Home ದಾವಣಗೆರೆ ಸಾಂಸ್ಥಿಕ ಉತ್ಕೃಷ್ಟತೆಗೆ ನಾವಿನ್ಯತೆ ಮತ್ತು ಪರಿಣಾಮಕಾರಿ ಸಂಶೋಧನೆ ಅಗತ್ಯ: ದಾವಣಗೆರೆ ವಿವಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ. ನವಕಾಂತ ಭಟ್ ಸಲಹೆ
ದಾವಣಗೆರೆನವದೆಹಲಿಬೆಂಗಳೂರು

ಸಾಂಸ್ಥಿಕ ಉತ್ಕೃಷ್ಟತೆಗೆ ನಾವಿನ್ಯತೆ ಮತ್ತು ಪರಿಣಾಮಕಾರಿ ಸಂಶೋಧನೆ ಅಗತ್ಯ: ದಾವಣಗೆರೆ ವಿವಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ. ನವಕಾಂತ ಭಟ್ ಸಲಹೆ

Share
ದಾವಣಗೆರೆ
Share

ದಾವಣಗೆರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಹೊತ್ತು ಕಾರ್ಯ ನಿರ್ವಹಿಸುತ್ತಿರುವ ದಾವಣಗೆರೆ ವಿಶ್ವವಿದ್ಯಾನಿಲಯವು ಪದವಿ ನೀಡುವ ಜೊತೆಗೆ ದೇಶದ ಪ್ರಗತಿಗೆ ಕೊಡುಗೆ ನೀಡುವ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾಗುವ ನಾವಿನ್ಯತೆಯ ಕೇಂದ್ರವಾಗಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಬಹುಶಿಸ್ತೀಯ ವಿಜ್ಞಾನಗಳ ವಿಭಾಗದ ಡೀನ್ ಹಾಗೂ ನ್ಯಾನೊ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ. ನವಕಾಂತ ಭಟ್ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವವಿದ್ಯಾನಿಲಯದ 17ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಸಾಂಸ್ಥಿಕ ಉತ್ಕೃಷ್ಟತೆಯತ್ತ ಹೆಜ್ಜೆ: ಮೂಲಸೌಕರ್ಯ, ನಾವಿನ್ಯತೆ ಮತ್ತು ಪರಿಣಾಮ” ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅನುಸರಿಸಬೇಕಾದ ಪ್ರಮುಖ ಸಿದ್ಧಾಂತ, ತತ್ವಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.

ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯ ಸಾಧನೆಗೆ ಬಲವಾದ ಕನಸು ಮತ್ತು ದೃಷ್ಟಿಕೋನ ಅಗತ್ಯ. ವಿಶ್ವವಿದ್ಯಾನಿಲಯವು ಸಣ್ಣ ಗುರಿಗಳಿಗೆ ತೃಪ್ತಿಪಡದೆ ದೊಡ್ಡ ಕನಸುಗಳನ್ನು ಕಾಣಬೇಕು. ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ದೊಡ್ಡ ಕನಸುಗಳಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.

ಉತ್ತಮ ಸಂಶೋಧನೆ ಮತ್ತು ಆವಿಷ್ಕಾರಗಳು ಹೊರಹೊಮ್ಮಲು ಸಂಸ್ಥೆಗಳಲ್ಲಿ ಸಕಾರಾತ್ಮಕ ಪರಿಸರ ವ್ಯವಸ್ಥೆ ಅತ್ಯಗತ್ಯ. ಜ್ಞಾನ ಹಂಚಿಕೆ, ಮುಕ್ತ ಆಲೋಚನೆ ಮತ್ತು ಉನ್ನತ ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡ ಸಂಸ್ಕೃತಿಯನ್ನು ವಿಶ್ವವಿದ್ಯಾನಿಲಯವು ಬೆಳೆಸಿಕೊಳ್ಳಬೇಕು. ದಾವಣಗೆರೆ ವಿಶ್ವವಿದ್ಯಾನಿಲಯವು ಅಂತ ಉತ್ತಮ ಪರಿಸರ, ಶೈಕ್ಷಣಿಕ ವಾತಾವರಣವನ್ನು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಪ್ರೇರೇಪಿಸಲು ಆದ್ಯತೆ ನೀಡಬೇಕು ಎಂದು ಪ್ರೊ.ಭಟ್ ನುಡಿದರು.

ಒಬ್ಬ ವ್ಯಕ್ತಿಯಿಂದ ದೊಡ್ಡ ಬದಲಾವಣೆ ಸಾಧಿಸಲು ಸಾಧ್ಯವಿಲ್ಲ. ವೈಯಕ್ತಿಕ ಸಾಮರ್ಥ್ಯಗಳ ಜೊತೆಗೆ ಪರಿಣಾಮಕಾರಿ ತಂಡ ರಚನೆ ಸಂಸ್ಥೆಯ ಪ್ರಗತಿಗೆ ಮುನ್ನೆಲೆ ಒದಗಿಸುತ್ತದೆ. ವಿಭಿನ್ನ ಆಲೋಚನೆಗಳುಳ್ಳ ಜ್ಞಾನಿಗಳನ್ನು ಒಂದೆಡೆ ತಂದು, ಸಹಯೋಗದೊಂದಿಗೆ ಕೆಲಸ ಮಾಡುವ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಸಾಂಸ್ಥಿಕ ಉತ್ಕೃಷ್ಟತೆ ಸಾಧ್ಯವಾಗುತ್ತದೆ ಎಂದರು.

