ನವದೆಹಲಿ:ಕಳೆದ 28 ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ, ಹರಿಯಾಣ ಪೊಲೀಸ್ ಸಿಬ್ಬಂದಿಯ ಭೀಕರ ಕೊಲೆ ಹಾಗೂ ಹಲವು ಕೊಲೆ ಯತ್ನ ಪ್ರಕರಣಗಳ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಕೊನೆಗೂ ಬಂಧಿಸಿದೆ. ಬಂಧಿತ ಆರೋಪಿಯನ್ನು 53 ವರ್ಷದ ರಾಜಿಂದರ್ ಬೈರಾಗಿ ಅಲಿಯಾಸ್ ‘ಡಾ. ಝಟ್ಕಾ’ ಎಂದು ಗುರುತಿಸಲಾಗಿದೆ.
ಕೈಕೋಳದೊಂದಿಗೇ ಪರಾರಿಯಾಗಿದ್ದ ಆರೋಪಿ:
1998ರಲ್ಲಿ ಹರಿಯಾಣದ ಸೋನಿಪತ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗಲಾಟೆ ನಡೆಸಿ, ಹರಿಯಾಣ ಪೊಲೀಸ್ ಸಿಬ್ಬಂದಿ ಜೈ ಭಗವಾನ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದ ಆರೋಪ ರಾಜಿಂದರ್ ಮೇಲಿತ್ತು. ಈ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತಾದರೂ, 1999ರಲ್ಲಿ ಉತ್ತರ ಪ್ರದೇಶ ಪೊಲೀಸರು ಆತನನ್ನು ಕೋರ್ಟ್‌ಗೆ ಕರೆದೊಯ್ಯುತ್ತಿದ್ದಾಗ ಕೈಕೋಳ ಧರಿಸಿದ ಸ್ಥಿತಿಯಲ್ಲೇ ಪೊಲೀಸರ ವಶದಿಂದ ಪರಾರಿಯಾಗಿದ್ದ.
‘ಡಾ. ಝಟ್ಕಾ’ ಆಗಿ ಹೊಸ ಜೀವನ:
ಪೊಲೀಸರಿಂದ ತಲೆಮರೆಸಿಕೊಂಡಿದ್ದ ರಾಜಿಂದರ್, ನಂತರ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ಮುಂಗಾವಲಿಗೆ ತೆರಳಿ ರಾಜೇಂದರ್ ಸಿಂಗ್ ಯಾದವ್ ಎಂಬ ನಕಲಿ ಹೆಸರಿನಲ್ಲಿ ನೆಲೆಸಿದ್ದ. ಅಲ್ಲಿ ಸ್ಥಳೀಯವಾಗಿ ನಕಲಿ ದಾಖಲೆಗಳನ್ನು (ಆಧಾರ್, ಪಾನ್ ಕಾರ್ಡ್, ಮತದಾನದ ಗುರುತಿನ ಚೀಟಿ) ಪಡೆದುಕೊಂಡು, ನಕಲಿ ವೈದ್ಯನಾಗಿ ‘ಡಾ. ಝಟ್ಕಾ’ ಎಂದೇ ಪ್ರಸಿದ್ಧಿಯಾಗಿದ್ದ. ಅಲ್ಲದೆ ಆಸ್ತಿ ವ್ಯವಹಾರದಲ್ಲೂ ತೊಡಗಿಸಿಕೊಂಡು, ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದ.
ಕ್ರೈಂ ಬ್ರಾಂಚ್ ರೋಚಕ ಕಾರ್ಯಾಚರಣೆ:
ದೆಹಲಿಯ ಜನಕಪುರಿಯಲ್ಲಿ 1997ರಲ್ಲಿ ನಡೆದಿದ್ದ ಹಳೆಯ ಕೊಲೆ ಯತ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ಕ್ರೈಂ ಬ್ರಾಂಚ್ ತಂಡಕ್ಕೆ ಈತನ ಡಿಜಿಟಲ್ ಹೆಜ್ಜೆಗುರುತು ಹಾಗೂ ತಾಂತ್ರಿಕ ಕಣ್ಗಾವಲಿನ ಮೂಲಕ ಮುಂಗಾವಲಿಯಲ್ಲಿರುವ ಸುಳಿವು ಸಿಕ್ಕಿತು. ತಕ್ಷಣವೇ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಸಂಜಯ್ ಕೌಶಿಕ್ ನೇತೃತ್ವದ ವಿಶೇಷ ತಂಡ, ರಾಜಿಂದರ್‌ನನ್ನು ಬಂಧಿಸಿ ದೆಹಲಿಗೆ ಕರೆತಂದಿದೆ.





Leave a comment