SUDDIKSHANA KANNADA NEWS/ DAVANAGERE/ DATE:28-03-2025
ದಾವಣಗೆರೆ: : ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲು ಡಾ. ಬಿ. ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಎದುರಿಸಿದ ಅಪಮಾನ, ಸಾಧಿಸಬೇಕೆಂಬ ಛಲದಿಂದ ಸಂವಿಧಾನ ರೂಪುಗೊಂಡಿತು. ಅಂಬೇಡ್ಕರ್ ಅವರ ಈ ಸಾಧನೆಗೆ ಸತತ ಪರಿಶ್ರಮ, ಸಂಪಾದಿಸಿದ ಜ್ಞಾನದಿಂದ ಸಾಧ್ಯವಾಯಿತು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಮೈಸೂರಿನ ಹೆಸರಾಂತ ಪೂಜಾ ಭಗವತ್ ಸ್ಮಾರಕ ಮಹಾಜನ ವಿದ್ಯಾಕೇಂದ್ರದ ಪ್ರವಾಸಿ ಇಲಾಖೆಯ ಸಭಾಂಗಣದಲ್ಲಿ ನಡೆದ ಐಎಎಸ್, ಕೆಎಎಸ್ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದಿಂದ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಸಿಕ್ಕಿದೆ. ಅಂಬೇಡ್ಕರ್ ಅವರು ಎದುರಿಸಿದ ಕಷ್ಟಗಳು ಅಪಾರ. ಇದರ ಮಧ್ಯೆಯೂ ಅಪಾರ ಸಾಧನೆ ಮಾಡಿದ್ದಾರೆ. ಆಗಿನ ಕಾಲಘಟ್ಟದಲ್ಲಿ30ರಿಂದ 40 ಕೋಟಿ ಜನರಿಗೆ ಆಡಳಿತ ನಡೆಸಲು ಸಾಮಾಜಿಕ ಭದ್ರತೆ, ಆರ್ಥಿಕ ಭದ್ರತೆ, ಶೈಕ್ಷಣಿಕ ಭದ್ರತೆಗೆ ನ್ಯಾಯ ಕೊಟ್ಟವರು. ಅಂಬೇಡ್ಕರ್ ಇತಿಹಾಸ ಓದಿದರೆ ಗೊತ್ತಾಗುವುದೇನೆಂದರೆ ಅವರು ಮಾಡಿರುವ ಜ್ಞಾನ ಸಂಪಾದನೆ. ದೇಶದ ಸಂವಿಧಾನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ಅವರು ಎಂದಿಗೂ ಮರೆಯದ ಮಾಣಿಕ್ಯ ಎಂದು ಬಣ್ಣಿಸಿದರು.
ಇಂದಿನ ಯುವ ಸಮೂಹ ದೊಡ್ಡ ಕನಸು ಕಾಣಬೇಕು. ರಾಜಕಾರಣಿಯಾಗಬೇಕು, ಶಾಸಕರಾಗಬೇಕು, ಸಂಸದರಾಗಬೇಕೆಂಬ ಕನಸು ಇದ್ದೇ ಇರುತ್ತವೆ. 1891 ಏಪ್ರಿಲ್ 14ರಂದು ವಿಶೇಷ ದಿನ. ಡಾ. ಬಿ. ಆರ್. ಅಂಬೇಡ್ಕರ್ ಜನ್ಮದಿನ ಅಂದು. 140 ವರ್ಷಗಳ ಹಿಂದಿನ ಆ ಕಾಲಘಟ್ಟದಲ್ಲಿ ಸಾಮಾಜಿಕ ಪರಿಸ್ಥಿತಿ ಹೇಗಿತ್ತು ಎಂಬುದು ಊಹಿಸಿಕೊಳ್ಳಲು ಆಗದು. ಆಗಿನ ಕಾಲದಲ್ಲಿ ಕೆಳವರ್ಗವದುರ ಕೂರುವಂತಿರಲಿಲ್ಲ. ಮೇಲ್ವರ್ಗದವರ ಮುಂದೆ ನಿಲ್ಲುವಂತಿರಲಿಲ್ಲ. ಅವರು ಬಳಸಿದ್ದ ಕುಡಿಯುವ ನೀರು ಬಳಕೆ ಮಾಡುವಂತಿರಲಿಲ್ಲ. ಶಾಲೆಗೆ ಹೋಗುವಾಗ ಗೋಣಿಚೀಲ ತೆಗೆದುಕೊಂಡು ಹೋಗಬೇಕಾಗಿತ್ತು. ಮೇಲ್ವರ್ಗದವರ ದಬ್ಬಾಳಿಕೆ ಹೆಚ್ಚಾಗಿತ್ತು. ಕೆಳಜಾತಿಗೆ ಹುಟ್ಟಿದವರು ಎಂಬ ಕಾರಣಕ್ಕೆ ಅಂಬೇಡ್ಕರ್ ಪೋಷಕರಿಗೆ ಕಿರುಕುಳ ನೀಡಿದ್ದರು. ಅದನ್ನು ಅಂಬೇಡ್ಕರ್ ಅವರು ಅನುಭವಿಸಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವುದು ಸ್ವಾರ್ಥ, ಪ್ರತಿಷ್ಠೆಗಲ್ಲ. ಲಕ್ಷಾಂತರ ಜನರಿಗೆ ಸೇವೆ ಮಾಡುವ ಉದ್ದೇಶದ ಮಹತ್ವಾಕಾಂಕ್ಷೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವಂಥ ನಿಸ್ವಾರ್ಥ ಮನಸ್ಸಿರಬೇಕು. ಪ್ರಾಮಾಣಿಕತೆ, ನಿರಂತರ ಪ್ರಯತ್ನ ಇದ್ದಾಗ ದೊಡ್ಡ ಕನಸು ಖಂಡಿತವಾಗಿಯೂ ಈಡೇರುತ್ತದೆ ಎಂದು ವಿನಯ್ ಕುಮಾರ್ ಅವರು ತಿಳಿಸಿದರು.
ಸುದೀರ್ಘ ಸಂವಾದದ ನಂತರ ಮೈಸೂರಿನ ಜಿ.ಬಿ. ವಿನಯ್ ಕುಮಾರ್ ಯುವ ಅಭಿಮಾನಿ ಬಳಗದಿಂದ ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸಿ.ಕೆ. ರೇಣುಕಾಚಾರ್ಯ ಮಾತನಾಡಿದರು. ಒಕ್ಕಲಿಗ ಯುವ ಬ್ರಿಗೇಡ್ ಅಧ್ಯಕ್ಷ ನಂಜೇಗೌಡ, ನಂಜುಂಡ, ಸತ್ಯನಾರಾಯಣ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಡಾ. ಭಾವನ ಹಾಗೂ ವಿದ್ಯಾರ್ಥಿಗಳು ಈ ವೇಳೆ ಉಪಸ್ಥಿತರಿದ್ದರು.