ವಿಜ್ಞಾನ ಮತ್ತು ಸಂಶೋಧನೆಗಳು ಪ್ರಯೋಗಾಲಯ ಅಥವಾ ಪುಸ್ತಕಗಳಿಗೆ ಸೀಮಿತವಾಗಬಾರದು. ಅವು ಸಮಾಜದ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಿರಬೇಕು. ವಿಜ್ಞಾನದ ತಂತ್ರಜ್ಞಾನಗಳು ರೈತರು, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯAತಹ ಸಾಮಾಜಿಕ ರಂಗಗಳಿಗೆ ತಲುಪಿದಾಗ ಮಾತ್ರ ಸಂಶೋಧನೆಗೆ ನೈಜ ಮೌಲ್ಯ ಬರುತ್ತದೆ ಎಂದು ಪ್ರೊ. ನವಕಾಂತ್ ಭಟ್ ಪ್ರತಿಪಾದಿಸಿದರು.

ಪ್ರಸ್ತುತ ಯುಗದಲ್ಲಿ ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿ ಸಂಶೋಧನೆ ನಡೆಸುವುದು ಕಷ್ಟ. ತಂತ್ರಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಸಮಾಜ ವಿಜ್ಞಾನಗಳ ಸಮ್ಮಿಲನದ ಬಹುಶಿಸ್ತೀಯ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಾಗಿದೆ. ಇಂತಹ ಬಹುಶಿಸ್ತೀಯ ಒಡಂಬಡಿಕೆಗಳನ್ನು ಮುನ್ನಡೆಸಲು ಪ್ರಗತಿಪರ ನಾಯಕತ್ವದ ಅಗತ್ಯವಿದೆ. ಆ ಕೆಲಸವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸವಿದೆ ಎಂದು ಅವರು ಒತ್ತಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ಅವರು ಮುಂದಿನ ನಾಲ್ಕು ವರ್ಷಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯವನ್ನು ದೇಶದ ಮಾದರಿ ವಿಶ್ವವಿದ್ಯಾನಿಲಯವನ್ನಾಗಿ ಬೆಳೆಸುವ ಗುರಿಯತ್ತ ಹೆಜ್ಜೆ ಇಡಲಾಗಿದೆ. ಬದಲಾವಣೆಯತ್ತ ದೃಷ್ಟಿಕೋನ ಸ್ಪಷ್ಟವಾಗಿದೆ. ಇಡೀ ವಿಶ್ವವಿದ್ಯಾನಿಲಯದ ಎಲ್ಲರೂ ಒಗ್ಗೂಡಿ ಕೆಲಸ ಮಾಡುವ ಮೂಲಕ ಗುರಿ ಸಾಧಿಸುವ ವಿಶ್ವಾಸವಿದೆ ಎಂದರು.

ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಹಲವಾರು ಜನರ ಪರಿಶ್ರಮ, ಕೈಗಳು ಕೂಡಿವೆ. ದಾವಣಗೆರೆಯ ಗಣ್ಯರು ದಾನ ನೀಡಿ ವಿಶ್ವವಿದ್ಯಾನಿಲಯವನ್ನು ಕಟ್ಟಿದ್ದಾರೆ. ಶಿಕ್ಷಣ ತಜ್ಞರು, ಜನಪ್ರತಿನಿಧಿಗಳು, ಮಠಾಧೀಶರು, ಹೋರಾಟಗಾರರ ಆಶಯವನ್ನು ಎತ್ತಿ ಹಿಡಿಯುವ ಕೆಲಸವನ್ನು ವಿಶ್ವವಿದ್ಯಾನಿಲಯ ಮಾಡಲಿದೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರೊ.ನವಕಾಂತ್ ಭಟ್ ಅವರನ್ನು ನಗರದ ಗಣ್ಯರಾದ ದಾವಿವಿ ಸಿಂಡಿಕೇಟ್ ಮಾಜಿ ಸದಸ್ಯ ಜಯಪ್ರಕಾಶ ಕೊಂಡಜ್ಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಾಮದೇವಪ್ಪ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎನ್.ಕೆ.ಗೌಡ, ಪ್ರೊ. ಗೋವಿಂದಪ್ಪ, ಬಿಐಇಟಿ ಕಾಲೇಜು ನಿರ್ದೇಶಕ, ವೈ. ವೃಷಭೇಂದ್ರಪ್ಪ, ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ, ಯುಬಿಡಿಪಿ ಕಾಲೇಜಿನ ಪ್ರೊ.ಎಸ್.ಬಸವರಾಜಪ್ಪ, ಶಿಕ್ಷಣ ತಜ್ಞ ನಜೀರ್, ಪಿಎಂಇ ನಿರ್ದೇಶಕ ಡಿ.ಜಿ. ಪ್ರಕಾಶ, ಡೀನರುಗಳಾದ ಪ್ರೊ.ಶ್ರೀನಿವಾಸ, ಪ್ರೊ.ವೆಂಕಟೇಶ, ಪ್ರೊ.ಲೋಕೇಶ, ಪ್ರೊ. ಗೋವಿಂದಪ್ಪ ಸನ್ಮಾನಿಸಿದರು.ಪ್ರೊ. ಸೀರಪ್ಪ ಸ್ವಾಗತಿಸಿದರು. ಪ್ರೊ.ಎಸ್.ಶಿಶುಪಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಿವಲಿಂಗಪ್ಪ ವಂದಿಸಿದರು. ಡಾ. ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Share

Leave a comment

Leave a Reply

Your email address will not be published. Required fields are marked *