SUDDIKSHANA KANNADA NEWS/ DAVANAGERE/ DATE:27-10-2023
ದಾವಣಗೆರೆ: ವಿರೋಧಪಕ್ಷವಾಗಿ ಪ್ರತಿ ಹಂತದಲ್ಲಿಯೂ ವಿರೋಧ ಮಾಡದೇ ಆಡಳಿತ ಪಕ್ಷಕ್ಕೆ ರಚನಾತ್ಮಕ ಸಲಹೆ ಕೊಡುತ್ತೇವೆ. ಒಳ್ಳೆಯ ಕೆಲಸ ಮಾಡಲು ಪ್ರೇರಣೆಯನ್ನೂ ನೀಡುತ್ತೇವೆ. ತಪ್ಪು ಮಾಡಿದ ಸಂದರ್ಭದಲ್ಲಿ ಆಡಳಿತ ತಪ್ಪು ದಾರಿಗೆ ಹೋದಾಗ ಹಾಗೂ ಜನರಿಗೆ ತೊಂದರೆ ಆಗುತ್ತಿದೆ ಎಂಬ ಸಂದರ್ಭದಲ್ಲಿ ಕಿವಿ ಹಿಂಡಿ ಎಚ್ಚರಿಕೆ ನೀಡಿ ಕೆಲಸ ಮಾಡುವ ಜವಾಬ್ದಾರಿ ನಮ್ಮೆಲ್ಲರ ಇದೆ. ಸಮರ್ಥ ವಿಪಕ್ಷವಾಗಿ ಕೆಲಸ ನಿರ್ವಹಿಸುವೆ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನೂತನ ನಾಯಕ ಕೆ. ಪ್ರಸನ್ನಕುಮಾರ್ ತಿಳಿಸಿದರು.
ಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕರ ಕಚೇರಿ ಶುಭಾರಂಭದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ಕಿಯ ಜನರ ಸಮಸ್ಯೆಗಳ ಧ್ವನಿಯಾಗಿ, ಸಮರ್ಥ ವಿಪಕ್ಷ ಕೆಲಸ ಮಾಡುತ್ತೇವೆ.
ಜನರ ಸಮಸ್ಯೆಗಳ ಪ್ರತಿನಿಧಿಸಿ ಅವರ ಪರವಾಗಿ ಕೆಲಸ ಮಾಡಬೇಕು. ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕೆಂಬ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಇ- ಆಸ್ತಿ, ಕಂದಾಯ ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ಸಾರ್ವಜನಿಕರಿಗೆ ತೊಂದರೆಯಾದರೆ ಕೂಡಲೇ ಧ್ವನಿ ಎತ್ತುತ್ತೇವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಹೋರಾಟ ಮುಂದುವರಿಸುತ್ತೇವೆ. ಇ-ಆಸ್ತಿ, ಕಂದಾಯ ಇಲಾಖೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ವ್ಯವಸ್ಥಿತವಾಗಿ ಸಾಕ್ಷಿಸಮೇತ ಸಾಮಾನ್ಯಸಭೆಯಲ್ಲಿ ಚರ್ಚೆ ಮಾಡಿ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ವಿರೋಧ ಪಕ್ಷ ಎಂದರೆ ಆಡಳಿತ ಪಕ್ಷದ ಎಲ್ಲಾ ಕೆಲಸಗಳನ್ನು ವಿರೋಧ ಮಾಡಬೇಕು, ಟೀಕೆ ಮಾಡಲಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಆದ್ರೆ, ವಿಪಕ್ಷವಾಗಿ ಜವಬ್ದಾರಿ ಅರಿತು, ಜನರಿಗಾಗಿ ಜನರಿಗೋಸ್ಕರ, ಜನರಿಗಾಗಿಯೇ ಎಂಬಂತೆ
ನಡೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಜನರ ಜೊತೆಗೆ ಬೆರೆತು ಸ್ಥಳಕ್ಕೆ ಹೋಗಿ ಸಮಸ್ಯೆ ಕೇಳುವ ಹಾಗೂ ಪರಿಹರಿಸುವ ಸಲುವಾಗಿ ಜನಸಂಪರ್ಕ ಅಥವಾ ಜನಸ್ಪಂದನ ಹೆಸರಿನಲ್ಲಿ ವಾರದಲ್ಲಿ ಒಂದು ದಿನ ಇಲ್ಲವೇ ಎರಡು ದಿನ ಕಾರ್ಯಕ್ರಮ ಆಯೋಜಿಸಬೇಕು ಎಂಬ ಯೋಚನೆ ಇದೆ ಎಂದು ಹೇಳಿದರು.
ಮೇಯರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್ ನವರು ಅಧ್ಯಕ್ಷರಾಗಿದ್ದಾರೆ. ಅಧಿಕಾರಕ್ಕೆ ಬಂದ ಪಕ್ಷ ಬಿಟ್ಟರೆ ಉಳಿದ ಪಕ್ಷಗಳು ವಿಪಕ್ಷಗಳೇ.ಡಾ. ಬಿ. ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣನವರ ಸಮಾನತೆ,
ಕ್ರಾಂತಿ ವಿಚಾರಗಳ ಆದರ್ಶವಾಗಿಟ್ಟುಕೊಂಡು ಪೌರಕಾರ್ಮಿಕರು, ತ್ಯಾಜ್ಯ ಸಂಗ್ರಹ ಮಾಡುವ ಚಾಲಕರು, ಕಾರ್ಮಿಕರು, ಚಾಲಕರು ಸೇರಿದಂತೆ ಐವರನ್ನು ಕರೆದು ದೀಪ ಪ್ರಜ್ವಲನೆ ಮಾಡಿ ಕಚೇರಿ ಶುಭಾರಂಭ ಮಾಡಲಾಗಿದೆ ಎಂದು ತಿಳಿಸಿದರು.
ಜನಪರವಾಗಿ ಹಾಗೂ ಒಳ್ಳೆಯ ಕೆಲಸ ಮಾಡಲು ತಪ್ಪು ಮಾಡಿದವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಹೋರಾಡಲು ಸಿದ್ಧ. ಯಾವುದೇ ಅಳುಕಿಲ್ಲದೇ, ಧೈರ್ಯ, ಹೋರಾಟ ಮಾಡುವಂಥ ಶಕ್ತಿಯನ್ನು ಪಕ್ಷ, ನಾಯಕರು ಹಾಗೂ ಕಾರ್ಯಕರ್ತರು
ನೀಡಿದ್ದಾರೆ. ಒಳ್ಳೆಯ ಕೆಲಸ, ಜನಪರವಾಗಿರಲು ಜನರ ಬೆಂಬಲವೂ ಇರುತ್ತದೆ ಎಂದು ಹೇಳಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಶಿವಯೋಗಿಸ್ವಾಮಿ, ಹರಿಹರ ಶಾಸಕ ಬಿ. ಪಿ. ಹರೀಶ್, ಪಾಲಿಕೆ ಉಪಮೇಯರ್ ಯಶೋಧಾ ಯೋಗೇಶ್ವರ್, ಸದಸ್ಯರಾದ ಕೆ. ಎಂ. ವೀರೇಶ್, ಸೋಗಿ ಶಾಂತಕುಮಾರ್, ಶಿವಾನಂದ, ಬಿಜೆಪಿ ರಾಜ್ಯ ಕಾರ್ಯದರ್ಶಿ ಜಯಮ್ಮ ರುದ್ರೇಶ್ ಸೇರಿದಂತೆ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ನೇಹಿತರು, ಆಪ್ತಬಳಗದವರು ಆಗಮಿಸಿ ನೂತನ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಅವರನ್ನು ಅಭಿನಂದಿಸಿದರು.