SUDDIKSHANA KANNADA NEWS/ DAVANAGERE/ DATE:18-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.
ಶಿವಮೊಗ್ಗದ ಫ್ರೀಡಂಪಾರ್ಕ್ ನ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಕ್ಷಿಣ ಕನ್ನಡ, ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ
ಬಿ. ವೈ. ರಾಘವೇಂದ್ರ, ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಕೋಟ ಶ್ರೀನಿವಾಸ್ ಪೂಜಾರಿ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬಹುಮತದಿಂದ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಭಾಷಣ ಮಾಡಿದ ಬಳಿಕ ಹೊರಟ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರನ್ನೂ ಮಾತನಾಡಿಸಿದರು. ಈ ವೇಳೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರತ್ತ ಕೈ ಮುಗಿದ ಪ್ರಧಾನಿ ಮೋದಿ ಅವರು ನಗುತ್ತಲೇ ಮಾತನಾಡಿಸಿದರು. ಈ ವೇಳೆ ಹಸ್ತಲಾಘವ ನೀಡಿದರು. ಮಾತ್ರವಲ್ಲ, ಮೋದಿ ಅವರ ಕೈಗೆ ಮುತ್ತಿಟ್ಟು ಸಿದ್ದೇಶ್ವರ ನಮಸ್ಕರಿಸಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮಾತನಾಡಿ, ಭಾರತದ ಆಶಾಕಿರಣ, ಯುವಕರ ಕಣ್ಮಣಿ, ವಿಶ್ವನಾಯಕ ನರೇಂದ್ರ ಮೋದಿ. ಅವರನ್ನು ನೋಡಲು, ಮಾತು ಕೇಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಂದಿದ್ದೀರಾ. ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಕರ್ನಾಟಕದ ಮೇಲೆ ಮೋದಿ ಅವರಿಗೆ ತುಂಬಾನೇ ನಂಬಿಕೆ ತೋರಿಸುತ್ತದೆ. ಕಲ್ಬುರ್ಗಿಗೆ ಬಂದು ಲಕ್ಷಾಂತರ ಜನರು ಸೇರಿದ್ದ ಸಭೆಯಲ್ಲಿ ಮಾತನಾಡಿ ಹೋಗಿದ್ದರು ಎಂದು ಹೇಳಿದರು.
ಕೇಂದ್ರ ಸರ್ಕಾರ ಚುನಾವಣೆಗೆ ಮಾತ್ರ ಕೆಲಸ ಮಾಡಲ್ಲ. ಗಡಿಯನ್ನು ಸುರಕ್ಷತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸುತ್ತಿದೆ. ರೈತರ ಮೊಗದಲ್ಲಿ ಮಂದಹಾಸ. ಪಿಎಂ ಕಿಸಾನ್ ಅಡಿ ಕೇಂದ್ರ ಸರ್ಕಾರ ಆರು ಸಾವಿರ ರೂ. ನೀಡಿದರೆ, ನಾಲ್ಕು ಸಾವಿರ ರೂ. ನಾನು ಸಿಎಂ ಆಗಿದ್ದಾಗ ನೀಡುತ್ತಿದ್ದೆ. ಈಗಿನ ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಮೋದಿ ನೆರವೇರಿಸಿದ್ದಾರೆ. ಕೋಮುಸಂಘರ್ಷಕ್ಕೆ ಆಸ್ಪದ ನೀಡದಂತೆ ರಾಮಮಂದಿರ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ವಿಶ್ವದ ಅನೇಕ ರಾಷ್ಚ್ರಗಳು ಕೋವಿಡ್ ನಂತರ ಆರ್ಥಿಕ ಹಿಂಜರಿತದಿಂದ ತತ್ತರಿಸಿವೆ. ದಿಟ್ಟ ಹಾಗೂ ದೂರದೃಷ್ಟಿತ್ವದ ಪರಿಣಾಮ ವಿಶ್ವದ ಐದನೇ ಬಲಿಷ್ಠ ರಾಷ್ಟ್ರವಾಗಿ ಭಾರತ ಮುಂದಿದೆ. ಬರುವ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಬರಲಿದೆ. ಒಂದೇ ಒಂದು ದಿನ ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಇಂದು ಶಿವಮೊಗ್ಗಕ್ಕೆ ಬಂದಿದ್ದಾರೆ ಎಂದು ಕೊಂಡಾಡಿದರು.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಬರುತ್ತಾರೆ. ನನಗೆ ಫೋನ್ ಮಾಡಿದ್ದರು. ಬೆಳಿಗ್ಗೆಯೂ ಮಾತನಾಡಿದೆ. 28 ಕ್ಷೇತ್ರಗಳಲ್ಲಿ ಗೆಲ್ಲೋಣ ಎಂದಿದ್ದಾರೆ. ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.
28ಕ್ಕೆ 28 ಕ್ಷೇತ್ರಗಳಲ್ಲಿ ಗೆದ್ದು ದೆಹಲಿಗೆ ಕರೆದುಕೊಂಡು ಬರುತ್ತೇನೆ ಎಂಬ ಭರವಸೆಯನ್ನು ಮೋದಿ ಅವರಿಗೆ ನೀಡಿದ್ದೇನೆ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದೇನೆ. ಇಂದಿನಿಂದ ಮನೆ ಸೇರದೇ ಕ್ಷೇತ್ರದಲ್ಲಿ ಓಡಾಡಿದರೆ ಮೋದಿ ಅವರು ಹತ್ತು ವರ್ಷ ಅಭಿವೃದ್ಧಿ ಮಾಡಿದ್ದಾರೆ. ಯಾರೇ ಅಭ್ಯರ್ಥಿ ಇರಲಿ, ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಸದ ಸಿದ್ದೇಶ್ವರ, ಬಿ. ವೈ. ರಾಘವೇಂದ್ರ, ಬಿ. ವೈ. ವಿಜಯೇಂದ್ರ, ಕೋಟ ಶ್ರೀನಿವಾಸ್ ಪೂಜಾರಿ, ಸಿ. ಟಿ. ರವಿ, ಆರಗ ಜ್ಞಾನೇಂದ್ರ, ಚನ್ನಬಸಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.