ದಾವಣಗೆರೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಂ. ಕಿಸಾನ್) ಯೋಜನೆಯಡಿ ಅರ್ಹ ರೈತರು ಮುಂದಿನ ಕಂತಿನ ಆರ್ಥಿಕ ನೆರವು ಪಡೆಯಲು ಬಯೋಮೆಟ್ರಿಕ್ ಅಥವಾ ಮುಖ (ಫೇಸ್) ದೃಢೀಕರಣ ಆಧಾರಿತ ಇ-ಕೆವೈಸಿ (e-KYC) ಹಾಗೂ ಸೆಂಟ್ರಲ್ ಎಫ್ಐಡಿ (Central FID) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಕೆ. ಜಿಯಾವುಲ್ಲಾ ತಿಳಿಸಿದ್ದಾರೆ.
ಪಿ.ಎಂ. ಕಿಸಾನ್ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ತಡೆಯಲು, ಮೃತರನ್ನು ಪಟ್ಟಿಯಿಂದ ಕೈಬಿಟ್ಟು, ಅರ್ಹ ರೈತರಿಗೆ ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರತಿಯೊಬ್ಬ ರೈತರಿಗೆ ಆರ್ಥಿಕ ನೆರವಿನ ಭಾಗವಾಗಿ ವಾರ್ಷಿಕ ರೂ. 6,000 ಹಣವನ್ನು ಮೂರು ಕಂತುಗಳಲ್ಲಿ (ಪ್ರತಿ 4 ತಿಂಗಳಿಗೊಮ್ಮೆ ರೂ. 2,000 ರಂತೆ) ನೇರ ನಗದು ವರ್ಗಾವಣೆ (DBT) ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 1.29 ಲಕ್ಷ ರೈತರಲ್ಲಿ 1.09 ಲಕ್ಷ ರೈತರ ಇ-ಕೆವೈಸಿ ಬಾಕಿ ಇರುತ್ತದೆ. ಹಾಗೆಯೇ 16,240 ಫಲಾನುಭವಿಗಳ ಸೆಂಟ್ರಲ್ ಎಫ್ಐಡಿ (Central FID) ಮಾಡಿಸುವುದು ಬಾಕಿ ಇದೆ.
ಜಿಲ್ಲೆಯ ತಾಲ್ಲೂಕುವಾರು ಸೆಂಟ್ರಲ್ ಎಫ್ಐಡಿ ಬಾಕಿ ಇರುವ ರೈತರ ವಿವರಗಳ ಪ್ರಕಾರ, ಚನ್ನಗಿರಿ ತಾಲ್ಲೂಕಿನಲ್ಲಿ 4,873, ದಾವಣಗೆರೆ ತಾಲ್ಲೂಕಿನಲ್ಲಿ 4,066, ಹರಿಹರ ತಾಲ್ಲೂಕಿನಲ್ಲಿ 2,335, ಹೊನ್ನಾಳಿ ತಾಲ್ಲೂಕಿನಲ್ಲಿ 2,733, ಜಗಳೂರು ತಾಲ್ಲೂಕಿನಲ್ಲಿ 2,181 ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 52 ರೈತರು ಸೆಂಟ್ರಲ್ ಎಫ್ಐಡಿ ಮಾಡಿಸುವುದು ಬಾಕಿ ಇರುತ್ತದೆ.
ಇ–ಕೆವೈಸಿ ಮತ್ತು ಸೆಂಟ್ರಲ್ ಎಫ್ಐಡಿ ಪೂರ್ಣಗೊಳಿಸುವ ವಿಧಾನಗಳು:
ಬಯೋಮೆಟ್ರಿಕ್ ಆಧಾರಿತ ಇ–ಕೆವೈಸಿ: ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಬಯೋಮೆಟ್ರಿಕ್ ನೀಡುವುದರ ಮೂಲಕ ಇ-ಕೆವೈಸಿ ಮಾಡಿಸಬಹುದು. ಮುಖ (ಫೇಸ್) ದೃಢೀಕರಣ ಆಧಾರಿತ ಇ–ಕೆವೈಸಿ: ‘ಪಿಎಂ ಕಿಸಾನ್’ (PM Kisan) ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು, ಸ್ಮಾರ್ಟ್ಫೋನ್ ಮೂಲಕ ಮುಖ ದೃಢೀಕರಣ (Face Authentication) ಮಾಡಿ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು. ಸೆಂಟ್ರಲ್ ಎಫ್ಐಡಿ ಪೂರ್ಣಗೊಳಿಸಲು: ಆಧಾರ್ ಕಾರ್ಡ್, ಪಹಣಿ ಹಾಗೂ ತಮ್ಮ ಮೊಬೈಲ್ ನೊಂದಿಗೆ ಹತ್ತಿರದ ಗ್ರಾಮ ಒನ್ / ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಬಹುದು.
ಜಿಲ್ಲೆಯ ಎಲ್ಲಾ ಫಲಾನುಭವಿ ರೈತರು ತಕ್ಷಣವೇ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಇ-ಕೆವೈಸಿ ಮತ್ತು ಸೆಂಟ್ರಲ್ ಎಫ್ಐಡಿ ಪೂರ್ಣಗೊಳಿಸಿ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ ಅವರು ತಿಳಿಸಿದ್ದಾರೆ.





Leave a comment