ಬೆಂಗಳೂರು: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಕನ್ನಡ ನೆಲದಲ್ಲಿ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಈ ಸುದ್ದಿಯನ್ನೂ ಓದಿ: ಬಂಗಾರದ ಆಭರಣವಿದ್ದ ಬ್ಯಾಗ್ ಸುಲಿಗೆ: ಕೆಲವೇ ಗಂಟೆಯಲ್ಲೇ ಆರೋಪಿ ಅಂದರ್!
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಯುಗ ಈಗ ಆರ್ಟಿಫಿಷಿಯಲ್ ತಂತ್ರಜ್ಞಾನದ ಯುಗವಾಗಿ ಮಾರ್ಪಾಡಾಗುತ್ತಿದೆ. ಇದರಿಂದ ಉದ್ಯೋಗ ನಷ್ಟವಾಗಬಹುದು ಎಂಬ ಆತಂಕವೂ ಎದುರಾಗಿದೆ. ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸುವ ಕಾರ್ಯವನ್ನೂ ನಮ್ಮ ಸರ್ಕಾರ ಮಾಡುತ್ತಿದೆ. ಇದರ ಭಾಗವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಉದ್ಯೋಗ ನಷ್ಟವಾಗದಂತೆ ನಮ್ಮ ಭಾಷೆಯನ್ನು ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದವಾಗಿದೆ. ಕನ್ನಡವನ್ನು ಹೊಸ ತಂತ್ರಜ್ಞಾನದ ಭಾಷೆಯನ್ನಾಗಿಸಲು ವಿದ್ವಾಂಸರು, ತಾಂತ್ರಿಕ ತಜ್ಞರು ಮುಂದಾಗಿ ಎಂದು ಕರೆ ನೀಡಿದರು.
*1956 ರಂದು ಏಕೀಕರಣಗೊಂಡ ನಮ್ಮ ಕರ್ನಾಟಕ ರಾಜ್ಯ ಉದಯವಾಗಿ ನವೆಂಬರ್ 1, 2025 ಕ್ಕೆ 69 ವರ್ಷ ಪೂರೈಸಿ 70 ನೇ ವರ್ಷಕ್ಕೆ ಮುನ್ನಡೆಯುತ್ತಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಏಕೀಕರಣ ಹೋರಾಟದಲ್ಲಿ ಹುತಾತ್ಮರಾದ ಮೈಸೂರಿನ ವಿದ್ಯಾರ್ಥಿ ರಾಮಸ್ವಾಮಿ, ಬಳ್ಳಾರಿಯ ರಂಜಾನ್ ಸಾಬ್ ಮುಂತಾದವರಿಗೆ ತಲೆಬಾಗಿ ನಮಿಸುತ್ತೇನೆ.
ಏಕೀಕರಣ ಚಳುವಳಿಯ ಬೀಜಗಳನ್ನು ಬಿತ್ತಿ, ಅದನ್ನು ಮುನ್ನಡೆಸಿದ ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ ಮುಂತಾದ ಮಹನೀಯರನ್ನು ಹೃದಯ ತುಂಬಿ ಸ್ಮರಿಸುತ್ತೇನೆ. ಇವರೆಲ್ಲರ ಹೋರಾಟದ ಫಲವೆ ಇಂದಿನ ಕರ್ನಾಟಕ.
‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಕನ್ನಡದ ಸಾಹಿತ್ಯ ಸಂಪತ್ತು ಸಾಕಷ್ಟು ಸಮೃದ್ಧಗೊಂಡಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ ಎಂದು ತಿಳಿಸಿದರು.
ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿ ಹಾಗೂ ಬಹು ಜನಾಂಗಗಳು ಒಟ್ಟುಗೂಡಿ ಬದುಕುವ ತತ್ವಗಳನ್ನು ನಮ್ಮ ಹಿರಿಯರು ಕಂಡುಕೊAಡಿದ್ದು, ಹಿಂದಿನಿAದಲೂ ಎಲ್ಲರೂ ಒಟ್ಟಾಗಿ ಬಾಳಿ ಬದುಕಿ ನಾಡನ್ನು ಕಟ್ಟಿ ನಿಲ್ಲಿಸಿ ಸಮೃದ್ಧಗೊಳಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.
ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸವುಳ್ಳ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಶಿಕ್ಷಣದಲ್ಲಿ ಕನ್ನಡ ಭಾಷೆಯ ನಿರ್ಲಕ್ಷö್ಯವು ಹಲವು ಸಮಸ್ಯೆಗಳನ್ನು ಹುಟ್ಟಿ ಹಾಕಿದೆ. ಜಗತ್ತಿನ ಮುಂದುವರೆದ ಭಾಷೆಗಳಿಗೆ ಇಲ್ಲದ ಬಿಕ್ಕಟ್ಟು ಇಂದು ಕನ್ನಡದಂಥ ಭಾಷೆಗೆ ಬಂದಿದೆ. ಮುಂದುವರೆದ ದೇಶಗಳ ಮಕ್ಕಳು ತಮ್ಮ ತಾಯಿ ನುಡಿಗಳಲ್ಲಿಯೆ ಯೋಚಿಸುತ್ತಾರೆ, ಕಲಿಯುತ್ತಾರೆ ಮತ್ತು ಕನಸು ಕಾಣುತ್ತಾರೆ. ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ಇಂಗ್ಲೀಷು, ಹಿಂದಿಯAಥ ಭಾಷೆಗಳು ನಮ್ಮ ಮಕ್ಕಳ ಪ್ರತಿಭೆಯನ್ನು ಭಾಷೆಯ ಕಾರಣಕ್ಕೆ ದುರ್ಬಲಗೊಳಿಸುತ್ತಿವೆ. ಹಾಗಾಗಿ ಮಾತೃಭಾಷೆಯಲ್ಲಿಯೆ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸೂಕ್ತ ಕಾನೂನುಗಳನ್ನು ತರಬೇಕಾದ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರವೂ ಗಮನ ಹರಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಒಂದು ನಾಡನ್ನು ಕಟ್ಟುವುದು ಸರಳವಾದ ಸಂಗತಿಯಲ್ಲ. ನಾಡೊಂದರ ಸಮಗ್ರ ಅಭಿವೃದ್ಧಿಯೆಂದರೆ ರಸ್ತೆ, ಸೇತುವೆ, ವಿದ್ಯುತ್, ರೈಲು, ವಿಮಾನ, ಸುಸಜ್ಜಿತ ಕಟ್ಟಡಗಳಷ್ಟೆ ಅಲ್ಲ. ಆ ನಾಡಿನ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ, ತಮ್ಮ ಜೊತೆಯಲ್ಲಿನ ಮಕ್ಕಳ ಭಾಷೆ, ಬದುಕು, ಧರ್ಮ, ಜಾತಿ ಹಾಗೂ ಇನ್ನಿತ್ಯಾದಿ ಭಿನ್ನತೆಗಳನ್ನು ಸಹನೆಯಿಂದ ನೋಡುವುದನ್ನು ಕಲಿಸುವುದೂ ಮುಖ್ಯ. ಇದರ ಜೊತೆಗೆ ಜಗತ್ತಿನ ಮುಖ್ಯ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಅನ್ವೇಷಣೆಗಳಿಗೆ ಸರಿಸಾಟಿಯಾಗಿ ನಿಲ್ಲುವಂಥ ರೀತಿಯಲ್ಲಿ ಆಲೋಚನೆಗಳನ್ನು ಕಲಿಸುವ ವಾತಾವರಣವೂ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.






