ದಾವಣಗೆರೆ: ಭದ್ರಾ ನಾಲೆಗೆ ತಕ್ಷಣ ನೀರು ಹರಿಸುವಂತೆ ಆಗ್ರಹಿಸಿ ಭದ್ರಾ ಅಚ್ಚುಕಟ್ಟು ಭಾಗದ ರೈತರು ನಡೆಸಲಿರುವ ಬೃಹತ್ ಪ್ರತಿಭಟನಾ ಧರಣಿಯ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಕಲಂ 163 ರಡಿಯಲ್ಲಿ ಈ ನಿಯಂತ್ರಣ ಜಾರಿಯಲ್ಲಿರಲಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾದ ಜಿ.ಎಂ. ಗಂಗಾಧರಸ್ವಾಮಿ ಅವರು ಈ ಮುನ್ನೆಚ್ಚರಿಕಾ ಕ್ರಮದ ಆದೇಶ ನೀಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ:
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಕಾರಿಗನೂರು, ಮುಕ್ತನಹಳ್ಳಿ, ಕತ್ತಲಗೆರೆ ಮುಂತಾದ ಗ್ರಾಮಗಳ ರೈತರು ಸುಮಾರು 80 ರಿಂದ 100 ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿ, ಸೆಪ್ಟೆಂಬರ್ 16 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದ್ದರು. ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯನ್ನು ಆಧರಿಸಿ, ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.





Leave a comment