SUDDIKSHANA KANNADA NEWS/ DAVANAGERE/ DATE:25-10-2024
ಬೆಂಗಳೂರು: ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ ಇದುವರೆಗೆ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತಿಲ್ಲ.ಆದ್ದರಿಂದ ನಮ್ಮ ಸರಕಾರವು ಸಾಮಾಜಿಕ ಸಮಾನತೆಯ ತತ್ವದ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200 ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಲಿಷ್ಠ ಬ್ರಿಟೀಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮನ ಹೋರಾಟದಲ್ಲಿ ಜತೆಗಿದ್ದವರು. ದೇಶಪ್ರೇಮ ಬೆಳೆಸಲು ಇವರ ಹೋರಾಟ ಸ್ಫೂರ್ತಿಯಾಗಿದೆ.ಜಾತಿಧರ್ಮ ಬದಿಗಿಟ್ಟು ಪ್ರತಿಯೊಬ್ಬರು ಪರಸ್ಪರ ಪ್ರೀತಿಸುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸಬೇಕು. ಕಿತ್ತೂರು ಸಂಸ್ಥಾನದ ಚನ್ನಮ್ಮ ಕಪ್ಪ ಕಾಣಿಕೆ ಏಕೆ ಕೊಡಬೇಕು ಎಂದು ಪ್ರಶ್ನಿಸುವುದರ ಜತೆಗೆ ದತ್ತು ಮಕ್ಕಳಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಮೊಟ್ಟಮೊದಲ ಬಾರಿಗೆ ಯುದ್ಧ ಸಾರಿ ಜಯಗಳಿಸಿರುವುದು ಹೆಮ್ಮೆಯ ವಿಷಯ ಎಂದರು.
ವಿಜಯೋತ್ಸವದ 200 ವರ್ಷಾಚರಣೆ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಬಾಬಾಸಾಹೇಬ್ ಪಾಟೀಲರ ಒತ್ತಾಯದ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಚನ್ನಮ್ಮನವರ ಜಯಂತ್ಯೋತ್ಸವವನ್ನು ಸರಕಾರದ ವತಿಯಿಂದ ಆಚರಿಸಲು ಆದೇಶ ಮಾಡಿದ್ದು ನಮ್ಮ ಸರಕಾರ; ಅದು ಸಿದ್ದರಾಮಯ್ಯನವರ ಸರಕಾರ ಎಂದು ತಿಳಿಸಿದರು.
ಚನ್ನಮ್ಮನವರನ್ನು ವೈಭವೀಕರಿಸಲು ಜಯಂತ್ಯೋತ್ಸವ ಮಾಡುತ್ತಿಲ್ಲ; ಚನ್ನಮ್ಮನ ಐತಿಹಾಸಿಕ ಹೋರಾಟ ಜನರಿಗೆ ತಿಳಿಸಲು ಆಚರಿಸಲಾಗುತ್ತಿದೆ. ಅದೇ ರೀತಿ ಕಿತ್ತೂರು ವಿಜಯೋತ್ಸವದ 200 ನೇ ವರ್ಷಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಹುಟ್ಟುವಾಗ ವಿಶ್ವಮಾನವ ಬೆಳಿತಾ ಬೆಳಿತಾ ಅಲ್ಪಮಾನವರಾಗುತ್ತಾರೆ. ನಾವು ಬೆಳಿತಾ ಬೆಳಿತಾ ವಿಶ್ವಮಾನವರಾಗಬೇಕಿದೆ ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿ ನಾವು ವಿಶ್ವಮಾನವರಾಗಬೇಕಿದೆ ಎಂದು ತಿಳಿಸಿದರು.
ಅನೇಕರ ತ್ಯಾಗ ಬಲಿದಾನಗಳಿಂದ ನಾವು ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮ ಸಮಾಜ ನಿರ್ಮಿಸಬೇಕಿದೆ. ಬಸವಣ್ಣನವರ ಆಶಯದಂತೆ ಜಾತಿ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ, ಮಹಾಪುರುಷರ ಸ್ಮರಣೆ ಮಾಡುವ ಕೆಲಸವನ್ನು ಮಾಡುತ್ತಿರುವ ಸಿದ್ದರಾಮಯ್ಯನವರು, ಕಿತ್ತೂರು ಚನ್ಮಮ್ಮನವರ ವಿಜಯೋತ್ಸವವನ್ನು ಅದ್ಧೂರಿ ಮತ್ತು ಅರ್ಥಪೂರ್ಣ ಆಚರಣೆಗೆ ಕ್ರಮ ಕೈಗೊಂಡಿದ್ದಾರೆ ಎಂದರು.
ಚನ್ನಮ್ಮಳ ಸ್ವಾಭಿಮಾನಿ ಹೋರಾಟದ ಕುರಿತು ಯುವ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಕಿತ್ತೂರು ವಸತಿ ಶಾಲೆಗೆ ಇಲಾಖೆಯ ವತಿಯಿಂದ 22 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಯಾವುದೇ ಜಾತಿಭೇದವಿಲ್ಲದೇ ಸರ್ವರಿಗೂ ಗ್ಯಾರಂಟಿಯ ಸೌಲಭ್ಯವನ್ನು ತಲುಪಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಸೂರ್ಯ ಮುಳದದ ಸಾಮ್ರಾಜ್ಯ ಎಂದೇ ಹೆಸರು ಗಳಿಸಿದ್ದ ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧ ಸ್ವಾಭಿಮಾನದ ಕಹಳೆ ಮೊಳಗಿಸಿದ್ದ ಚನ್ನಮ್ಮ ದೇಶಕ್ಕಾಗಿ ಮಾಡಿದ ಹೋರಾಟವು ಐತಿಹಾಸಿಕ ಮಹತ್ವ ಹೊಙದಿದೆ ಎಂದರು.
ಚನ್ನಮ್ಮನ ಕೋಟೆಯ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಬಹುಹಂತದ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಪ್ರಾಧಿಕಾರಕ್ಕೆ ಪ್ರಸಕ್ತ ವರ್ಷ ಮೊದಲ ಹಂತದಲ್ಲಿ 50 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಥೀಮ್ ಪಾರ್ಕ ಸೇರಿದಂತೆ ವಿವಿಧ ಅಭಿವೃದ್ಧಿ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನೀರಾವರಿ, ಕೆರೆ ತುಂಬುವ ಯೋಜನೆಗಳು ಚಾಲ್ತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ; ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ಅನೇಕ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.