ದಾವಣಗೆರೆ: ಭಾರತೀಯ ಚುನಾವಣಾ ಆಯೋಗದ ಸ್ವಾಯತ್ತತೆ ಹಾಗೂ ಮತದಾರರ ಪಟ್ಟಿಯ ಆಂತರಿಕ ಪರಿಷ್ಕರಣೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸೂಕ್ತ ತನಿಖೆಯಾಗಬೇಕು. ಕೂಡಲೇ ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಇಸಿ ಕೇಂದ್ರ ಆಡಳಿತಾರೂಢ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಚುನಾವಣಾ ಆಯೋಗದ ನಿರ್ಧಾರಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರನ್ನು ಹೊರಗಿಟ್ಟು
ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಪ್ರತಿಯೊಂದು ಪ್ರಮುಖ ಬದಲಾವಣೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ವ್ಯಕ್ತಿಗಳಿಗೆ ಮುಂಚಿತವಾಗಿಯೇ ನೋಟಿಸ್ ನೀಡಬೇಕು ಮತ್ತು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು. ಸುಲಭವಾಗಿ ಪರಿಶೀಲಿಸಬಹುದಾದ ಸ್ವರೂಪದಲ್ಲಿ ರಾಜಕೀಯ ಪಕ್ಷಗಳಿಗೆ ಸಂಪೂರ್ಣ ಮತದಾರರ ದತ್ತಾಂಶ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಕಂಡುಬರುವ ಗಂಭೀರ ಅಕ್ರಮಗಳ ವಿರುದ್ಧ ಸಮಯಬದ್ಧ ಹಾಗೂ ಸ್ವತಂತ್ರ ತನಿಖೆ ನಡೆಯಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಂಸತ್ತಿನಿಂದ ಹಿಡಿದು ರಸ್ತೆಗಳವರೆಗೆ ಈ ವಿಚಾರದ ಕುರಿತು ಹೋರಾಟ ತೀವ್ರಗೊಳಿಸಲು ಎಐಸಿಸಿ ನಿರ್ಧರಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಡೆಸಿರುವ ಕುತಂತ್ರ ಬಯಲಿಗೆಳೆಯಲು ನಾವೆಲ್ಲರೂ ಹೋರಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯಿಸಿದ್ದಾರೆ.





Leave a comment