SUDDIKSHANA KANNADA NEWS/ DAVANAGERE/ DATE:29-10-2023
ದಾವಣಗೆರೆ: ಹರಿಹರ ತಾಲೂಕಿನ ಉಕ್ಕಡಗಾತ್ರಿ ಸಮೀಪದ ಕಡರನಾಯ್ಯನಹಳ್ಳಿ ಗ್ರಾಮದಲ್ಲಿ 120ಕ್ಕಿಂತ ಹೆಚ್ಚು ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಮೂರುವರೆ ಎಕರೆಯಲ್ಲಿ ನಾಗಲಿಂಗಪ್ಪ ಪೂಜಾರ್ ಮತ್ತು ವಸಂತಪ್ಪ ಪೂಜಾರ್ ಅವರಿಗೆ ಸೇರಿದ ಅಡಿಕೆ ತೋಟ ಇದಾಗಿತ್ತು. ಇನ್ನು ಸ್ವಲ್ಪ ದಿನಗಳಲ್ಲಿ ಅಡಿಕೆ ಫಲವೂ ಬರುತಿತ್ತು. ಆದ್ರೆ, ದುಷ್ಕರ್ಮಿಗಳು ರಾತ್ರೋರಾತ್ರಿ ಅಡಿಕೆ ಮರಗಳನ್ನು ಕಡಿದು ಹಾಕಿ ಹೋಗಿದ್ದಾರೆ.
ಕಳೆದ ಆರೇಳು ವರ್ಷಗಳಿಂದಲೂ ಅಡಿಕೆ ಮರಗಳನ್ನು ಬೆಳೆಸುತ್ತಿದ್ದರು. ಮಕ್ಕಳಂತೆ ಪೋಷಿಸಿ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ಮರಗಳನ್ನು ಬೆಳೆಸಿದ್ದ ರೈತರ ಗೋಳಾಟ ಹೇಳತೀರದ್ದಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತರು ಬೆಳೆದಿದ್ದ ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ರೀತಿ ನೋಡಿ ಕಣ್ಣೀರು ಸುರಿಸುವಂತಾಗಿದೆ.
ಈ ಬಾರಿ ಬರಗಾಲ ಬಂದಿದ್ದು, ರೈತರು ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂಥ ವೇಳೆಯಲ್ಲಿ ಅಡಿಕೆ ಮರಗಳನ್ನು ಕಡಿದು ಹಾಕಿರುವ ದುಷ್ಕರ್ಮಿಗಳನ್ನು ಸುಮ್ಮನೆ ಬಿಡಬಾರದು. ಆದಷ್ಟು ಬೇಗ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಲೇಬೇಕು ಎಂದು ಕರಿಬಸವೇಶ್ವರ ದೇವಸ್ಥಾನದ ಟ್ರಸ್ಟ್ ನ ಕಾರ್ಯದರ್ಶಿ ಎಸ್. ಸುರೇಶ್ ಅವರು ಒತ್ತಾಯಿಸಿದ್ದಾರೆ. ಮಲೇಬೆನ್ನೂರು ಸಬ್ ಇನ್ ಸ್ಪೆಕ್ಟರ್ ಪ್ರಭು ಡಿ. ಕೆಳಗಿನಮನಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.