ದಾವಣಗೆರೆ: ಅಂಚೆ ಇಲಾಖೆಯು ತನ್ನ ವಿಮಾ ತಂತ್ರಾಂಶವನ್ನು ಅತ್ಯಾಧುನಿಕ ‘ಇನ್ಶೂರೆನ್ಸ್ ಮ್ಯಾನೇಜ್ಮೆಂಟ್ ಸೊಲ್ಯೂಷನ್’ (IMS) ತಂತ್ರಾಂಶಕ್ಕೆ ಮೇಲ್ದರ್ಜೆಗೇರಿಸುತ್ತಿರುವ ಹಿನ್ನೆಲೆಯಲ್ಲಿ, ದಾವಣಗೆರೆ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಪಿಎಲ್ಐ (PLI) ಮತ್ತು ಆರ್ಪಿಎಲ್ಐ (RPLI) ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ನವೆಂಬರ್ 16 ರಿಂದ 24 ರವರೆಗೆ ಕೌಂಟರ್ ಹಾಗೂ ಆನ್ಲೈನ್ ಮೂಲಕ ನಡೆಯುವ ಎಲ್ಲಾ ಪಿಎಲ್ಐ ಮತ್ತು ಆರ್ಪಿಎಲ್ಐ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಾಲಿಸಿದಾರರು ಯಾವುದೇ ತೊಂದರೆಗೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಪಾಲಿಸಿದಾರರು ತಮ್ಮ ಪ್ರೀಮಿಯಂ ಪಾವತಿಸಲು ಮತ್ತು ಹೊಸ ಪ್ರಸ್ತಾವನೆಗಳು ಅಥವಾ ಸೇವಾ ವಿನಂತಿಗಳನ್ನು ಸಲ್ಲಿಸಲು ನವೆಂಬರ್ 14 ಅಥವಾ ಅದಕ್ಕಿಂತ ಮುಂಚಿತವಾಗಿ ತಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಪೂರ್ಣಗೊಳಿಸಿಕೊಳ್ಳಬಹುದಾಗಿದೆ. ನವೆಂಬರ್ 25 ರಿಂದ ಹೊಸ IMS ತಂತ್ರಾಂಶದ ಮೂಲಕ ಎಲ್ಲಾ ಅಂಚೆ ಜೀವ ವಿಮಾ ಸೇವೆಗಳು ಎಂದಿನಂತೆ ಮರುಪ್ರಾರಂಭಗೊಳ್ಳಲಿವೆ.
ಸ್ಥಗಿತಗೊಳ್ಳುವ ಅವಧಿ: ನವೆಂಬರ್ 16 ರಿಂದ 24 ರವರೆಗೆ ಕೌಂಟರ್ ಹಾಗೂ ಆನ್ಲೈನ್ ವಹಿವಾಟುಗಳು ಬಂದ್.
ಕೊನೆಯ ದಿನಾಂಕ: ಪಾಲಿಸಿದಾರರು ನವೆಂಬರ್ 14 ರೊಳಗೆ ಪ್ರೀಮಿಯಂ ಪಾವತಿಸಲು ಹಾಗೂ ಸೇವಾ ವಿನಂತಿಗಳನ್ನು ಸಲ್ಲಿಸಲು ಅವಕಾಶ.
ಮರುಪ್ರಾರಂಭ ದಿನಾಂಕ: ನವೆಂಬರ್ 25 ರಿಂದ ಅತ್ಯಾಧುನಿಕ ‘IMS’ ತಂತ್ರಾಂಶದ ಮೂಲಕ ವಿಮಾ ಸೇವೆಗಳು ಪುನಃ ಆರಂಭ.
ದಾವಣಗೆರೆ ವಿಭಾಗದ ಎಲ್ಲಾ ಪಿಎಲ್ಐ ಮತ್ತು ಆರ್ಪಿಎಲ್ಐ ಪಾಲಿಸಿದಾರರು ಈ ತಾಂತ್ರಿಕ ಬದಲಾವಣೆಯ ಸಮಯದಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ದಾವಣಗೆರೆ ವಿಭಾಗದ ಅಂಚೆ ಅಧೀಕ್ಷಕರು ಮನವಿ ಮಾಡಿದ್ದಾರೆ.





Leave a comment