SUDDIKSHANA KANNADA NEWS/ DAVANAGERE/ DATE:24-03-2025
ಬೆಂಗಳೂರು: ಹನಿಟ್ರ್ಯಾಪ್, ಸಿ. ಟಿ. ರವಿ ಬಂಧನ ಕೇಸ್, 18 ಬಿಜೆಪಿ ಶಾಸಕರ ಸಸ್ಪೆಂಡ್ ಸೇರಿದಂತೆ ಸದನದ ಕಲಾಪಗಳ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬೇಸರಪಟ್ಟುಕೊಂಡಿದ್ದಾರೆ. ಚಿಂತಕರ ಛಾವಡಿ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ ನಲ್ಲಿಯೂ ಇದು ಪದೇ ಪದೇ ನಡೆಯುತ್ತಲೇ ಇರುತ್ತದೆ. ಇತ್ತೀಚಿನ ರಾಜಕಾರಣಿಗಳ ಮಾತು, ಗಲಾಟೆ, ದೊಂಬಿ ಎಲ್ಲವೂ ಹಿರಿಯ ರಾಜಕಾರಣಿಯ ಮನಸ್ಸಿಗೆ ಬೇಸರ ತರಿಸಿರುವುದಂತೂ ಸತ್ಯ.
ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಮಾತ್ರವಲ್ಲ, ಅವರ ರಾಜೀನಾಮೆ ಪತ್ರ ವೈರಲ್ ಕೂಡ ಆಗಿತ್ತು. ಈ ರಾಜೀನಾಮೆ ಪತ್ರದ ಪ್ರಕಾರ ಈಗಾಗಲೇ ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಅವರಿಗೆ ಬಸವರಾಜ ಹೊರಟ್ಟಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ವೈಯಕ್ತಿಕ ಕಾರಣಗಳಿಂದ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದು ಅದರಲ್ಲಿತ್ತು.
ಮಾರ್ಚ್ 31ರಂದು ರಾಜೀನಾಮೆ ಸ್ವೀಕರಿಸಿ, ಏಪ್ರಿಲ್ 1ರಿಂದ ಅನ್ವಯವಾಗುವಂತೆ ನನ್ನನ್ನ ಸಭಾಪತಿ ಸ್ಥಾನದಿಂದ ಮುಕ್ತಿಗೊಳಿಸಬೇಕು ಅಂತ ಹೊರಟ್ಟಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದ್ರೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ ಎಂಬ ವಿಚಾರದ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಅಸಲಿಗೆ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ರಾಜೀನಾಮೆ ನೀಡಿಲ್ಲ ಎನ್ನುವುದು ಖಚಿತವಾಗಿದೆ.
ಮೇಲ್ಮನೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತಂತೆ ಬಸವರಾಜ ಹೊರಟ್ಟಿ ಮಾತನಾಡಿದ್ದಾರೆ. ರಾಜೀನಾಮೆ ಪತ್ರ ಸಿದ್ಧಪಡಿಸಿರೋದು ಸತ್ಯ, ಆದರೆ ಸಹಿ ಇಲ್ಲದ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಹಿ ಮಾಡಿರೋ ರಾಜೀನಾಮೆ ಪತ್ರ ತಿಜೋರಿಯಲ್ಲಿ ಭದ್ರವಾಗಿದೆ ಅಂತ ಹೇಳಿದ್ದಾರೆ. ಮುಂದಿನ ದಿನದಲ್ಲಿ ರಾಜೀನಾಮೆ ನೀಡೋ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನಾನು ರಾಜೀನಾಮೆ ನೀಡಬೇಕೆಂದು ನಿರ್ಧರಿಸಿದ್ದು, ಕಚೇರಿಯಿಂದ ಅನ್ ಸೈನಡ್ ಲೆಟರ್ ಹೋಗಿರುವುದು ನನಗೂ ಆಶ್ಚರ್ಯ ತಂದಿದೆ ಎಂದು ತಿಳಿಸಿದ್ದಾರೆ.