SUDDIKSHANA KANNADA NEWS/ DAVANAGERE/ DATE:27-01-2025
ಬೆಂಗಳೂರು: ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ದಾಖಲಿಸಲೇಬೇಕು. ಯಾರಾದರೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಅಡ್ವೊಕೇಟ್ ಜನರಲ್ ಜೊತೆ ಚರ್ಚಿಸಿ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹಲವು ದಶಕಗಳಿಂದ ಶೇಕಡಾ 3ಕ್ಕಿಂತ ಹೆಚ್ಚಾಗಿಲ್ಲ. ಈ ಕಾರಣಕ್ಕೂ ನಾನು ಡಿಸಿಆರ್ ಇ ಸೆಲ್ ಗಳಿಗೆ ಪೊಲೀಸ್ ಠಾಣೆ ಶಕ್ತಿ ನೀಡಿದ್ದಾಗಿದೆ. ಇನ್ನೂ ಶಿಕ್ಷೆ ಪ್ರಮಾಣ ಹೆಚ್ಚಾಗದಿದ್ದರೆ ಹೇಗೆ? ಪ್ರಕರಣಗಳ ತನಿಖೆಯ ಗುಣಮಟ್ಟದ ಬಗ್ಗೆ ಗಮನ ಹರಿಸಲು ಸಿಎಂ ಸೂಚಿಸಿದರು.
ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ, ಕೌಂಟರ್ ಕೇಸ್ ಗಳಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಾಗಿದೆಯೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಅಸಮಾಧಾನದಿಂದ ಸಭೆಯಲ್ಲಿ ಪ್ರಶ್ನಿಸಿದರು. 3 ವಿಶೇಷ ನ್ಯಾಯಾಲಯಗಳಿಗೆ ಮಾತ್ರ ಅನುಮತಿ ಸಿಕ್ಕಿದೆ. ಇನ್ನೂ 24 ವಿಶೇಷ ನ್ಯಾಯಾಲಯಗಳಿಗೆ ಅನುಮತಿ ದೊರೆತಿಲ್ಲ ಎಂದು ಮುಖ್ಯಮಂತ್ರಿಗಳ ಗಮನ ಸೆಳೆದರು. ಬಳಿಕ ಈ ಬಗ್ಗೆ ತಾವು ತೀವ್ರವಾಗಿ ಗಮನಿಸಿ ಬಾಕಿ ನ್ಯಾಯಾಲಯಗಳಿಗೆ ಬೇಗ ಅನುಮತಿ ಸಿಗುವ ದಿಕ್ಕಿನಲ್ಲಿ ಗಮನ ಹರಿಸುವುದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಿಳಿಸಿದರು.