SUDDIKSHANA KANNADA NEWS/ DAVANAGERE/ DATE:10-01-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಇಬ್ಬರು ಶಾಸಕರು ಯಾರು ಸಿಎಂ ಆಗಬೇಕೆಂಬ ಅಪೇಕ್ಷೆ ಹೊರಹಾಕಿದ್ದಾರೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮೊದಲಿನಿಂದಲೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ನಡುವೆ ಜಗಳೂರು ಶಾಸಕ ದೇವೇಂದ್ರಪ್ಪ ಅವರು ದಲಿತ ಸಿಎಂ ಆದ್ರೆ ಖುಷಿಯಾಗುತ್ತದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಸದ್ಯಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ನಡೆಸುತ್ತಿದ್ದಾರೆ. ಶಿವಗಂಗಾ ಬಸವರಾಜ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಡಿ. ಕೆ. ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಬಳಿಕ ಡಿಕೆಶಿ ಪರ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಈಗ ಜಗಳೂರು ಶಾಸಕ ಕೆ. ದೇವೇಂದ್ರಪ್ಪರು ದಲಿತ ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಒಂದೇ ಜಿಲ್ಲೆಯಲ್ಲಿ ಶಾಸಕರಿಬ್ಬರ ಭಿನ್ನ ಅಭಿಪ್ರಾಯ ಚರ್ಚೆಗೂ ಕಾರಣ ಆಗಿದೆ.
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರೊಬ್ಬರು ಸಿಎಂ ಆಗುವ ಅಗತ್ಯ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿ ನಾಯಕರೊಬ್ಬರು ರಾಜ್ಯದ ಚುಕ್ಕಾಣಿ ಹಿಡಿದರೆ ತಪ್ಪೇನಿಲ್ಲ. ಬೇಡಿಕೆ ಕೇಳುವುದರಲ್ಲಿ ತಪ್ಪೇನಿದೆ? ಸತೀಶ್ ಜಾರಕಿಹೊಳಿ ಅವರು ಸಿಎಂ ಆದರೆ ಇನ್ನೂ ಜಾಸ್ತಿ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಎಸ್ಸಿ ಅಥವಾ ಎಸ್ಟಿ ಅವರೇ ಸಿಎಂ ಸಿದ್ದರಾಮಯ್ಯರು ಅಧಿಕಾರದಿಂದ ಕೆಳಗಿಳಿದರೆ ಆಗಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ಈಗಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕರೆದಿದ್ದ ಡಿನ್ನರ್ ಪಾರ್ಟಿ ಚರ್ಚೆಗೆ ಕಾರಣವಾಗಿತ್ತು. ಹೈಕಮಾಂಡ್ ಸದ್ಯಕ್ಕೆ ಬ್ರೇಕ್ ಹಾಕಿದೆ. ಈಗ ಜಗಳೂರು ಶಾಸಕರು ಎಸ್ಸಿ, ಎಸ್ಟಿ ಸಮುದಾಯವದರು ಸಿಎಂ ಆಗಬೇಕೆಂದಿರುವುದರಿಂದ
ಇವರ ಬೆಂಬಲ ಡಾ. ಜಿ. ಪರಮೇಶ್ವರ್ ಇಲ್ಲವೇ ಸತೀಶ್ ಜಾರಕಿಹೊಳಿಗೆ ಎಂಬದು ಬಹಿರಂಗವಾಗಿದೆ. ಈ ಮೂಲಕ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕೆಂಬ ಕನಸಿಗೆ ತಣ್ಣೀರೆರಚುವ ತಂತ್ರ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದ.
ಸಹಜವಾಗಿಯೇ ದಲಿತರೊಬ್ಬರು ಸಿಎಂ ಆಗುತ್ತಾರೆಂದರೆ ಖುಷಿಯಾಗುತ್ತದೆ. ಸಾಮಾಜಿಕ ನ್ಯಾಯ ಪರಿಪಾಲಿಸುವ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ದೇವೇಂದ್ರಪ್ಪ ಹೇಳಿದ್ದು, ಒಟ್ಟಿನಲ್ಲಿ ಡಿ. ಕೆ. ಶಿವಕುಮಾರ್ ಪರ ಒಬ್ಬರು ಶಾಸಕರು ಬಹಿರಂಗವಾಗಿಯೇ ಇದ್ದರೆ, ಮತ್ತೊಬ್ಬ ಶಾಸಕರು ಡಿ. ಕೆ. ಶಿವಕುಮಾರ್ ಅವರಿಗಿಂತ ಎಸ್ಸಿ ಇಲ್ಲವೇ ಎಸ್ಟಿ ಸಮುದಾಯದವರು ಆಗಬೇಕೆಂದಿದ್ದಾರೆ. ಒಂದೇ ಜಿಲ್ಲೆಯ ಇಬ್ಬರ ಶಾಸಕರ ಭಿನ್ನ ನಿಲುವು ಕಾರ್ಯಕರ್ತರಲ್ಲಿ ಗೊಂದಲ
ಮೂಡಿಸಿದೆ.