SUDDIKSHANA KANNADA NEWS/ DAVANAGERE/ DATE:17-09-2023
ಬೆಂಗಳೂರು: ನನ್ನನ್ನು ಎಲ್ಲರೂ ಎರಡನೇ ದೇವರಾಜ ಅರಸು ಅಂತಾರೆ. ಆದರೆ, ದೇವರಾಜ ಅರಸು ದೇವರಾಜ ಅರಸುನೇ ಸಿದ್ದರಾಮಯ್ಯ ಸಿದ್ದರಾಮಯ್ಯನೇ. ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳುವ ಮೂಲಕ ಬಿ. ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ವಿರೋಧಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸುದ್ದಿಯನ್ನೂ ಓದಿ:
ಕೆಲವರು ನನ್ನನ್ನು ಎರಡನೇ ದೇವರಾಜು ಅರಸು ಅಂತಾರೆ. ಅದು ಸಾಧ್ಯವಿಲ್ಲ. ನಾನು ಅರಸು ಆಗಲು ಸಾಧ್ಯವಿಲ್ಲ. ಅರಸು, ಇಂದಿರಾಗಾಂಧಿ, ನೆಹರೂ ಎಲ್ಲರೂ ಭಿನ್ನವಾಗಿದ್ದರು. ಆದರೆ ಇವರೆಲ್ಲರ ಸಾಮಾಜಿಕ ಕೊಡುಗೆಗಳು ಅಪಾರ. ಯಾರ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಒಬ್ಬರು ಇನ್ನೊಬ್ಬರಾಗಲು ಸಾಧ್ಯವಿಲ್ಲ. ಹಾಗೆಯೇ ನಾನು ದೇವರಾಜ ಅರಸು ಆಗಲು ಸಾಧ್ಯವಿಲ್ಲ. ನಾವು ರೂಪಿಸುವ ಕಾಳಜಿ ಮತ್ತು ಕಾರ್ಯಕ್ರಮಗಳಲ್ಲಿ ಸಾಮಾಜಿಕ ನ್ಯಾಯ ಇರುತ್ತದೆ. ಎಲ್ಲಾ ಹಿಂದುಳಿದ ಜಾತಿ, ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆದುಕೊಂಡು ಮುಂದುವರೆದಾಗ ಮಾತ್ರ ಇಡೀ ಸಮಾಜ ಮುಂದುವರೆಯುತ್ತದೆ. ಕೆಲವೇ ಜಾತಿ-ಸಮುದಾಯಗಳು ಅವಕಾಶಗಳನ್ನು ಪಡೆದುಕೊಂಡು ಉಳಿದವುಗಳು ಅವಕಾಶ ವಂಚಿತರಾಗುತ್ತಿದ್ದರೆ ಅದನ್ನು ಪ್ರಗತಿ ಪಥದಲ್ಲಿರುವ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದು Siddaramaiah ಅಭಿಪ್ರಾಯಪಟ್ಟರು.
ಬಿಂಬಾರಾಯ್ಕರ್, ರಘು ಆಚಾರ್ಯ ಸೇರಿ ವಿಶ್ವಕರ್ಮ ಸಮುದಾಯದ ಹಲವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಅಧಿಕಾರವನ್ನು ಒದಗಿಸಿಕೊಟ್ಟಿದೆ. ರಘು ಆಚಾರ್ಯ ದುಡುಕಿ ನಮ್ಮನ್ನೆಲ್ಲಾ ಬಿಟ್ಟು ಕಾಂಗ್ರೆಸ್ ತೊರೆದರು.
ನಾನು ಎಷ್ಟು ಹೇಳಿದರೂ ಕೇಳಲಿಲ್ಲ ಎಂದರು.
