ದಾವಣಗೆರೆ: ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಬುಳ್ಳಾಪುರ ಗ್ರಾಮದಲ್ಲಿ ರೈತರೊಬ್ಬರ ಜಮೀನಿಗೆ ನುಗ್ಗಿ ಬರೊಬ್ಬರಿ 610 ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ತಾಲೂಕಿನ ಕಿರಣ.ಆರ್ (26) ಬಂಧಿತ ಆರೋಪಿಯಾಗಿದ್ದು, ಆತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಎ-1 ಆರೋಪಿ ಕಿರಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ಹಿನ್ನೆಲೆ:
बुಳ್ಳಾಪುರ ಗ್ರಾಮದ ಶ್ರೀ ಸಿದ್ದೇಶನಾಯ್ಕ.ಕೆ (38) ಎಂಬುವರು ತಮ್ಮ 1 ಎಕರೆ 15 ಗುಂಟೆ ಜಮೀನಿನಲ್ಲಿ 660 ಅಡಿಕೆ ಮರಗಳನ್ನು ಸಮೃದ್ಧವಾಗಿ ಬೆಳೆಸಿದ್ದರು. ಆದರೆ ದಿನಾಂಕ 03/07/2026ರ ಸಂಜೆ 7:00 ಗಂಟೆಯಿಂದ 04/07/2026ರ ಬೆಳಗ್ಗೆ 8:30ರ ಮಧ್ಯದ ಅವಧಿಯಲ್ಲಿ ದುಷ್ಕರ್ಮಿಗಳು ಜಮೀನಿಗೆ ನುಗ್ಗಿ, 50 ಮರಗಳನ್ನು ಬಿಟ್ಟು ಬರೋಬ್ಬರಿ 610 ಅಡಿಕೆ ಗಿಡಗಳನ್ನು ಕಡಿದು ಹಾಕಿ ವಿಕೃತಿ ಮೆರೆದಿದ್ದರು. ಇದರಿಂದ ರೈತನಿಗೆ ಸುಮಾರು ₹5 ರಿಂದ ₹5.5 ಲಕ್ಷ ನಷ್ಟ ಉಂಟಾಗಿತ್ತು. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕ್ಷಣಾರ್ಧದಲ್ಲಿ ಆರೋಪಿಗಳ ಪತ್ತೆ:
ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್.ಹೆಚ್.ಟಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹಗಡೆ ಅವರ ಮಾರ್ಗದರ್ಶನದಲ್ಲಿ, ಸಿಪಿಐ ರಾಘವೇಂದ್ರ ಅವರ ಸಾರಥ್ಯದಲ್ಲಿ ಮಾಯಕೊಂಡ ಪಿಎಸ್ಐ ಅಜಯ.ಎಸ್.ಬಿ ನೇತೃತ್ವದ ವಿಶೇಷ ತಂಡವು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ತನಿಖಾ ತಂಡದ ಕಾರ್ಯಕ್ಕೆ ದಾವಣಗೆರೆ ಎಸ್‌ಪಿ ಶೇಖರ್ ಹೆಚ್.ಟಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಾಯಕೊಂಡ ಠಾಣೆಯಲ್ಲಿ ಗುನ್ನೆ ನಂ 81/2026 ರಡಿ ಕಲಂ 329(3), 324(5) ಬಿ.ಎನ್.ಎಸ್ (BNS) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ.





Leave a comment