಂಟೆಯೊಳಗೆ ವಿದ್ಯಾನಗರ ಪೊಲೀಸರು ಟೊಯೊಟೊ ಫಾರ್ಚುನರ್ ಕಾರು ಪತ್ತೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಡಿ. 6ರಂದು ಬೆಳಿಗ್ಗೆ 6 ಗಂಟೆಗೆ ಹಣ್ಣಿನ ವ್ಯಾಪಾರಿ ಚಂದನ್ ಹೆಚ್. ಎಸ್. ಅವರು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬಾಲಾಜಿ ಬಡಾವಣೆ ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ಇರುವ ತನ್ನ ಸೆಲ್ಲರ್ ಬಳಿಯ ಬಿಲ್ಡಿಂಗ್ ಮುಂಭಾಗ ತನ್ನ KA05ML1728 ನಂಬರ್ ಟೋಯೋಟಾ ಫಾರ್ಚುನರ್ ಕಾರು ನಿಲ್ಲಿಸಿದ್ದರು. ಕಾರಿಗೆ ಹಣ್ಣಿನ ಟ್ರೇಗಳನ್ನು ತುಂಬಲು ತನ್ನ ಅಂಗಡಿ ಕೆಲಸ ಮಾಡುವ ಹುಡುಗನಿಗೆ ಹೇಳಿ ಮನೆಗೆ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಇಬ್ಬರು ಕಳ್ಳರು ಬೈಕ್ ನಲ್ಲಿ ಬಂದು ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪತ್ತೆ ಮಾಡಿಕೊಡಿ ಎಂದು ವಿದ್ಯಾನಗರ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಮನವಿ ಮಾಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ್, ಎಂ. ಮಂಜುನಾಥ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ ಜಿ. ಎನ್., ವಿಜಯ ಹಾಗೂ ಸಿಬ್ಬಂದಿಗಳು ಒಳಗೊಂಡ ತಂಡವು ಆರೋಪಿ ಪತೇಹ್ ಅಹಮದ್ ಅಲಿಯಾಸ್ ಪತ್ತೆ ಪೈಲ್ವಾನ್ (30) ನನ್ನು ಹರಿಹರ ನಗರದಲ್ಲಿ ಬಂಧಿಸಿದ್ದು, ಆರೋಪಿತನಿಂದ ಅಂದಾಜು 10 ಲಕ್ಷ ರೂ ಮೌಲ್ಯದ ಟೋಯೋಟಾ ಫಾರ್ಚುನರ್ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಪತೇಹ್ ಅಹಮದ್ ಅಲಿಯಾಸ್ ಪತ್ತೆ ಪೈಲ್ವಾನ್ ಈತನು ಕಾರನ್ನು ಕದ್ದು ತೆಗೆದುಕೊಂಡು ಹೋಗಿ ಹರಿಹರ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಬಗ್ಗೆ ಚರ್ಚ್ ರಸ್ತೆಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತನ ಹಿನ್ನಲೆ: ಆರೋಪಿತನು ಪತೇಹ್ ಅಹಮದ್ ಅಲಿಯಾಸ್ ಪತ್ತೆ ಪೈಲ್ವಾನ್ ಮೇಲೆ ಈ ಹಿಂದೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 172/23 ಐಪಿಸಿ 307 ರೀತ್ಯಾ ಪ್ರಕರಣ ದಾಖಲಾಗಿತ್ತು. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ಶಂಕರ್ ಜಾಧವ್, ಆನಂದ ಎಂ., ಬೋಜಪ್ಪ, ಚಂದ್ರಪ್ಪ, ಗೋಪಿನಾಥ ನಾಯ್ಕ, ಬಸವರಾಜ್, ಅಮೃತ್ ಕೆ. ಹೆಚ್., ನವೀನ್ ಮಲ್ಲನಗೌಡ, ಮಾರಪ್ಪ ಮತ್ತು ಕೊಟ್ರೇಶ, ಸ್ಮಾರ್ಟ್ ಸಿಟಿ ಕಛೇರಿಯ ಸಿಬ್ಬಂದಿಗಳಾದ ಮಾರುತಿ, ಸೋಮು, ರಾಘವೇಂದ್ರ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.