ಕಾಂಗ್ರೆಸ್ ಪ್ರತಿಯೊಂದು ಜಾತಿ, ಸಮುದಾಯಗಳಿಗೂ ಅವಕಾಶ ಮತ್ತು ಅಧಿಕಾರವನ್ನು ನಿರಂತರವಾಗಿ ಒದಗಿಸುತ್ತಲೇ ಬಂದಿದೆ. ಆ ಮೂಲಕ ಹಿಂದುಳಿದ ಸಮುದಾಯಗಳಿಗೆ, ದಲಿತ ಸಮುದಾಯಗಳಿಗೂ ಶಕ್ತಿ ತುಂಬುತ್ತಿದೆ. ಒಂದು ಕೋಟಿ ರೂಪಾಯಿವರೆಗಿನ ಕಾಂಟ್ರಾಕ್ಟ್ ಕೆಲಸಗಳಿಗೆ ಮೀಸಲಾತಿ ಒದಗಿಸಿದ್ದು ನಾವೆ ತಾನೇ ಎಂದು ನೆನಪಿಸಿದ ಮುಖ್ಯಮಂತ್ರಿಗಳು ನನಗೆ ಅಧಿಕಾರ ಎನ್ನುವುದು ಸಾಮಾಜಿಕ ನ್ಯಾಯವನ್ನು ಆಚರಿಸುವ, ಪಾಲಿಸುವ ಒಂದು ಸಾಧನ ಎಂದು Siddaramaiah
ವಿವರಿಸಿದರು.
ವಿಶ್ವಕರ್ಮ ಸಮುದಾಯದ ಮಕ್ಕಳಿಗೆ ಶಾಲೆ, ಹಾಸ್ಟೆಲ್ ಗಳನ್ನು ನಿರ್ಮಿಸುವ ಕಾರಣಕ್ಕೆ ಸರ್ಕಾರದಿಂದ ಜಾಗ ಕೇಳಿದ್ದೀರಿ. ಎಲ್ಲಾ ಸಮುದಾಯಗಳೂ ಜಾಗ ಪಡೆದುಕೊಂಡಿವೆ. ನೀವೂ ಪಡೆದುಕೊಳ್ಳಿ. ನಮ್ಮ ಸರ್ಕಾರ ನಿಮಗೂ ಜಾಗ ಒದಗಿಸುತ್ತದೆ ಮಕ್ಕಳನ್ನು ಹೆಚ್ಚೆಚ್ಚು ಶಿಕ್ಷಿತರನ್ನಾಗಿ ಮಾಡಿ ಎಂದು Siddaramaiah ಹಾರೈಸಿದರು.
ವಿಶ್ವಕರ್ಮ ನಿಗಮಕ್ಕೆ ಮೊದಲಿನಿಂದಲೂ ಹೆಚ್ಚು ಅನುದಾನ ಕೊಡುತ್ತಾ ಬಂದಿರುವವರು ನಾವೇ. ಈಗ ಇನ್ನಷ್ಟು ಹೆಚ್ಚಿಸಬೇಕು ಎನ್ನುವ ಬೇಡಿಕೆ ಇದೆ. ಆ ಬಗ್ಗೆ ಪರಿಶೀಲಿಸಲಾಗುವುದು. ಚುನಾವಣೆ ಬಂದಾಗ ಭಾಷಣಗಳಲ್ಲಿ ಕಾಳಜಿಗಳು ಕೇಳಿಸುತ್ತವೆ. ಆದರೆ, ಯಾರಿಗೆ-ಯಾವ ಪಕ್ಷಕ್ಕೆ ನಿಜವಾದ ಬದ್ಧತೆ ಇದೆ ಎನ್ನುವುದನ್ನು ಗುರುತಿಸಿ ತೀರ್ಮಾನ ತೆಗೆದುಕೊಳ್ಳಿ. ಕಾಳಜಿ, ಬದ್ಧತೆ ಇಲ್ಲದವರ ಕೈಗೆ ಅಧಿಕಾರ ಕೊಟ್ಟು ಸಮಾಜಕ್ಕೆ ಒಳ್ಳೆಯದು ಆಗಬೇಕು ಎಂದು ತಲೆ ಚಚ್ಚಿಕೊಂಡರೆ ಸಾಧ್ಯವಿಲ್ಲದ ಮಾತು. ಆದ್ದರಿಂದ ಸಾಮಾಜಿಕ ನ್ಯಾಯವನ್ನು ಯಾರು, ಯಾವ ಪಕ್ಷದವರು ಪಾಲಿಸುತ್ತಿದ್ದಾರೆ ಎನ್ನುವುದನ್ನು ಪ್ರಾಮಾಣಿಕವಾಗಿ ಗ್ರಹಿಸಿ ಎಂದು Siddaramaiah ಕರೆ ನೀಡಿದರು.
ಮಧುಗಿರಿ ನಿಟ್ಟರಹಳ್ಳಿ ಅಭಯಹಸ್ತೆ ಆದಿಲಕ್ಷ್ಮಿ ಸಂಸ್ಥಾನ ಮತ್ತು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ಡಾ. ನೀಲಕಂಠಚಾರ್ಯ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.